10 ಸೆಕೆಂಡ್ ಗಳಿಗಿಂತ ಹೆಚ್ಚು ಸಮಯ ಕಾಯುವಂತಾದ್ರೆ ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ: ಆದರೆ ಈ ನಿಯಮದ ಬಗ್ಗೆ ಅರಿವೇ ಇಲ್ವೆ..?

ನವದೆಹಲಿ, ಜುಲೈ ,7, 2022(www.justkannada.in): ಈ ಸುದ್ದಿ, ಹೆದ್ದಾರಿಗಳಲ್ಲಿ ಟೋಲ್‌ ಗಳ ಬಳಿ ಫಾಸ್ ಟ್ಯಾಗ್ (FASTag) ಇರುವ ಹೊರತಾಗಿಯೂ ತುಂಬಾ ಸಮಯದವರೆಗೂ ಕಾಯುವಂತಹ ಪ್ರಯಾಣಿಕರಿಗೆ ಬಹಳ ಸಂತೋಷವನ್ನು ಕೊಡುವ ಸುದ್ಧಿಯಾಗಿದೆ. ಹೌದು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಹೆಚ್‌ಎಐ) ಟೋಲ್‌ ಗಳ ಬಳಿ ಕಾಯುವ ಸಮಯವನ್ನು ಕನಿಷ್ಠಗೊಳಿಸುವ ಉದ್ದೇಶದೊಂದಿಗೆ, ಸಂಚಾರ ದಟ್ಟಣೆ ಇರುವ ಸಮಯದಲ್ಲಿಯೂ 10 ಸೆಕೆಂಡುಗಳಿಗಿಂತ ಹೆಚ್ಚಿನ ಸಮಯದವರೆಗೆ ಕಾಯದಿರುವುದನ್ನು ಖಾತ್ರಿಪಡಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಉದ್ದೇಶಕ್ಕಾಗಿ ಪ್ರತಿ ಟೋಲ್ ಬೂತ್ ಇರುವ ಸ್ಥಳದಿಂದ 100 ಮೀಟರುಗಳ ಹಿಂದಕ್ಕೆ ಒಂದು ಹಳದಿ ಬಣ್ಣದ ಪಟ್ಟೆಯನ್ನು ಬಿಡಿಸಲಾಗುತ್ತದೆ. ಟೋಲ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಹೆಚ್ಚಿನ ಬದ್ಧತೆಯನ್ನು ಸೃಷ್ಟಿಸುವ ಉದ್ದೇಶವೂ ಇದರ ಹಿಂದಿದೆ, ಎನ್ನುವುದು ಎನ್‌ಹೆಚ್‌ಎಐ ಅನಿಸಿಕೆಯಾಗಿದೆ.

10 ಸೆಕೆಂಡ್ ಗಳಿಗಿಂತ ಹೆಚ್ಚು ಸಮಯ ಕಾಯುತ್ತಿದ್ದರೇ ಪ್ರಯಾಣಿಕರು ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ. ಈ ಬಗ್ಗೆ  ಎನ್‌ಹೆಚ್‌ಎಐ ನಿಯಮಾವಳಿ ರೂಪಿಸಿದರೂ ಸಹ  ಈ ನಿಯಮಾವಳಿಗಳನ್ನ ಟೋಲ್ ಸಿಬ್ಬಂದಿ ಆಡಳಿತ ಕಚೇರಿ ಪಾಲಿಸುತ್ತಿಲ್ಲ. ಈ ನಿಯಮಾವಳಿ ಬಗ್ಗೆ ಪ್ರಯಾಣಿಕರಿಗೂ ಬಗ್ಗೆ ಜ್ಞಾನವಿಲ್ಲ ಎನ್ನಬಹುದು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ ಟಿಐ ಕಾರ್ಯಕರ್ತ ರವೀಂದ್ರ ಎಂಬುವವರು ತಮಗಾದ ಅನುಭವವನ್ನ ‘ಜಸ್ಟ್ ಕನ್ನಡ ಡಾಟ್ ಇನ್’ ಗೆ ಹಂಚಿಕೊಂಡಿದ್ದಾರೆ. ಟೋಲ್ ಗಳಲ್ಲಿ 10 ಸೆಕೆಂಡುಗಳಿಗಿಂತ ಹೆಚ್ಚಿನ ಸಮಯದವರೆಗೆ ಕಾಯುತ್ತಿದ್ದರೇ ಟೋಲ್ ತೆರಿಗೆ ಕಟ್ಟುವಂತಿಲ್ಲ. ಇದನ್ನ 2014ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದರು. ಎನ್‌ಹೆಚ್‌ಎಐ ಸಹ ನಿಯಮಾವಳಿ ರೂಪಿಸಿದೆ. ಆದರೆ ಇದು ಹೇಳಿಕೆಯಾಗಿಯೇ ಉಳಿದಿದೆ. ಯಾರೂ ಸಹ ಈ ನಿಯಮವನ್ನ ಪಾಲಿಸುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆ ನಂಜನಗೂಡು ಬಳಿ ಕಡಕೋಳ ಟೋಲ್ ಬಳಿ ನಾನು ಸುಮಾರು 3 ನಿಮಿಷಗಳ ಕಾಲ ಕಾದಿದ್ದೇನೆ.  ಆದರೂ ಟೋಲ್ ಕಟ್ಟಲು ಹೇಳಿದರು.

ಆದರೆ ಇದನ್ನ ನಾನು ಪ್ರಶ್ನಿಸಿ ಆರ್ ಟಿಐ ಪ್ರಕಾರ ಟೋಲ್ ನಿಯಮಾವಳಿ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ಆಡಳಿತ ಕಚೇರಿ ಸಂಪರ್ಕಿಸಿದಾಗ ಸರಿಯಾಗಿ ಪ್ರತಿಕ್ರಿಯೆ ಸಿಗಲಿಲ್ಲ. ಅಲ್ಲಿದ್ಧ ಮ್ಯಾನೇಜರ್ ಸಹ  ಯಾರ ಬಳಿ ಮಾಹಿತಿ ಪಡೆಯಬೇಕೆಂದು ತಿಳಿಸಲಿಲ್ಲ. ರಾಮನಗರದಲ್ಲಿನ ಯಾವುದೋ ಅಧಿಕಾರಿಯ ನಂಬರ್ ನೀಡಿದರು. ಆದರೆ ಇಲ್ಲಿನ ಟೋಲ್ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ಅಧಿಕಾರಿ ಏಕೆ ಸಂಪರ್ಕಿಸಬೇಕು. ಆರ್ ಟಿಇ ಪ್ರಕಾರ ಪ್ರತಿಯೊಂದು ಕಚೇರಿಯಲ್ಲೂ ಸಹ ಮಾಹಿತಿ ಒದಗಿಸಬೇಕು. ಆದರೆ ಅವರು ಯಾವುದೇ ಮಾಹಿತಿ ನೀಡಲಿಲ್ಲ. ಅಲ್ಲಿರುವ ಸಿಬ್ಬಂದಿಗಳು ಸಹ ಬೇರೆ ರಾಜ್ಯದವರೇ ಆಗಿದ್ದರು. ಹೀಗಾಗಿ ಸ್ವತಃ ಕೇಂದ್ರ ಸಚಿವರೇ ಈ ನಿಯಮಾವಳಿ ಬಗ್ಗೆ ಹೇಳಿದರೂ, ಎನ್‌ ಹೆಚ್‌ಎಐ ನಿಯಮಾವಳಿ ರೂಪಿಸಿದರೂ ಇದು ಎಲ್ಲಿಯೂ ಪಾಲನೆಯಾಗುತ್ತಿಲ್ಲ. ಕೇವಲ ಟೋಲ್ ವಸೂಲಿ ಮಾಡುವುದಷ್ಟೇ ಉದ್ದೇಶವಾಗಿದೆ  ಎಂದು ರವೀಂದ್ರ ಬೇಸರ ವ್ಯಕ್ತಪಡಿಸಿದರು.

ಇನ್ನು ಎನ್‌ಹೆಚ್‌ಎಐ ರೂಪಿಸಿರುವ ಹೊಸ ಟೋಲ್ ನಿಯಮಾವಳಿಗಳು ಹೀಗಿವೆ:

೧. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್‌ ಗಳ ಬಳಿ ಸಂಚಾರದಟ್ಟಣೆ ಹೆಚ್ಚಾಗಿರುವ ಸಮಯದಲ್ಲಿಯೂ ಪ್ರತಿ ವಾಹನ ೧೦ ಸೆಕೆಂಡುಗಳಿಗಿಂತ ಹೆಚ್ಚಿನ ಸಮಯದವರೆಗೆ ಕಾಯುವಂತಿಲ್ಲ

೨. ಟೋಲ್ ಪ್ಲಾಜಾಗಳ ಬಳಿ ತಡೆರಹಿತ, ಸುಗಮ ವಾಹನ ಸಂಚಾರಕ್ಕೆ ಅನುಕೂಲ, ಇದರಿಂದಾಗಿ 100 ಮೀಟರುಗಳಿಗಿಂತ ಹೆಚ್ಚಿನ ದೂರದವರೆಗೆ ವಾಹನಗಳು ನಿಲ್ಲುವ ಸಾಧ್ಯತೆ ಕಡಿಮೆ

೩. ಒಂದು ವೇಳೆ ೧೦೦ ಮೀಟರುಗಳಿಗಿಂತ ಹೆಚ್ಚಿನ ದೂರದವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದರೆ ಟೋಲ್ ಇಲ್ಲದೆಯೇ ಮುಂದಕ್ಕೆ ಹೋಗಲು ಅನುಮತಿ

೪. ಪ್ರತಿ ಟೋಲ್ ಬೂತ್‌ ಗೆ ೧೦೦ ಮೀಟರುಗಳ ಹಿಂದಕ್ಕೆ ಹಳದಿ ಬಣ್ಣದ ಪಟ್ಟೆ

ಸಚಿವಾಲಯದ ಪ್ರಕಾರ ಟೋಲ್ ಬೂತ್‌ಗಳ ಬಳಿ ಫಾಸ್ಟ್ಟ್ಯಾಗ್ ಅನುಷ್ಠಾನದ ನಂತರ ಕಾಯುವ ಸಮಯ ಸಾಕಷ್ಟು ಕಡಿಮೆಯಾಗಿದೆ. ಫಾಸ್ಟ್ಟ್ಯಾಗ್ ಹೊಂದಿರುವುದನ್ನು ೧೦೦% ಕಡ್ಡಾಯ ಮಾಡಿದ ನಂತರ ಬಹುತೇಕ ಎಲ್ಲಾ ಟೋಲ್ ಬೂತ್‌ಗಳ ಬಳಿಯೂ ವಾಹನಗಳು ಕಾಯಬೇಕಾಗುತ್ತಿಲ್ಲ ಎಂಬ ಸ್ಪಷ್ಟನೆಯೊಂದಿಗೆ ಎನ್‌ಹೆಚ್‌ಎಐ, “ಯಾವುದಾದರೂ ಅನಿವಾರ್ಯ ಕಾರಣಗಳಿಂದಾಗಿ ಒಂದು ವೇಳೆ ವಾಹನಗಳು ೧೦೦ ಮೀಟರ್‌ಗಿಂತ ದೂರದವರೆಗೆ ಸರತಿ ಸಾಲಿನಲ್ಲಿದ್ದರೆ, ೧೦೦ ಮೀಟರ್‌ಗಳ ವ್ಯಾಪ್ತಿಗೆ ಬರುವವರೆಗಿನ ವಾಹನಗಳು ಟೋಲ್ ಪಾವತಿಸಬೇಕಾಗಿಲ್ಲ,” ಎಂದು ಸ್ಪಷ್ಟಪಡಿಸಿದೆ.

Key words: wait -more than -10 seconds – don’t have – pay- toll tax.