ಮಾದರಿಯಾಗಿ ಹುಟ್ಟೂರು ಅಭಿವೃದ್ಧಿ ಪಡಿಸಿ ಜನಮೆಚ್ಚುಗೆ ಗಳಿಸಿದ ಸಚಿವ ವಿ.ಸೋಮಣ್ಣ

ರಾಮನಗರ, ಡಿಸೆಂಬರ್ 21, 2019 (www.justkannada.in): ಅಚ್ಚು ಕಟ್ಟಾದ ರಸ್ತೆಗಳು, ಸ್ವಚ್ಚ ಚರಂಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ವ್ಯವಸ್ಥೆ, ಸುಂದರ ಮನೆಗಳು, ಪ್ರಶಾಂತ ಪರಿಸರ….ಹೀಗೆ ಹತ್ತು ಹಲವು ಸೌಲಭ್ಯಗಳು..
ಇದು ಕಂಡು ಬಂದದ್ದು ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ವಿ.ಸೋಮಣ್ಣ ಅವರ ಹುಟ್ಟೂರು ಕನಕಪುರ ತಾಲ್ಲೂಕಿನ ಗಡಿ ಭಾಗದ ಯಲವನಾಥ ಗ್ರಾಮದಲ್ಲಿ.

ಅರಣ್ಯದ ವ್ಯಾಪ್ತಿಯಲ್ಲಿದ್ದ ಈ ಗ್ರಾಮ ರಾಜ್ಯದಲ್ಲೇ ಮೊದಲ ಕಂದಾಯ ಗ್ರಾಮವಾಗಿ ಪರಿವರ್ತಿಸಿ ಸರ್ಕಾರಿ ಆದೇಶ ಹೊರಡಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿರುವ ಸಚಿವರು, ಆನೆಗಳ ದಾಳಿ ತಡೆಯಲು ರೈಲು ಕಂಬಿಗಳ ಬೇಲಿ ನಿರ್ಮಾಣದ ಕಾಮಗಾರಿ ಯೋಜನೆಗೆ ಚಾಲನೆ ದೊರಕಿಸಿಕೊಟ್ಟಿದ್ದಾರೆ. ಇಂದು ಕುಟುಂಬ ಸಮೇತರಾಗಿ ಅಗಮಿಸಿದ್ದ ಸಚಿವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಸಚಿವರು ಅಗಮಿಸುವ ಹಿನ್ನೆಲೆಯಲ್ಲಿ ಊರಿನ ಜನರೆಲ್ಲರೂ ಎಲ್ಲಿಯೂ ಹೊರಗೆ ಹೋಗದೆ ಅಲ್ಲಿಯೇ ಉಳಿದಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ತಮ್ಮ ದಿವಂಗತ ತಂದೆ‌ ತಾಯಿ ಅವರ ಆರಾಧನೆ ಮಾಡಲು ಹುಟ್ಟೂರಿಗೆ ಗಆಗಮಿಸಿ ಆರಾಧನೆ ಮುಗಿಸಿ ಒಂದು ದಿನ ಗ್ರಾಮದ ಜನರೊಂದಿಗೆ‌ ಇದ್ದು ತೆರಳುವುದಾಗಿ ತಿಳಿಸಿದರು.

ಮಾನ್ಯ ಪ್ರಧಾನಮಂತ್ರಿಗಳು ಉಜ್ವಲ ಯೋಜನೆಯನ್ನು ದೇಶದ ೮ ಕೋಟಿ ಜನರಿಗೆ ಸಮರ್ಪಣೆ ಮಾಡಿದ್ದಾರೆ. ಅವರು ನನಗೆ ಮಾದರಿಯಾಗಿದ್ದು, ಸರ್ವರಿಗೂ ಸೂರು ಒದಗಿಸುವುದು ನನ್ನ ಗುರಿಯಾಗಿರುತ್ತದೆ. ಇದು ಕುಗ್ರಾಮವಾಗಿದ್ದು, ರಾಷ್ಟ್ರೀಯ ಅರಣ್ಯದ ವ್ಯಾಪ್ತಿಯಲ್ಲಿತ್ತು ಅದನ್ನು ಡಿನೋಟಿಫೈ ಮಾಡಿಸಿ ಕಂದಾಯ ಗ್ರಾಮವಾಗಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸಂಸದರು ಹಾಗೂ ಶಾಸಕರ ಸಹಕರಿಸಿದ್ದಾರೆ ಎಂದು ಹೇಳಿದರು.

ಈ ಗ್ರಾಮದ ಸುತ್ತ ೧೬೫ಎಕರೆ ಅರಣ್ಯವಿದೆ ಹಾಗೂ ಆನೆಗಳಿವೆ. ಆನೆಗಳನ್ನು ಗ್ರಾಮಕ್ಕೆ ಬರುವುದನ್ನು ತಡೆಗಟ್ಟಲು ಅರಣ್ಯದ ೫ ಕಿ ಮೀ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಕರಡಿದೊಡ್ಡಿ, ಕುಂಬಾರ ದೊಡ್ಡಿ, ಹಳಗಡಕಲು, ಬಿಳಿಧಾರೆ,ಬನ್ನಗಿರಿದೊಡ್ಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನೀಲಿನಕ್ಷೆ ಸಿದ್ದಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು ಕೆಂಬತಳ್ಳಿ ಬಾರ್ಡರ್ ವರೆಗೆ ರಸ್ತೆ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೆ ತಿಳಿಸಲಾಗಿದೆ ಎಂದು ಹೇಳಿದರು.

ವನ್ಯಜೀವಿ ಅರಣ್ಯ ಭಾಗದಿಂದ ಕಂದಾಯ ಗ್ರಾಮವಾಗುತ್ತಿರುವುದು ಯಲವನಾಥಪುರ ಕರ್ನಾಟಕ ರಾಜ್ಯದಲ್ಲೇ ಮೊದಲಾ ಗ್ರಾಮವಾಗಿರುತ್ತದೆ. ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳೇ ಖುದ್ದಾಗಿ ಪರಿಶೀಲನೆ ನಡೆಸಿ ಮನೆಯಿಲ್ಲದ ಬಡವರ ಹೆಸರನ್ನು ಪಟ್ಟಿ ಮಾಡಿ ಕಳುಹಿಸುವಂತೆ ತಿಳಿಸಿದರು. ಸರ್ಕಾರದಿಂದ ವಸತಿ ಯೋಜನೆಗಳಡಿ ಮನೆ ಕಟ್ಟಿಕೊಳ್ಳಲು ನೀಡಲಾಗುತ್ತಿರುವ ೧.೩೦ ಲಕ್ಷ ರೂ ಹಣವನ್ನು ಮುಂದಿನ ಸಾಲಿನಲ್ಲಿ ಎರಡು ಅಥವಾ ಮೂರು ಲಕ್ಷಕ್ಕೆ ಹೆಚ್ಚಿಸಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಸಚಿವರೇ ನಿರ್ಮಿಸಿರುವ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕುಟುಂಬದವರೊಂದಿಗೆ ಪೂಜೆ ಸಲ್ಲಿಸಿದರು.