3 ದಿನಗಳ ಸಮಾವೇಶ, 30ಕ್ಕೂ ಹೆಚ್ಚು ದೇಶ, 300 ಕಂಪನಿ ಭಾಗಿ, ಹೈಬ್ರಿಡ್ ರೂಪದ  ಕಾರ್ಯಕ್ರಮ

 

ಬೆಂಗಳೂರು, ನ.16, 2021 : (www.justkannada.in news) ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಶೃಂಗಸಭೆಯ ಉದ್ಘಾಟನೆ ಸಮಾರಂಬದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಐಟಿ ವಿಷನ್ ಗ್ರೂಪ್ ಮುಖ್ಯಸ್ಥರಾದ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಷಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್ ಟಿಪಿಐ ನಿರ್ದೇಶಕ ಶೈಲೇಂದ್ರಕುಮಾರ್ ತ್ಯಾಗಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಬಿಟಿಎಸ್-2021 ನಿರ್ದಿಷ್ಟವಾಗಿ ಕರ್ನಾಟಕದ ಮತ್ತು ಒಟ್ಟಾರೆಯಾಗಿ ಭಾರತದ ಶಕ್ತಿ ಪ್ರದರ್ಶನದ ವೇದಿಕೆ. ತಂತ್ರಜ್ಞಾನವಿಲ್ಲದೆ ಬದುಕಿನ ಕಲ್ಪನೆಯೂ ಸಾಧ್ಯವಿಲ್ಲ. ಇದರ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಇದೇ ಈ ನಮ್ಮ  ಗುರಿ ಎಂದ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಸಮಾವೇಶದ ಬಗ್ಗೆ ಹೇಳಿದಿಷ್ಟು…

ಅಮೆರಿಕ, ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ ಭಾಗಿ

ಸಮಾವೇಶದಲ್ಲಿ ಭಾರತ-ಅಮೆರಿಕ ವಾಣಿಜ್ಯ ಸಮಿತಿ ಇದೇ ಮೊದಲ ಬಾರಿಗೆ ಸಹಭಾಗಿತ್ವ ನೀಡುತ್ತಿದೆ. ಜೊತೆಗೆ, ಐರೋಪ್ಯ ಒಕ್ಕೂಟ ಕೂಡ ಪಾಲ್ಗೊಳ್ಳುತ್ತಿದೆ. ಅಮೆರಿಕದಲ್ಲಿ ಜೀವವಿಜ್ಞಾನ ಮತ್ತು ಐಟಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಆವಿಷ್ಕಾರಗಳ ಲಾಭವನ್ನು ರಾಜ್ಯವು ಪಡೆದುಕೊಳ್ಳಲಿದೆ. ಹಾಗೆಯೇ ಐರೋಪ್ಯ ಒಕ್ಕೂಟದೊಂದಿಗೆ ನವೋದ್ಯಮ ವಲಯ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಸಚಿವ ಡಾ.ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದರು.

ಬಿಟಿಎಸ್-2021 ನಡೆಯುತ್ತಿರುವ ಸಮಯದಲ್ಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಂತಹುದೇ ಶೃಂಗಸಭೆ (ಸಿಡ್ನಿ ಡೈಲಾಗ್ ಕಾನ್ಫರೆನ್ಸ್) ನಡೆಯುತ್ತಿದೆ. ಇದನ್ನು ಉದ್ದೇಶಿಸಿ ನ.18ರಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಆಗಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಟಿಎಸ್ ನಲ್ಲಿ ನಡೆಯುವ ಎರಡು ಮತ್ತು ಸಿಡ್ನಿಯಲ್ಲಿ ನಡೆಯುವ ಒಂದು ಕಾರ್ಯಕ್ರಮದ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ಇರಲಿದೆ.

75ಕ್ಕೂ ಹೆಚ್ಚು ಗೋಷ್ಠಿಗಳು, 7 ಸಂವಾದಗಳು

ಬಿಟಿಎಸ್-2021ರ ಅಂಗವಾಗಿ ನಾಲ್ಕು ವೇದಿಕೆಗಳಲ್ಲಿ ಒಟ್ಟು 75 ಗೋಷ್ಠಿಗಳನ್ನು ಮತ್ತು 7 ಸಂವಾದಗಳನ್ನು ಏರ್ಪಡಿಸಲಾಗಿದೆ.  ಇವುಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಮೂಲಕ ನಾವೀನ್ಯತೆಯ ಬೆಳವಣಿಗೆ, ಫಿನ್-ಟೆಕ್ ಭವಿಷ್ಯದ ಹೆಜ್ಜೆಗಳು, ಕೃಷಿ, ಜೀವವಿಜ್ಞಾನ ಸಂಶೋಧನೆ, ಮಹಿಳಾ ಉದ್ಯಮಶೀಲತೆಯ ಸವಾಲುಗಳು, ಶೈಕ್ಷಣಿಕ ತಂತ್ರಜ್ಞಾನ, ಮುಂದಿನ ತಲೆಮಾರಿನ ವೈದ್ಯಕೀಯ ತಂತ್ರಜ್ಞಾನ, ವಂಶವಾಹಿ ಆಧಾರಿತ ಔಷಧಿಗಳು, ಜೀನ್ ಎಡಿಟಿಂಗ್, ಸೆಮಿಕಂಡಕ್ಟರ್, ಕ್ಯಾನ್ಸರ್ ಚಿಕಿತ್ಸೆ, ಸೆಲ್ ಥೆರಪಿ, ಸೈಬರ್ ಸೆಕ್ಯುರಿಟಿ, ವೈಮಾಂತರಿಕ್ಷ ಮುಂತಾದ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವಂತಹ ವಿಚಾರ ವಿನಿಮಯ ನಡೆಯಲಿವೆ.

ಜೈಶಂಕರ್, ಚೇತನ್ ಭಗತ್, ಶಿವನ್ ಉಪನ್ಯಾಸ

ಶೃಂಗದಲ್ಲಿ ಏರ್ಪಡಿಸಿರುವ ಗೋಷ್ಠಿಗಳನ್ನು ಉದ್ದೇಶಿಸಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್, ಇಸ್ರೋ ಅಧ್ಯಕ್ಷ ಕೆ.ಶಿವನ್,  ಭಾರತ ಮೂಲದ ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್, ಹೆಸರಾಂತ ಲೇಖಕ ಚೇತನ್ ಭಗತ್, ಜಗದ್ವಿಖ್ಯಾತ ಕ್ಯಾನ್ಸರ್ ವೈದ್ಯ-ವಿಜ್ಞಾನಿ ಡಾ.ಸಿದ್ಧಾರ್ಥ ಮುಖರ್ಜಿ, ವಿಶ್ವ ಆರ್ಥಿಕ ವೇದಿಕೆಯ ಸ್ಥಾಪಕ ಪ್ರೊ.ಕ್ಲಾಸ್ ಶ್ವಾಬ್, ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ಅನಂತ್ ಮಹೇಶ್ವರಿ, ಆಪಲ್ ಇಂಕ್ ಸಮೂಹದ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಹ್ಮಣ್ಯಂ, ಕ್ರಿಂಡೈಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್, ಟೆಲ್ಸ್ಟ್ರಾ ಕಂಪನಿಯ ಪಾಲುದಾರ ಗ್ಯಾವೆನ್ ಸ್ಟ್ಯಾಂಡನ್ ಮುಂತಾದವರು ಮಾತನಾಡಲಿದ್ದಾರೆ.

`ಬೆಂಗಳೂರು ನೆಕ್ಸ್ಟ್’ ಗೋಷ್ಠಿಗಳು

ತಂತ್ರಜ್ಞಾನದಲ್ಲಿ ಪಾರಮ್ಯ ಹೊಂದಿರುವ ಬೆಂಗಳೂರಿನ ಸಾಧನೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯಿಂದ ಶೃಂಗದಲ್ಲಿ ಪ್ರತ್ಯೇಕವಾಗಿ `ಬೆಂಗಳೂರು ನೆಕ್ಸ್ಟ್’ ನಾವೀನ್ಯತೆ ಮತ್ತು ನಾಯಕತ್ವ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಈ ಗೋಷ್ಠಿಗಳಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಾಷ್ ಕಂಪನಿ ಸಿಇಒ ದತ್ತಾತ್ರಿ ಸಾಲಗಾಮೆ, ಸರಕಾರದ ಐಟಿ ವಿಷನ್ ಗ್ರೂಪಿನ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್ ಮುಂತಾದವರು ಸಂವಾದ ನಡೆಸಿ ಕೊಡಲಿದ್ದಾರೆ.

ವರ್ಚುಯಲ್ ವೀಕ್ಷಣೆ, ನೋಂದಣಿಗೆ ಅವಕಾಶ

ಬಿಟಿಎಸ್-2021ರಲ್ಲಿ ವರ್ಚುಯಲ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, 320ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಇವುಗಳ ಪೈಕಿ ರಾಜ್ಯ ಸರಕಾರದ `ಎಲಿವೇಟ್’ ಯೋಜನೆಯಡಿ ಆಯ್ಕೆಯಾಗಿರುವ 100 ಮಳಿಗೆಗಳಿರಲಿವೆ. ಆಸಕ್ತರು ಮುಂದಿನ ಲಿಂಕ್ ಮೂಲಕ ನೋಂದಣಿ ಮಾಡಿಸಿಕೊಂಡು, ಸಮಾವೇಶವನ್ನು ವೀಕ್ಷಿಸಬಹುದು: https://www.bengalurutechsummit.com/web/it_forms/registration-conference.php

ಬಿಟಿಎಸ್-2021 ಮುಖ್ಯಾಂಶಗಳು

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಭಾರತ-ಅಮೆರಿಕ ಸಮಾವೇಶ, ಎಸ್ಟಿಪಿಐ/ಐಟಿ ರಫ್ತು ಪ್ರಶಸ್ತಿ ಪುರಸ್ಕಾರ, ಗ್ರಾಮೀಣ ಐಟಿ ಮತ್ತು ಬಯೋ ಕ್ವಿಜ್, ವಿಜ್ಞಾನ ಗ್ಯಾಲರಿ, ಸ್ಟಾರ್ಟಪ್ ಯೂನಿಕಾರ್ನ್ ಕಂಪನಿಗಳಿಗೆ ಸನ್ಮಾನ, ಜಾಗತಿಕ ನಾವೀನ್ಯತಾ ಮೈತ್ರಿಕೂಟ, ಭಾರತ ನಾವೀನ್ಯತಾ ಮೈತ್ರಿಕೂಟ ಮುಂತಾದ ಇನ್ನಿತರ ಪ್ರಮುಖ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

KEY WORDS : Vice-President Venkaiah Naidu – inaugurate- Bengaluru Tech Summit 2021