ಭಾರಿ ದಂಡಕ್ಕೆ ಬೆದರಿದ ಸವಾರರು!

ಬೆಂಗಳೂರು:ಆ-9: ರಾಜ್ಯದಲ್ಲಿ ಪರಿಷ್ಕೃತ ದಂಡದ ನಿಯಮ ಅನುಷ್ಠಾನವಾಗುತ್ತಿದ್ದಂತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ. ಹೊಸ ದಂಡ ಮೊತ್ತ ಜಾರಿಯಾಗುವ ಮುನ್ನ ಬೆಂಗಳೂರಿನಲ್ಲಿ ನಿತ್ಯ ಸರಾಸರಿ 36 ಸಾವಿರ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಜು.20ರ ನಂತರ ದಿನಕ್ಕೆ ಕೇವಲ 1 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ.

ದುಬಾರಿ ದಂಡದಿಂದ ಜೇಬಿಗೆ ಕತ್ತರಿ ಬೀಳುತ್ತದೆಂದು ಬೆದರಿದ ವಾಹನ ಸವಾರರು ನಿಯಮ ಉಲ್ಲಂಘಿಸುವ ಧೈರ್ಯ ಮಾಡುತ್ತಿಲ್ಲ. ಮತ್ತೊಂದೆಡೆ ದಂಡ ವಿಧಿಸುವ ಯಂತ್ರಗಳಲ್ಲಿ ತಾಂತ್ರಿಕ ದೋಷ ಹಾಗೂ ಪರಿಷ್ಕೃತ ದಂಡದ ನಿಯಮ ಜಾರಿಯಾಗಿ ಕೆಲವೇ ದಿನಗಳಾಗಿರುವುದರಿಂದ ಕೇಸ್​ಗಳ ಸಂಖ್ಯೆ ಕಡಿಮೆಯಾಗಿವೆ. ಇನ್ನಷ್ಟು ದಿನಗಳ ಕಳೆದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹಿರಿಯ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

ಪರಿಷ್ಕೃತ ದಂಡ ಜಾರಿಯಾಗುವ ಮೊದಲು (ಜು.1ರಿಂದ 23ರವರೆಗೆ) 3.63 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 7.81 ಕೋಟಿ ರೂ. ದಂಡ ವಸೂಲಿಯಾಗಿದೆ. ಅಂದರೆ ನಿತ್ಯ ಸರಾಸರಿ 36 ಸಾವಿರ ಪ್ರಕರಣಗಳು ವರದಿಯಾಗಿದೆ. ಹೊಸ ದಂಡದ ನಿಯಮ ಜಾರಿಯಾದ ನಂತರ 13 ದಿನಗಳಲ್ಲಿ (ಜು.24ರಿಂದ ಆ.7ರವರೆಗೆ) ಕೇವಲ 13,888 ಪ್ರಕರಣ ದಾಖಲಾಗಿದ್ದು, 98.27 ಲಕ್ಷ ರೂ. ದಂಡ ವಸೂಲಿಯಾಗಿದೆ. ಈ ಪ್ರಕಾರ ದಿನಕ್ಕೆ ಸರಾಸರಿ 1 ಸಾವಿರ ಪ್ರಕರಣ ದಾಖಲಾದಂತಾಗಿದೆ.

ಸಹಕರಿಸದ ಡಿಜಿಟಲ್ ಸಾಧನ: ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿದಿಸಲು ಬಳಸುವ ‘ಪರ್ಸ್​ನಲ್ ಡಿಜಿಟಲ್ ಅಸಿಸ್ಟೆಂಟ್’ (ಪಿಡಿಎ) ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪರಿಷ್ಕೃತ ದಂಡ ಶುಲ್ಕ ಜಾರಿಯಾದ ಜು.20ರಿಂದ ಬಹುತೇಕ ಪಿಡಿಎ ಉಪಕರಣಗಳು ಅಪ್​ಡೇಟ್ ಆಗಿಲ್ಲ. ಅಲ್ಲದೆ, ಅವುಗಳಲ್ಲಿ ಹೊಸ ದಂಡ ಶುಲ್ಕ ಸೇರ್ಪಡೆ ಮಾಡಲು ವಿಳಂಬವಾಗುತ್ತಿದೆ. ಇದರಿಂದ ಪೊಲೀಸರ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಇದು ಪ್ರಕರಣ ದಾಖಲು ಹಾಗೂ ದಂಡ ವಸೂಲಿಯಲ್ಲಿ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ.

ವಿಧಾನಮಂಡಲ ಅಧಿವೇಶನದ ಪೆಟ್ಟು

ಜುಲೈನಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿತ್ತು. ಈ ವೇಳೆ ಹಲವು ಸಂಘ, ಸಂಸ್ಥೆಗಳು ರಾಜಕೀಯ ಪಕ್ಷಗಳು ಸರ್ಕಾರದ ವಿರುದ್ಧ ನಗರದ ವಿವಿಧೆಡೆ ಬೃಹತ್ ಪ್ರತಿಭಟನೆ ನಡೆಸಿದ್ದವು. ಇದರಿಂದಾಗಿ ಯಾವುದೇ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತೆಯಿಂದ ವಿಧಾನಸೌಧದ ಭದ್ರತೆಗೆ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಟ್ರಾಫಿಕ್ ಸಮಸ್ಯೆ ನಿಯಂತ್ರಿಸುವಲ್ಲಿ ಭಾಗಿಯಾಗಿದ್ದರಿಂದ ದಂಡ ವಿಧಿಸಲು ಸಾಧ್ಯವಾಗಿಲ್ಲ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ಪೊಲೀಸರಿಗೆ ಲಂಚ ಕೊಟ್ಟು ಬಚಾವಾಗುತ್ತಿದ್ದಾರೆಯೇ?

ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿ ಬೀಳುವ ವಾಹನಸವಾರರು ಪೊಲೀಸರಿಗೆ ಒಂದಷ್ಟು ಹಣ ಲಂಚ ಕೊಟ್ಟು ಬಚಾವಾಗುವ ಆರೋಪಗಳೂ ಕೇಳಿಬಂದಿವೆ. ಈ ಹಿಂದೆ ವಿಮೆ ರಹಿತ ವಾಹನ ಚಾಲನೆಗೆ 500 ರೂ. ದಂಡ ವಿಧಿಸಲಾಗುತ್ತಿತ್ತು. ಪರಿಷ್ಕೃತ ದಂಡದಿಂದ 1,000 ರೂ. ಬೀಳುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು 200 ರೂ. ಅಥವಾ 300 ರೂ ಲಂಚ ಕೊಟ್ಟು ಭಾರಿ ದಂಡದಿಂದ ತಪ್ಪಿಸಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಕೇಸ್​ಗಳ ಸಂಖ್ಯೆ ಇಳಿಕೆಯಾಗಲು ಇದೂ ಒಂದು ಕಾರಣ ಎನ್ನಲಾಗುತ್ತಿದೆ.

ವಾಹನ ಸವಾರರು ದುಬಾರಿ ದಂಡ ತೆರಲು ಸಾಧ್ಯವಾಗದೇ ಇರುವುದರಿಂದ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಹೀಗಾಗಿ, ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿವೆ.

| ರವಿಕಾಂತೇಗೌಡ, ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ)


ಕೃಪೆ:ವಿಜಯವಾಣಿ

ಭಾರಿ ದಂಡಕ್ಕೆ ಬೆದರಿದ ಸವಾರರು!
vehicle-riders-following-traffic-rules-due-to-heavy-fine