ಜಿಕೆವಿಕೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಬೆವರಿಳಿಸಿದ ಡಿಸಿಎಂ ಅಶ್ವಥ್ ನಾರಾಯಣ್…

kannada t-shirts

ಬೆಂಗಳೂರು,ಜು,16,2020(www.justkannada.in):  ಜಿಕೆವಿಕೆಯಲ್ಲಿ ಸ್ಥಾಪಿಸಲಾಗಿರುವ 712 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ನಗರದ ಕೋವಿಡ್ ಉಸ್ತುವಾರಿ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಲ್ಲಿನ ಅವ್ಯವಸ್ಥೆ ಗಳ ಕರ್ಮಕಾಂಡವನ್ನು ಕಂಡು ಹೌಹಾರಿ ಅಧಿಕಾರಿಗಳಿಗೆ ಬೆವರಿಳಿಸಿದರು. visit-gkvk-covid-care-center-dcm-ashwath-narayan-officers

ಜಿಕೆವಿಕೆಯಲ್ಲಿನ ಕೋವಿಡ್ ಕೇರ್ ಕೇಂದ್ರಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ದಿಢೀರ್ ಭೇಟಿ ನೀಡಿ ಸೋಂಕಿಗೆ ಹೆದರಿರುವ ವೈದ್ಯರು, ಕಂದಾಯ, ಬಿಬಿಎಂಪಿ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದ ರೋಗಿಗಳು ನರಕ ಸದೃಶ್ಯ ಯಾತನೆ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡು, ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚಿಕಿತ್ಸೆ, ಔಷಧೋಪಚಾರ, ಸ್ವಚ್ಛತೆ, ಊಟದ ವ್ಯವಸ್ಥೆ, ಶೌಚಾಲಯದ ನೈರ್ಮಲ್ಯ, ಹಾಸಿಗೆಯ ಮೇಲಿನ ಬಟ್ಟೆ ಬದಲಿಸುವುದೂ ಸೇರಿದಂತೆ ಯಾವುದೇ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಅಧಿಕಾರಿಗಳು ಮತ್ತು ವೈದ್ಯರ ಅಸಡ್ಡೆಯಿಂದ ರೋಗಿಗಳು ನರಳುವಂತೆ ಆಗಿದೆ. ಇದೆಲ್ಲವನ್ನೂ ಪ್ರತ್ಯಕ್ಷವಾಗಿ ಗಮನಿಸಿದ ಡಿಸಿಎಂ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ  ಅಶ್ವಥ್ ನಾರಾಯಣ್ ತಿಳಿಸಿದರು.

ಅಳಲು ತೋಡಿಕೊಂಡ ಸೋಂಕಿತರು:

ಆರೈಕೆ ಕೇಂದ್ರದಲ್ಲೇ ಸೋಂಕಿತರ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮುಂದೆ ತಮಗಾಗುತ್ತಿರುವ ತೊಂದರೆಗಳನ್ನು ರೋಗಿಗಳು ಎಳೆಎಳೆಯಾಗಿ ಬಿಡಿಸಿಟ್ಟರು. ವೈದ್ಯರು ಒಳಕ್ಕೇ ಬರುತ್ತಿಲ್ಲ. ನಮ್ಮ ಯಾವುದೇ ಸಮಸ್ಯೆಗೂ ಸ್ಪಂದಿಸುತ್ತಿಲ್ಲ. ಪ್ರಶ್ನೆಗಳಿಗೆ ಉತ್ತರ ಕೊಡುತ್ತಿಲ್ಲ. ನಮ್ಮನ್ನು ತೀರಾ ನಿರ್ಲಕ್ಷ್ಯ, ಅಸಡ್ಡೆಯಿಂದ ನೋಡಲಾಗುತ್ತಿದೆ ಎಂದು ಕಣ್ಣೀರು ಹಾಕಿದರು.

ಸಕಾಲಕ್ಕೆ ಆಹಾರ ಮತ್ತು ಔಷಧಗಳ್ನು ನೀಡಲಾಗುತ್ತಿಲ್ಲ. ಹಸಿವಿನಿಂದ ಒದ್ದಾಡಬೇಕಾದ ಸ್ಥಿತಿ ಇದೆ. ಹಾಸಿಗೆಗಳ ಮೇಲಿನ ಬೆಡ್’ಶೀಟುಗಳನ್ನು ಬದಲಿಸುತ್ತಿಲ್ಲ. ಶೌಚಾಲಯಗಳನ್ನು ಕ್ಲೀನ್ ಮಾಡಿ ದಿನಗಳೇ ಕಳೆದಿವೆ. ಬಿಸಿನೀರಿನ ವ್ಯವಸ್ಥೆ ಇಲ್ಲ. ರೋಗದಿಂದ ನರಳುತ್ತಿರುವ ನಮ್ಮನ್ನು ಇಲ್ಲಿ ತೀರಾ ನಿಕೃಷ್ಟವಾಗಿ ನೋಡಲಾಗುತ್ತಿದೆ ಎಂದು ಸೋಂಕಿತರು ದುಃಖ ತೋಡಿಕೊಂಡರು. ಇದೆಲ್ಲವನ್ನು ಕೇಳಿ ಆಘಾತಕ್ಕೊಳಗಾದ ಡಿಸಿಎಂ ಅಧಿಕಾರಿಗಳ ಮೇಲೆ ಕೆಂಡಾಮಂಡಲಗೊಂಡರು.

ಡಿಸಿಎಂ ಬಂದ ಮೇಲೆ ಬಂದ ವೈದ್ಯೆ!!:

ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನಿಯೋಜನೆಗೊಂಡು ಜಿಕೆವಿಕೆ ಕೋವಿಡ್ ಕೇರ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಡಿಕಲ್ ನೋಡೆಲ್ ಅಧಿಕಾರಿ ಡಾ. ಸೌಮ್ಯಾ ಎಂಬುವವರು ಡಿಸಿಎಂ ಅವರು ಆ ಕೇಂದ್ರಕ್ಕೆ ಬಂದಾಗ ಅಲ್ಲಿರಲೇ ಇಲ್ಲ. ಸ್ವಲ್ಪಹೊತ್ತಿನ ನಂತರ ಬಂದ ಅವರನ್ನು ಡಿಸಿಎಂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮುಖ್ಯ ವೈದ್ಯೆಯಾಗಿದ್ದರೂ ಇವರು ಕೇರ್ ಸೆಂಟರಿನ ಒಳಕ್ಕೇ ಹೋಗುತ್ತಿಲ್ಲವೆಂದು ಅಲ್ಲಿನ ರೋಗಿಗಳು ದೂರಿದರು. ಸಂಜೆ ಒಳಗಾಗಿ ಇವರ ವಿರುದ್ಧ ಕ್ರಮ ಜರುಗಿಸುವಂತೆ ನಗರದ ಕೋವಿಡ್ ಉಸ್ತುವಾರಿ ಕೇಂದ್ರಗಳ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಡಿಸಿಎಂ ಸೂಚನೆ ನೀಡಿದರು.

ಹಾಗೆಯೇ, ಜಿಕೆವಿಕೆ ಕೋವಿಡ್ ಕೇಂದ್ರದ ವ್ಯವಸ್ಥಾಪಕ ಅಧಿಕಾರಿ ಆಗಿರುವ ತಹಸೀಲ್ದಾರ್ ಡಾ. ಗಣೇಶ್ ಅವರಿಗೂ ಡಿಸಿಎಂ ಅಶ್ವಥ್ ನಾರಾಯಣ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇಡೀ ಕೇಂದ್ರದ ಸಂಪೂರ್ಣ ಉಸ್ತುವಾರಿಯೂ ಆಗಿರುವ ಬಿಬಿಎಂಪಿ ಜಂಟಿ ಆಯುಕ್ತ ಅಶೋಕ್ ಅವರ ಮೇಲೆಯೂ ಡಿಸಿಎಂ ಸಿಡಿಮಿಡಿಗೊಂಡರಲ್ಲದೆ, ಮನುಷ್ಯತ್ವ ಮರೆತು ವರ್ತಿಸುತ್ತಿರುವ ನಿಮ್ಮನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು.

ವೈದ್ಯರು, ಅಧಿಕಾರಿಗಳ ಜತೆ ಮುಖಾಮುಖಿ ಮಾತುಕತೆ ನಡೆಸಿದ ಅವರು, ವೈದ್ಯರಾದವರು ನೇರವಾಗಿ ರೋಗಿ ಬಳಿಗೆ ತೆರಳಿ ಚಿಕಿತ್ಸೆ ನೀಡಬೇಕು. ಅದೂ ಆಗಲಿಲ್ಲ ಎಂದರೆ ಆನ್’ಲೈನ್’ನಲ್ಲಿ ಅವರಿಗೆ ಬೇಕಾದ ಎಲ್ಲ ಸೂಚನೆಗಳನ್ನು ಕೊಡಬೇಕು. ಇಡೀ ರಾಜ್ಯ, ದೇಶ ಮತ್ತು ಜಗತ್ತನ್ನೇ ಪೀಡಿಸುತ್ತಿರುವ ಈ ಮಾರಿಯನ್ನು ನಿವಾರಿಸಲು ಪ್ರತಿಯೊಬ್ಬರೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಜೀವ ರಕ್ಷಿಸಬೇಕಾದ ವೈದ್ಯರೇ ಹೀಗೆ ಕೈಚೆಲ್ಲಿದರೆ ಗತಿ ಏನು ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಇದೇ ಕ್ಯಾಂಪಸ್ಸಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿನ ಮತ್ತೊಂದು ಆರೈಕೆ ಕೇಂದ್ರ ಉತ್ತಮವಾಗಿದ್ದು, ಅಲ್ಲಿನ ವ್ಯವಸ್ಥೆ ಬಗ್ಗೆ ಡಿಸಿಎಂ ತೃಪ್ತಿ ವ್ಯಕ್ತಪಡಿಸಿದರು. ವೈದ್ಯರು, ನರ್ಸ್ ಗಳು, ಸ್ವಚ್ಛತಾ ಸಿಬ್ಬಂದಿ, ಊಟ, ಔಷಧಿ, ಚಿಕಿತ್ಸೆ ಯಾವುದರ ಬಗ್ಗೆಯೂ ಅಲ್ಲಿ ದೂರುಗಳು ಬರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರನ್ನು ಡಿಸಿಎಂ ಮನಸಾರೆ ಶ್ಲಾಘಿಸಿದರು.

ಜ್ಞಾನಭಾರತಿಯಲ್ಲಿ ಆರೈಕೆ ಕೇಂದ್ರ:

ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿಗಳು, ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ಸ್ಥಾಪನೆ ಮಾಡಲಾಗಿರುವ ನೂತನ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇವತ್ತಿನಿಂದಲೇ ರೋಗಿಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಇಲ್ಲಿ ಸಕಲ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಭಾಗದಲ್ಲಿ ಪಾಸೀಟೀವ್ ಬಂದವರನ್ನು ಇಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ನಾವು ಆರೈಕೆ ಕೇಂದ್ರಗಳನ್ನು ಮಾಡುತ್ತಿದ್ದೇವೆ. ಅದರ ಜತೆಜತೆಯಲ್ಲೇ ಹಾಲಿ ನಡೆಯುತ್ತಿರುವ ಕೇಂದ್ರಗಳ ನಿರ್ವಹಣೆಯನ್ನು ಸರಾಗವಾಗಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ:

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡದ, ಪರಿಸ್ಥಿತಿ ದುರ್ಲಾಭ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗಿದೆ. ಈಗಾಗಲೇ ವಿಕ್ರಂ ಆಸ್ಪತ್ರೆ, ಜಯನಗರದ ಅಪೋಲೋ ಆಸ್ಪತ್ರೆಗೆ ನೊಟೀಸ್ ನೀಡಲಾಗಿದೆ. ಇನ್ನು ಕೆಲ ಆಸ್ಪತ್ರೆಗಳು ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜತೆಗೆ ಸರಕಾರಕ್ಕೆ ನೀಡಬೇಕಾದ ಶೇ.50ರಷ್ಟು ಬೇಡ್’ಗಳನ್ನು ನೀಡದೇ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಸರಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ. ಇಂಥ ಆಸ್ಪತ್ರೆಗಳ ಮಾನ್ಯತೆ ರದ್ದು ಮಾಡುವುದರ ಜತೆಗೆ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

ಶ್ರೀರಾಮುಲು ಹೇಳಿಕೆಗೆ ಅಪಾರ್ಥ ಬೇಡ:

ಸೋಂಕಿತರ ಸಂಖ್ಯೆ ಹೀಗೆಯೇ ಬೆಳೆಯುತ್ತ ಹೋದರೆ ಮುಂದೆ ದೇವರೇ ಕಾಪಾಡಬೇಕು ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಅವರು ಹೇಳಿದ್ದಿಷ್ಟು..

ನಾವೆಲ್ಲರೂ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲೆಡೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ವೇಳೆ ಹಾಗೆ ಆಗದೇ ಇದ್ದಿದ್ದರೆ ನಿಜವಾಗಿಯೂ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಇಡೀ ದೇಶದಲ್ಲಿಯೇ ನಮ್ಮ ವ್ಯವಸ್ಥೆ ಅತ್ಯುತ್ತಮವಾಗಿದೆ. ನಮ್ಮೆಲ್ಲ ಕಾರ್ಯಗಳಿಗೆ ದೇವರ ದಯೆ ಇರಲಿ ಎನ್ನುವ ಅರ್ಥದಲ್ಲಿ ಶ್ರೀರಾಮುಲು ಹೇಳಿರಬಹುದು. ಅದಕ್ಕೆ ಅನ್ಯತಾ ಅರ್ಥ ಕಲ್ಪಿಸುವುದು ಬೇಡ ಎಂದು ಡಿಸಿಎಂ ಮಾಧ್ಯಮಗಳಿಗೆ ಮನವಿ ಮಾಡಿದರು.

ಸಿದ್ದು ಮೇಲೆ ಪ್ರಹಾರ:

ಕೋವಿಡ್ ನಿರ್ವಹಣೆಗಾಗಿ ನಡೆದಿರುವ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಪಕ್ಷ ನಾಯಕರು ಕೋವಿಡ್’ನಲ್ಲೂ ’ಕಲ್ಲು’ ಹುಡುಕುತ್ತಿದ್ದಾರೆ.  ಜನರ ಬಗ್ಗೆ ಕಾಳಜಿ ತೋರುವ ಬದಲು ಗೊಂದಲು ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಖರ್ಚಾಗಿರುವ ಪ್ರತಿ ಪೈಸೆಯ ಲೆಕ್ಕವನ್ನೂ ನಾವು ಕೊಡುತ್ತೇವೆ ಎಂದು ಡಿಸಿಎಂ ಉತ್ತರಿಸಿದರು.

Key words: visit- GKVK -covid care center-DCM -Ashwath Narayan- Officers

website developers in mysore