VTU ಕುಲಪತಿ ನೇಮಕ: ಸರ್ಚ್ ಕಮಿಟಿ ಶಿಫಾರಸು ಮಾಡಿದ ಅಭ್ಯರ್ಥಿಗಳ ವಿರುದ್ದ ಆರೋಪ.?

ಬೆಂಗಳೂರು, ಸೆಪ್ಟೆಂಬರ್ 27, 2022 (www.justkannada.in): ಬೆಳಗಾವಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿರುವ ಪಟ್ಟಿಯ ಅಭ್ಯರ್ಥಿಗಳ ವಿರುದ್ಧ ಕರ್ತವ್ಯ ಲೋಪದ ಪಕ್ಷಪಾತದಿಂದ ಹಿಡಿದು ಅಪರಾಧದ ಆರೋಪಗಳಿಂದಾಗಿ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳನ್ನು ನೇಮಕಾತಿ ಮಾಡುವ ಪ್ರಕ್ರಿಯೆ ವಿವಾದಕ್ಕೀಡಾಗಿದೆ.

ವಿಟಿಯು ಅತ್ಯುನ್ನತ ಹುದ್ದೆಗಾಗಿ ಸೆಪ್ಟೆಂಬರ್ 24ರಂದು ಆನಂದ್ ದೇಶಪಾಂಡೆ, ವಿದ್ಯಾಶಂಕರ್ ಎಸ್. ಹಾಗೂ ಗೋಪಾಲ್ ಮುಗೆರೇ ಈ ಮೂವರ ಹೆಸರನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಈ ಆರೋಪಗಳು ಉದ್ಭವಿಸಿವೆ.

ಮೈಸೂರು ವಿಶ್ವವಿದ್ಯಾಲಯದ ಯೋಜನೆ, ನಿಗಾವಣೆ ಹಾಗೂ ಮೌಲ್ಯಮಾಪನ ಮಂಡಳಿಯ ಸದಸ್ಯರಾಗಿರುವ ಡಾ. ಕೆ. ಮಹದೇವ್ ಅವರು, ವಿಟಿಯುನ ಕುಲಪತಿಗಳ ಹುದ್ದೆಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯ ಪೈಕಿ ವಿದ್ಯಾಶಂಕರ್ ಅವರ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಆರೋಪಿಸಿದ್ದಾರೆ. ಮೇ ತಿಂಗಳಲ್ಲಿ, ಮೂಳೆತಜ್ಞರಾಗಿರುವ ಡಾ. ಕೆ. ಮಹದೇವ್ ಅವರು, ಪ್ರಸ್ತುತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಓಯು) ಕುಲಪತಿಯಾಗಿರುವ ವಿದ್ಯಾಶಂಕರ್ ಅವರ ವಿರುದ್ಧ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ಆರೋಪ ಹೊರಿಸಿ ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದರು.

ಡಾ. ಮಹದೇವ್ ಅವರು ತಮ್ಮ ಆರೋಪದಲ್ಲಿ, “ಕೆಎಸ್‌ ಓಯುನ ಕುಲಪತಿಯಾಗಿ ವಿದ್ಯಾಶಂಕರ್ ಅವರು, ವಿಶ್ವವಿದ್ಯಾಲಯದ ಹಣವನ್ನು ಬಳಸಿಕೊಂಡು ಹಾಲಿ ೨೧ ಪ್ರಾದೇಶಿಕ ಕೇಂದ್ರಗಳ ಜೊತೆಗೆ, ಸುಮಾರು ರೂ.೧೦೦ ಕೋಟಿಗಳ ವೆಚ್ಚದಲ್ಲಿ ಮಾಗಡಿ, ಮಂಗಳೂರು ಹಾಗೂ ಧಾರವಾಡಗಳಲ್ಲಿ ಮೂರು ಪ್ರಾದೇಶಿಕ ಕೇಂದ್ರಗಳನ್ನು ಕಾನೂನುಬಾಹಿರವಾಗಿ ನಿರ್ಮಾಣ ಮಾಡುವಲ್ಲಿ ತೊಡಗಿದ್ದಾರೆ,” ಎಂದು ತಿಳಿಸಿದ್ದಾರೆ.

ಜೊತೆಗೆ, ವಿದ್ಯಾಶಂಕರ್ ಅವರ ವಿರುದ್ಧ, “ಕೆಎಸ್‌ ಓಯುನ ಸಹಾಯಕ ಕುಲಸಚಿವರಾದ ಪ್ರದೀಪ್ ಗಿರಿ ಅವರನ್ನು “ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಗಳ ಮೂಲಕ ದಾಳಿ ಮಾಡಿದ್ದಕ್ಕಾಗಿ,” ಭಾರತೀಯ ನೀತಿ ಸಂಹಿತೆಯಡಿ ಪ್ರಕರಣ ಇರುವುದಾಗಿಯೂ ತಿಳಿಸಿದ್ದಾರೆ. ಈ ಸಂಬಂಧ ಆಗಸ್ಟ್ ೨ರಂದು ಮೈಸೂರಿನ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಯಲ್ಲಿ ಎಫ್‌ ಐಆರ್ ಸಹ ದಾಖಲಾಗಿರುವುದಾಗಿ ತಿಳಿಸಿದ್ದಾರೆ.

ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮತ್ತೋರ್ವ ಅಭ್ಯರ್ಥಿ, ಈ ಹಿಂದೆ ಕರ್ನಾಟಕದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಸಾಯನಿಕ ಇಂಜಿನಿಯರಿಂಗ್‌ ನ ಪ್ರಾಧ್ಯಾಪಕರಾಗಿದ್ದಂತಹ ಎನ್‌ ಐಟಿ-ಗೋವಾದ ನಿರ್ದೇಶಕ ಗೋಪಾಲ್ ಮುಗೆರೇ ಅವರನ್ನು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ)ನ ಸಮಿತಿಗಳಿಂದ ಡಿಬಾರ್ ಮಾಡಿರುವುದಾಗಿ ತಿಳಿಸಿದ್ದಾರೆ. ಎಐಸಿಟಿಇ  ಆದೇಶವೊಂದರ ಪ್ರಕಾರ ಆಗಸ್ಟ್ ೫, ೨೦೧೮ರಂದು ಮುಗೆರೇ ಹಾಗೂ ಇತರೆ ಆರು ಅಭ್ಯರ್ಥಿಗಳನ್ನು ತಜ್ಞರ ಉನ್ನತ ಮಟ್ಟದ ಮಂಡಳಿಯಿಂದ ತೆಗೆದುಹಾಕಲಾಗಿದೆ.

ಕಳೆದ ವಾರ ಮತ್ತೋರ್ವ ಅಭ್ಯರ್ಥಿ, ಈಗಿನ ವಿಟಿಯು ಕುಲಸಚಿವ ದೇಶಪಾಂಡೆ ಅವರ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣವೊಂದು ದಾಖಲಾಗಿದೆ. ಇವರು ಹಾಲಿ ಕುಲಪತಿಗಳ ಅವಧಿಯ ಅಂತ್ಯದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ವಿಟಿಯು ಕುಲಪತಿ ಈ ತಿಂಗಳು ನಿವೃತ್ತರಾಗಲಿದ್ದಾರೆ. ಸೆಪ್ಟೆಂಬರ್ ೨೮, ೨೦೨೧ರಂದು ಕರ್ನಾಟಕದ ಮಾನ್ಯ ರಾಜ್ಯಪಾಲರು ಹೊರಡಿಸಿರುವಂತಹ ಒಂದು ಸುತ್ತೋಲೆಯಲ್ಲಿ ಕುಲಪತಿಗಳ ಅವಧಿ ಇನ್ನು ಎರಡು ತಿಂಗಳುಗಳ ಒಳಗೆ ಅಂತ್ಯಗೊಳ್ಳುವಂತಿದ್ದರೆ ಯಾವುದೇ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

“ಅಧಿಕಾರಶಾಹಿ ಹಾಗೂ ರಾಜಕಾರಣಿಗಳಿಂದಾಗಿ ಸೆನೇಟ್‌ ನ ಚುನಾವಣೆಗಳನ್ನು ನಿಲ್ಲಿಸಲಾಗಿದ್ದು, ಇದರಿಂದಾಗಿ ಕರ್ನಾಟಕದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಇದರಿಂದಾಗಿ ಸ್ವಜನಪಕ್ಷಪಾತ ಹಾಗೂ ಕುಲಪತಿಗಳು ಹಾಗೂ ಸೆನೇಟ್ ಸದಸ್ಯರ ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಜಾಗ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದ್ದು, ಶೈಕ್ಷಣಿಕ ಕ್ಷೇತ್ರದ ಮೇಲೆ ಬಹಳಷ್ಟು ಪ್ರಭಾವ ಬೀರಿದೆ,” ಎಂದು ಡಾ. ಮಹದೇವ್ ತಿಳಿಸಿದರು.

ಈ ಕುರಿತು ಮಾತನಾಡಿದ ವಿದ್ಯಾಶಂಕರ್ ಅವರು, ತಮ್ಮ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಆರೋಪಗಳನ್ನು ಮಾಡುತ್ತಿದ್ದು, ತಮ್ಮ ವಿರುದ್ಧ ಯಾವುದೇ ಪ್ರಕರಣಗಳಿದ್ದರೂ ಎದುರಿಸುವುದಾಗಿ ತಿಳಿಸಿದರು. “ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ನಾನು ಯಾವುದೇ ವಿಚಾರಣೆಯನ್ನಾದರೂ ಎದುರಿಸಲು ಸಿದ್ಧವಾಗಿದ್ದೇನೆ. ಜೊತೆಗೆ, ಉಚ್ಛ ನ್ಯಾಯಾಲಯದಲ್ಲಿ ಕಟ್ಟಳೆ ಹೂಡಲು ಸಿದ್ಧನಿದ್ದೇನೆ. ಅಲ್ಲಿಯವರೆಗೂ ಈ ಎಲ್ಲಾ ಆರೋಪಗಳು ಕೇವಲ ಅನಾಮಧೇಯರಿಂದ ಪ್ರೇರಿತಗೊಂಡಿರುವ ಗುರಿ ಎಂದೇ ಭಾವಿಸುತ್ತೇನೆ. ನಾನು ನನ್ನ ಸ್ವಂತ ಯೋಗ್ಯತೆ ಹಾಗೂ ವರ್ಷಗಳಿಂದ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ನಾನು ಮಾಡಿರುವ ಉತ್ತಮ ಕೆಲಸಗಳ ಆಧಾರದ ಮೇಲೆ ಈ ಹುದ್ದೆಯ  ರೇಸ್ ನಲ್ಲಿದ್ದೇನೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್.

Key words: VTU- VC -appointment -process

ENGLISH SUMMARY…

The process for appointing a new vice-chancellor to Visvesvaraya Technological University (VTU) has been mired in controversy from the word go, with allegations from favouritism to dereliction of duty to criminal charges surfacing against candidates shortlisted for the Belagavi-headquartered institution’s top job.

The allegations came soon after a VTU search committee announced its shortlist of three vice-chancellor candidates—Anand Deshpande, Vidyashankar S and Gopal Mugeray—on September 24.