25 ದಿನಗಳಿಂದಲೂ ಕೆಆರ್ ಎಸ್ ನಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರು: ಕಾವೇರಿ ನದಿಗಿಳಿದು ರೈತರ ಪ್ರತಿಭಟನೆ

ಮಂಡ್ಯ,ಆ,2,2019(www.justkannada.in):  ಒಳಹರಿವು ಬಂದರೆ ಮಾತ್ರ ತಮಿಳುನಾಡಿಗೆ ನೀರು ಹರಿಸಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿತ್ತು. ಆದರೆ ಕೆ.ಆರ್ ಎಸ್ ಮತ್ತು ಕಬಿನಿ ಜಲಾಶಯದಿಂದ ಕಳೆದ 25 ದಿನಗಳಿಂದ  ಬರೊಬ್ಬರಿ 26 ಟಿಎಂಸಿ ನೀರನ್ನ ತಮಿಳುನಾಡಿಗೆ ಹರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಕೀಯ ಸ್ಥಿತ್ಯಂತರ ನಡುವೆ ತಮಿಳುನಾಡಿಗೆ ನೀರು ಹರಿಸಲಾಗಿದ್ದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆಆರ್ ಎಸ್ ಮತ್ತು ಕಬಿನಿ ಜಲಾಶಯದಿಂದ   25 ದಿನಗಳಿಂದಲೂ ಪ್ರತಿನಿತ್ಯ 11 ಸಾವಿರ ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಬಿಟ್ಟಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೆಚ್ಚು ನೀರು ಸಂಗ್ರಹವಾದರೇ ಮಾತ್ರ ತಮಿಳು ನಾಡಿಗೆ ನೀರು ಹರಿಸಿ ಎಂದು ಆದೇಶಿಸಿತ್ತು. ಆದರೆ ಕೆ.ಆರ್ ಎಸ್ ನಲ್ಲಿ ಕೇವಲ 3 ಸಾವಿರ ಕ್ಯೂಸೆಕ್ಸ್ ನಷ್ಟು ಒಳ ಹರಿವಿದೆ. ಒಳಹರಿವಿಗಿಂತಲೂ ಹೆಚ್ಚಿನ ನೀರನ್ನ ತಮಿಳುನಾಡಿಗೆ ಬಿಡಲಾಗುತ್ತಿದ್ದು, ಹೀಗೆ ಮುಂದುವರೆದರೇ ಕಾವೇರಿ ನೀರು ನಂಬಿಕೊಂಡಿರುವ ಬೆಂಗಳೂರು. ಹಾಸನ, ಮಂಡ್ಯ, ಮೈಸೂರು ಸೇರಿದಂತೆ ಆರು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ತೊಂದರೆಯಂಟಾಗಲಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕಾವೇರಿ ನದಿಯ  ಸ್ನಾನ ಘಟ್ಟದ ಬಳಿ  ರೈತರು ಪ್ರತಿಭಟನೆ ನಡೆಸುತ್ತಿದ್ದು  ಕೂಡಲೇ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಬರಗಾಲವಿದ್ದರೂ ತಮಿಳುನಾಡಿಗೆ ನೀರು ಹರಿಸಿರುವುದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Key words: Water -flowing – KRS – Tamil Nadu-  Farmers- protest -mandya