ವಿವಾದಕ್ಕೆ ಕಾರಣವಾಯ್ತು ರೇಸ್ ಕೋರ್ಸ್ ರಸ್ತೆ ಬಳಿಯ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ

kannada t-shirts

ಬೆಂಗಳೂರು:ಜುಲೈ-21:(www.justkannada.in) ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರತಿಮೆ ಒಡೆಯರ್ ಮುಖವನ್ನು ಹೋಲುತ್ತಿಲ್ಲ ಮಾತ್ರವಲ್ಲ ಪ್ರತಿಮೆ ಮೇಲಿನ ವಸ್ತ್ರಾಲಂಕಾರ ಕೂಡ ಮಹಾರಾಜರ ಬಟ್ಟೆಗಳ ರೀತಿಯಲ್ಲಿಲ್ಲ ಎಂದು ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಡೆಯರ್ ಅವರ ಜನ್ಮಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಕನ್ನಡ ಮನೆಯ ಕಾವಲುಗಾರ ಪಡೆ ಸಂಘಟನೆ ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಟರ್ಫ್ ಕ್ಲಬ್ ಮುಂಬಾದ ಜಂಕ್ಷನ್ ಬಳಿ ಜಯಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಸ್ಥಾಪಿಸಿದೆ. ಈ ಪ್ರತಿಮೆ ಮುಖಭಾವದಲ್ಲಿ ಒಡೆಯರ್ ಮುಖದ ಹೋಲಿಕೆಯಿಲ್ಲ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸಂಘಟನೆಗಳ ಅಸಮಾಧಾನ, ಒತ್ತಾಯದ ಹಿನ್ನಲೆಯಲ್ಲಿ ಕನ್ನಡ ಕಟ್ಟೆ, ಕನ್ನಡ ಸಾಂಸ್ಕೃತಿಕ ಸಂಘಟನೆಯು ಈ ಪ್ರತಿಮೆಯನ್ನು ಬದಲಿಸುವಂತೆ ಹಾಗೂ ಮಹಾರಾಜರ ಹೋಲಿಯುಳ್ಳ ಪ್ರತಿಮೆಯನ್ನು ಇದೇ ಸ್ಥಾಳದಲ್ಲಿ ಸ್ಥಾಪಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿತ್ತು. ಮನವಿ ಹಿನ್ನಲೆಯಲ್ಲಿ ಬಿಬಿಎಂಪಿ, ಒಡೆಯರ್ ಜನ್ಮಶತಮಾನೋತ್ಸವ ವೇಳೆಯಲ್ಲಿ ಮೈಸೂರು ಅರಮನೆಯಲ್ಲಿರುವ ಒಡೆಯರ್ ಪ್ರತಿಮೆಯನ್ನು ಹೋಲುವ ಕಂಚಿನ ಪುತ್ಥಳಿಯನ್ನು ಹಿಂದಿನ ಪುತ್ಥಳಿ ಪಕ್ಕದಲ್ಲಿ ಸ್ಥಾಪಿಸಿತ್ತು.

ಈ ಕುರಿತು ಮಾತನಾಡಿರುವ ಕನ್ನಡ ಕಟ್ಟೆ ಅಧ್ಯಕ್ಷ ಮಾವಳ್ಳಿ ಅರವಿಂದ್, ಸಂಘದ ಸ್ವಯಂಸೇವಕರು ಜಯಚಮರಾಜೇಂದ್ರ ಒಡಿಯರ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಈ ಪ್ರತಿಮೆ ವಡೆಯರ್ ರನ್ನು ಹೋಲುವಂತಿಲ್ಲ. ಸಿಮೆಂಟ್‌ನಲ್ಲಿ ಮೂಲ ಆಕಾರವನ್ನು ಸಾಧಿಸುವುದು ಕಷ್ಟವಾದ್ದರಿಂದ ತಪ್ಪಾಗಿರಬಹುದು. ನಾವು ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ, ಬಿಬಿಎಂಪಿ ಅದೇ ಸ್ಥಳದಲ್ಲಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ ಆಚರಣೆ ಮಾಡಿದ್ದೇವೆ ಎಂದಿದ್ದಾರೆ.

ವಿವಾದಿತ ಪ್ರತಿಮೆ ಬಗ್ಗೆ ವಸಂತ್ ನಗರ ವಾರ್ಡ್ ಕಾರ್ಪೊರೇಟರ್ ಸಂಪತ್ ಕುಮಾರ್ ಪ್ರಶ್ನಿಸಿದಾಗ, ಒಡೆಯರ್ ಪ್ರತಿಮೆಯ ಬಗ್ಗೆ ತಮಗೇನೂ ತಿಳಿದಿಲ್ಲ. ಬಹುಶಃ ಇದನ್ನು ಅನಧಿಕೃತವಾಗಿ ಅನಾವರಣಗೊಳಿಸಿರಬಹುದು. ಇದಕ್ಕೆ ಬಿಬಿಎಂಪಿಯಿಂದ ಯಾವುದೇ ಅನುಮತಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೇ ಬಿಬಿಎಂಪಿ ಜಂಟಿ ಆಯುಕ್ತ (ಪೂರ್ವ) ಜಿ ಎಂ ರವೀಂದ್ರ ಅವರು ಕೂಡ ಪ್ರತಿಮೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇನ್ನು ಪ್ರತಿಮೆ ಬಗ್ಗೆ ಕನ್ನಡ ಮನೆ ಕಾವಲುಗಾರ ಪಡೆ ಅಧ್ಯಕ್ಷರನ್ನು ಪ್ರಶ್ನಿಸಲು ಸಂಪರ್ಕಕ್ಕೇ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ. ಒಟ್ಟಿನಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿನ ಜಯಚಾಮರಾಜೇಂದ್ರ ಒಡೆಯರ್ ಅವರ ಈ ವಿನೂತನ ಪ್ರತಿಮೆ ಈಗ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿವಾದಕ್ಕೆ ಕಾರಣವಾಯ್ತು ರೇಸ್ ಕೋರ್ಸ್ ರಸ್ತೆ ಬಳಿಯ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ
Wadiyar statue piques pro-Kannada outfits

website developers in mysore