ಎರಡು ತಿಂಗಳಲ್ಲಿ ಜಾಲತಾಣ ಕನ್ನಡೀಕರಣಗೊಳಿಸಿ- ಸಹಕಾರ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್ ನಾಗಾಭರಣ ತಾಕೀತು..

ಬೆಂಗಳೂರು,ಜೂ,30,2020(www.justkannada.in): ರಾಜ್ಯದ ಜೀವನಾಡಿಯಾದ ಸಹಕಾರ ಇಲಾಖೆ ಮತ್ತು ಅದರ ಅಧೀನದಲ್ಲಿ ಬರುವ ಎಲ್ಲಾ ಇಲಾಖೆಗಳಲ್ಲೂ ಇನ್ನೆರಡು ತಿಂಗಳಲ್ಲಿ ಆಡಳಿತದಲ್ಲಿ ಶೇ.100ರಷ್ಟು ರಾಜ್ಯ ಸರ್ಕಾರದ ಭಾಷಾನೀತಿಯನ್ನು ಅನುಷ್ಠಾನಗೊಳಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ತುಷಾರ್ ಗರಿನಾಥ್ ಅವರಿಗೆ ಸೂಚಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಹಕಾರ ಇಲಾಖೆ ಹಾಗೂ ಅಧೀನ ಇಲಾಖೆಗಳ ಮುಖ್ಯಸ್ಥರೊಂದಿಗೆ ಕನ್ನಡ ಪ್ರಗತಿ ಪರಿಶೀಲನೆ ಸಂಬಂಧ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಟಿ.ಎಸ್ ನಾಗಾಭರಣ, ಸಹಕಾರ ಚಳುವಳಿ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಸಹಕಾರ ಇಲಾಖೆ ಸಹಕಾರ ಚಳುವಳಿಯ ಆಶಯಕ್ಕೆ ಮಾರಕವಾಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕಿರುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಸಹಕಾರ ಇಲಾಖೆಯೊಂದಿಗೆ ಬಹುತೇಕ ಹಳ್ಳಿಯವರು, ರೈತರು, ಕೆಳವರ್ಗದವರು ಹೆಚ್ಚಾಗಿ ವ್ಯವಹರಿಸುವುದರಿಂದ ಅವರಿಗೆ ಎಲ್ಲ ಹಂತದಲ್ಲೂ ಕನ್ನಡದಲ್ಲಿ ಮಾಹಿತಿಯನ್ನು ನೀಡುವುದು ಸಹಕಾರ ಇಲಾಖೆ, ಅಧೀನ ಇಲಾಖೆಗಳು ಹಾಗೂ ಅದರ ವ್ಯಾಪ್ತಿಗೆ ಬರುವ ಮಹಾಮಂಡಳಗಳು, ಸಂಸ್ಥೆಗಳ ಗುರುತರ ಜವಾಬ್ದಾರಿಯಾಗಿದೆ. ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿನ ಬಹುತೇಕ ಇಲಾಖೆ, ಮಂಡಳಗಳ ಜಾಲತಾಣಗಳು ಈಗಲೂ ಅಂಗ್ಲಭಾಷೆಯಲ್ಲಿವೆ. ಇನ್ನೂ ಕೆಲವು ಇಲಾಖೆಗಳು ಗೂಗಲ್ ಅನುವಾದವನ್ನು ಮಾಡಿರುವುದರಿಂದ ಕನ್ನಡವನ್ನು ತಪ್ಪಾಗಿ ಬರೆಯಲಾಗಿದೆ. ಸರ್ಕಾರದ ಸಲಹೆಯಂತೆ ಮಾದರಿ ಜಾಲತಾಣವನ್ನಾಗಿ ಮರುರೂಪಿಸುವಂತೆ ತಾಕೀತು ಮಾಡಿದ ಅವರು ಇವೆಲ್ಲವನ್ನು ತಿದ್ದಿಕೊಳ್ಳದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ರಾಜ್ಯದಲ್ಲಿ ಒಟ್ಟು 3.72 ಲಕ್ಷ ಸಂಘಗಳಿದ್ದು, ಬಹುತೇಕ ಸಂಘಗಳ ನೋಂದಣಿ ಆಂಗ್ಲಭಾಷೆಯಲ್ಲಿರುವುದು ದುರ್ದೈವದ ಸಂಗತಿ ಇವುಗಳನ್ನೆಲ್ಲ ಕನ್ನಡಕ್ಕೆ ತರ್ಜುಮೆ ಮಾಡುವಂತೆ ಸಲಹೆ ನೀಡಿದರು.

ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರು ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸಲಹೆಗಳನ್ವಯ ಜಾಲತಾಣಗಳನ್ನು ಸಂಪೂರ್ಣವಾಗಿ ಕನ್ನಡೀಕರಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಆಡಳಿತದಲ್ಲಿ ಕನ್ನಡವನ್ನು ಕಡೆಗಣಿಸಿರುವ ಅಪೆಕ್ಸ್ ಬ್ಯಾಂಕ್ ಮತ್ತು ಕೆಎಂಎಫ್ ಗೆ ಕನ್ನಡ ಅನುಷ್ಠಾನಗೊಳಿಸಲು ಸೂಚಿಲಾಗುವುದು ಹಾಗೂ ಸಹಕಾರ ಇಲಾಖೆಯ ಅಧೀನ ಇಲಾಖೆಗಳಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನಗೊಳಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆಮುರಳಿಧರ, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಸಹಕಾರ ಸಂಘಗಳ ನಿಬಂಧಕರಾದ ಪ್ರಸನ್ನಕುಮಾರ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರಾದ ಪ್ರಕಾಶ್ ಮಜ್ಜಿಗೆ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿ ಪಾಳ್ಗೊಂಡಿದ್ದರು.

Key words: website –kannada-Kannada- Co-operative- Department –TS Nagabarana