ಜಲಸಂಗ್ರಹಣೆ ನಾವು ಎಡವುತ್ತಿರುವುದೆಲ್ಲಿ?

kannada t-shirts

ಬೆಂಗಳೂರು:ಜುಲೈ-20: ಕಳೆದ ವರ್ಷ ಅಂದರೆ 2018ರ ಜುಲೈ-ಆಗಸ್ಟ್ ತಿಂಗಳಿನಲ್ಲಿ ಜಲಪ್ರವಾಹ ಕಂಡ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡು, ಅದರಲ್ಲಿಯೂ ಮುಖ್ಯವಾಗಿ ಮಹಾನಗರಗಳಾದ ಬೆಂಗಳೂರು, ಚೆನ್ನೈನಲ್ಲಿ ಇದೀಗ ನೀರಿಗೆ ಹಾಹಾಕಾರವೆದ್ದಿದೆ. ಕಳೆದ ವರ್ಷ ಕಾವೇರಿ, ಕಬಿನಿ, ಹೇಮಾವತಿ ನದಿಗಳು ಉಕ್ಕಿ ಹರಿದಿದ್ದು, ಕೃಷ್ಣರಾಜ ಸಾಗರ ಮತ್ತು ಮೆಟ್ಟೂರು ಜಲಾಶಯಗಳು ಮೂರು ಬಾರಿ ಭರ್ತಿಯಾಗಿದ್ದವು. ಹೆಚ್ಚಿನ ನೀರು ಸಮುದ್ರಕ್ಕೆ ಬಿಡಲಾಗಿತ್ತು. ಆದರೆ, 2019ರ ಏಪ್ರಿಲ್-ಮೇ ತಿಂಗಳಿನಿಂದಲೇ ಈ ಭಾಗಗಳಲ್ಲಿ ನೀರಿನ ಅಭಾವ ಕಾಣುತ್ತಿದೆ. ಅಲ್ಲದೆ, ಬಹುತೇಕ ಪ್ರತೀ ವರ್ಷ ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಬೆಂಗಳೂರು ನಗರದಲ್ಲಿ ಭಾರಿ ಮಳೆ ಆಗುವುದು ವಾಡಿಕೆ. ಡಿಸೆಂಬರ, ಜನವರಿ ತಿಂಗಳಲ್ಲಿ ಚೆನ್ನೈನಲ್ಲಿ ಭಾರಿ ಮಳೆ ಮತ್ತು ಪ್ರವಾಹ. ಆದರೆ ಈ ಎಲ್ಲ ನೀರು ಎಲ್ಲಿ ಹೋಗುತ್ತದೆ? ಆ ನೀರನ್ನು ಯಾಕೆ ಸಂಗ್ರಹಿಸುತ್ತಿಲ್ಲ? ಕಾರಣ ಹುಡುಕಿ ಈಗಲಾದರೂ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು.

ಮಳೆಚಕ್ರಗಳನ್ನು ಗಮನಿಸಿದರೆ ಪ್ರತೀ ಮೂರರಿಂದ ನಾಲ್ಕು ವರ್ಷಗಳಿಗೊಮ್ಮೆ, ದಕ್ಷಿಣ ಮತ್ತು ಉತ್ತರ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗುತ್ತದೆ. 2015 ಮತ್ತು 2018ರಲ್ಲಿ ಕೂಡ ಭಾರಿ ಮಳೆಯಾಗಿತ್ತು. ಸರಾಸರಿಗಿಂತ ಎರಡು-ಮೂರು ಪಟ್ಟು ಹೆಚ್ಚಿನ ಮಳೆಯಾದಾಗ ಆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಈ ಎರಡೂ ರಾಜ್ಯಗಳಲ್ಲಿ ಇಲ್ಲ ಎಂಬುದು ಕಹಿಸತ್ಯ. ಕಳೆದ ವರ್ಷದ ಹೆಚ್ಚುವರಿ ನೀರು ಸಂಗ್ರಹವಾಗಿದಿದ್ದರೆ ಇನ್ನೂ ಎರಡು ವರ್ಷ ಮರೆ ಕೊರತೆ ಇದ್ದರೂ ನಿಭಾಯಿಸಬಹುದಾಗಿತ್ತು. ಸರ್ಕಾರಗಳಲ್ಲಿ ಮುಂದಾಲೋಚನೆ, ದೂರದೃಷ್ಟಿಯ ಕೊರತೆ ಮತ್ತು ಸರಿಯಾದ ಯೋಜನೆಗಳು ಇಲ್ಲದಿರುವುದು ಇದಕ್ಕೆ ಕಾರಣ.

ಕಾವೇರಿ ನದಿಪಾತ್ರದ ಉದಾಹರಣೆಯನ್ನೇ ಗಮನಿಸಿದರೆ ಕೊಡಗು ಜಿಲ್ಲೆಯಲ್ಲಿ ಬೀಳುವ ಮಳೆಯನ್ನೇ ಕರ್ನಾಟಕದ ಹಲವು ಜಿಲ್ಲೆಗಳು ನಂಬಿಕೊಂಡಿವೆ. ಕೊಡಗಿನಲ್ಲಿ ಭಾರಿ ಮಳೆಯಾದರೆ ಬೆಂಗಳೂರು, ಚೆನ್ನೈ ಮಹಾನಗರಗಳ ಜನರಿಗೆ ಸಂತಸ. ಆದರೆ, ಬೆಂಗಳೂರು, ಚೆನ್ನೈ ನಗರಗಳಲ್ಲಿ ಭಾರಿ ಮಳೆಯಾದರೆ ಅಲ್ಲಿನ ಜನರಿಗೆ ಗಂಡಾಂತರ. ಪುಟ್ಟ ಕೊಡಗು ಜಿಲ್ಲೆ ಮಾತ್ರ ಈ ಎರಡೂ ರಾಜ್ಯಗಳಿಗೆ ನೀರು ಒದಗಿಸುವ ಕಾರ್ಖಾನೆಯೇ? ನಗರಗಳು ತಮ್ಮಲ್ಲಿ ಬೀಳುವ ಮಳೆನೀರನ್ನು ಯಾಕೆ ಸಂಗ್ರಹಿಸುತ್ತಿಲ್ಲ? ಮನೆಗಳಲ್ಲಿ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಫರ್ವನು ಹೊರಡಿಸುವ ನಗರಪಾಲಿಕೆಗಳು ಮತ್ತು ಸರ್ಕಾರ ಅತಿವೃಷ್ಟಿಯ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಯಾಕೆ ಹೊಸ ಜಲಾಶಯಗಳನ್ನು ನಿರ್ವಿುಸುತ್ತಿಲ್ಲ?

ಎರಡೂ ರಾಜ್ಯಗಳು ಮತ್ತು ಕಾವೇರಿ ನದಿ ನೀರು ನಿರ್ವಹಣೆ ಪ್ರಾಧಿಕಾರ ಮನಸ್ಸು ಮಾಡಿದರೆ ಇದು ಸಾಧ್ಯ. ಸದ್ಯದಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆಯಾದರೆ ಮೊದಲು ಕೃಷ್ಣರಾಜಸಾಗರ ಜಲಾಶಯ ತುಂಬುತ್ತದೆ. ನಂತರ ಅಲ್ಲಿಂದ ಬಿಡುವ ನೀರು ಮೆಟ್ಟೂರು ಡ್ಯಾಂಗೆ ಹೋಗಿ ಸೇರುತ್ತದೆ. ಅದೂ ತುಂಬಿದರೆ ಹೆಚ್ಚುವರಿ ನೀರು ಸಮುದ್ರದ ಪಾಲಾಗುತ್ತಿದೆ. ಅದರ ಬದಲು ಎರಡೂ ರಾಜ್ಯಗಳು ಎರಡು ಹೆಚ್ಚುವರಿ ಜಲಾಶಯಗಳನ್ನು ನಿರ್ವಿುಸಿ, ಅತಿವೃಷ್ಟಿಯ ಸಮಯದಲ್ಲಿ ನೀರು ಸಂಗ್ರಹಿಸಿ, ಅನಾವೃಷ್ಟಿಯ ಸಂದರ್ಭದಲ್ಲಿ ಆ ನೀರನ್ನು ಉಪಯೋಗಿಸಿ ಕೊಳ್ಳಬಹುದು.

ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹೊಗೇನಕಲ್ ಬಳಿ ಜಲಾಶಯ ನಿರ್ವಿುಸಲು ಹೊರಟಿರುವುದು ಸ್ವಾಗತಾರ್ಹ. ಇದರೊಂದಿಗೆ ತಮಿಳುನಾಡು ಸರ್ಕಾರ ಸಹ ಮೆಟ್ಟೂರು ಜಲಾಶಯದ ನಂತರ ಇನ್ನೊಂದು ಹೆಚ್ಚುವರಿ ಜಲಾಶಯ ನಿರ್ವಿುಸಬೇಕು. ಈ ಜಲಾಶಯಗಳ ನೀರಿನ ಸಂಗ್ರಹಣೆ ಮತ್ತು ಬಳಕೆಯನ್ನು ಈ ರೀತಿಯಾಗಿ ವಿಶ್ಲೇಷಿಸಬಹುದು (ಅತಿವೃಷ್ಟಿಯ ವರ್ಷಗಳಲ್ಲಿ).

ಕಾವೇರಿ ಪಾತ್ರದಲ್ಲಿ ಬೀಳುವ ಮಳೆಯ ನೀರನ್ನು ಮೊದಲು ಕೆ.ಆರ್.ಎಸ್. ಜಲಾಶಯದಲ್ಲಿ ತುಂಬಿಸಿ, ಉಳಿದ ನೀರನ್ನು ತಮಿಳುನಾಡು ಮೆಟ್ಟೂರು ಜಲಾಶಯಕ್ಕೆ ಹರಿಸಬೇಕು. ಹೊಗೇನಕಲ್ ಜಲಾಶಯದಲ್ಲಿ ನೀರು ನಿಲ್ಲಿಸಬಾರದು.
ನಂತರ ಮೆಟ್ಟೂರು ಡ್ಯಾಂನಲ್ಲಿ ನೀರು ತುಂಬಿ ಜಲಾಶಯ ಭರ್ತಿಯಾದ ನಂತರ ಕರ್ನಾಟಕ ತಮಿಳುನಾಡಿಗೆ ಬಿಡುವ ನೀರು ನಿಲ್ಲಿಸಿ, ಹೊಗೇನಕಲ್ ಜಲಾಶಯವನ್ನು (ಹೆಚ್ಚುವರಿ ನೀರು) ತುಂಬಿಸಬೇಕು.
ಹೊಗೇನಕಲ್ ಜಲಾಶಯದ ನೀರನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ಚಟುವಟಿಕೆಗಳಿಗೆ ಉಪಯೋಗಿಸಬಾರದು. ನೀರಿನ ಕೊರತೆ ಉಂಟಾದಲ್ಲಿ ಮಾತ್ರ ಬಳಸಬೇಕು.
ಹೊಗೇನಕಲ್ ಜಲಾಶಯ ತುಂಬಿದ ನೀರು ತಮಿಳುನಾಡಿಗೆ ಹರಿಸಿ, ಮೆಟ್ಟೂರು ಡ್ಯಾಂ ಕೂಡ ತುಂಬಿದ ನಂತರ, ತಮಿಳುನಾಡಿನಲ್ಲಿ ನಿರ್ವಿುಸುವ ಹೆಚ್ಚುವರಿ ಜಲಾಶಯಕ್ಕೆ ನೀರು ಹರಿಸಬೇಕು. ಈ ಜಲಾಶಯದ ನೀರನ್ನು ತಮಿಳುನಾಡು ಸಹ ಸಾಮಾನ್ಯ ಚಟುವಟಿಕೆಗಳಿಗೆ ಬಳಸದೆ ಅನಾವೃಷ್ಟಿಯ ಸಮಯದಲ್ಲಿ ಮಾತ್ರ ಉಪಯೋಗಿಸಬೇಕು.
ಒಂದು ವೇಳೆ ಕರ್ನಾಟಕದ ಹೆಚ್ಚುವರಿ ಜಲಾಶಯ ಮಾತ್ರ ತುಂಬಿದಲ್ಲಿ, ತಮಿಳುನಾಡಿನ ಹೆಚ್ಚುವರಿ ಜಲಾಶಯಕ್ಕೆ ನೀರು ಹರಿಯದಿದ್ದಲ್ಲಿ, ಹೊಗೇನಕಲ್ ಜಲಾಶಯದ ನೀರನ್ನು ನಿರ್ದಿಷ್ಟ ಪ್ರಮಾಣದಲ್ಲಿ ಎರಡೂ ರಾಜ್ಯಗಳು ಹಂಚಿಕೊಳ್ಳಬಹುದು. ಒಂದು ವೇಳೆ, ಎರಡು ವರ್ಷ ಮಳೆ ಅಭಾವವಾದರೂ ಈ ಹೆಚ್ಚುವರಿ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನಿಂದ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬಹುದು. ಈ ನಿಟ್ಟಿನಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಪಾತ್ರ ಮುಖ್ಯವಾದುದು.
ಇನ್ನು, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಲು, ನಗರದ ನಾಲ್ಕು ದಿಕ್ಕುಗಳಲ್ಲಿ ಸಣ್ಣ ಜಲಾಶಯಗಳನ್ನು ನಿರ್ವಿುಸಬೇಕು. ಮಳೆ ನೀರು ಹರಿಯಲು ಪ್ರತ್ಯೇಕ ಕಾಲುವೆಗಳನ್ನು ನಿರ್ವಿುಸಿ, ನಗರಗಳ ಕೊಳಚೆ ನೀರು ಅದರಲ್ಲಿ ಹರಿಯದಂತೆ ನೋಡಿಕೊಳ್ಳಬೇಕು. ಭಾರಿ ಮಳೆ ಸಂದರ್ಭದಲ್ಲಿ ಮಳೆ ನೀರು ಈ ಕಾಲುವೆಗಳ ಮೂಲಕ ಸಣ್ಣ ಜಲಾಶಯಗಳನ್ನು ಸೇರಬೇಕು. ಇದರಿಂದ ನೀರಿನ ಅಭಾವದ ಸಮಯದಲ್ಲಿ ಈ ಮಿನಿ ಜಲಾಶಯಗಳ ನೀರು ಸದ್ಬಳಕೆ ಮಾಡಿಕೊಳ್ಳಬಹುದು.

ಪ್ರಕೃತಿ ತಾನಾಗಿಯೇ ಒದಗಿಸುವ ಮಳೆನೀರನ್ನು ಮನುಷ್ಯ ಪೋಲು ಮಾಡದೆ ಅದನ್ನು ಸರಿಯಾಗಿ ಉಪಯೋಗಿಸುವುದರಲ್ಲಿ ತನ್ನ ಜಾಣತನ ತೋರಬೇಕು. ನೀರಿನ ಕೃತಕ ಅಭಾವ ಸೃಷ್ಟಿಸುವುದಕ್ಕಿಂತ ಮಳೆ ನೀರು ಸಂಗ್ರಹಿಸಿದರೆ ಸಮಯ ಮತ್ತು ಹಣದ ಉಳಿತಾಯ ಸಾಧ್ಯವಾಗುತ್ತದೆ.

ಜಲಸಂಗ್ರಹಣೆ ನಾವು ಎಡವುತ್ತಿರುವುದೆಲ್ಲಿ?
water-storage-rain-dam-drought-rainy-season

website developers in mysore