ನಾಳೆಯಿಂದ 18- 44 ವಯೋಮಿತಿಯ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ-ಡಿಸಿಎಂ ಅಶ್ವಥ್ ನಾರಾಯಣ್..

kannada t-shirts

ಬೆಂಗಳೂರು,ಮೇ,21,2021(www.justkannada.in):  18ರಿಂದ 44 ವರ್ಷ ವಯೋಮಿತಿಯೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ನಾಳೆಯಿಂದ (ಮೇ 22) ಕೋವಿಡ್ ಲಸಿಕೆ ಕೊಡಲಾಗುವುದು ಹಾಗೂ ಒಂದೆರಡು ತಿಂಗಳಲ್ಲಿ ರಾಜ್ಯದ 500 ಕಡೆ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್  ಹೇಳಿದರು.jk

ಬೆಂಗಳೂರಿನಲ್ಲಿ ಬಿಜೆಪಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಭಣ್, ರಾಜ್ಯವೇ ಲಸಿಕೆ ನೀಡಲು ಅದರ ಮೇಲೆ ವ್ಯವಸ್ಥಿತ ನಿಗಾ ಇರಿಸಲು ಪ್ರತ್ಯೇಕ ಸಾಫ್ಟ್‌ ವೇರ್‌ವೊಂದನ್ನು ಅಭಿವೃದ್ಧಿ ಮಾಡಲಾಗಿದ್ದು, ಅದನ್ನು ಕೋವಿನ್‌ ಪೋರ್ಟಲ್‌ ಜತೆ ಲಿಂಕ್ ಮಾಡಲಾಗುತ್ತಿದೆ. ಜೂನ್ 1ರಿಂದ ಈ ಪೋರ್ಟಲ್ ಕೆಲಸ‌ ಮಾಡಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1,90,000 ಜನರಿಗೆ ಈಗ ಕೊವ್ಯಾಕ್ಸಿನ್‌ ಸೆಕೆಂಡ್‌ ಡೋಸ್‌ ಕೊಡಬೇಕಿದೆ. ಇದರಲ್ಲಿ 1,70,000 ಕೊವ್ಯಾಕ್ಸಿನ್‌ ಲಸಿಕೆ ಸಿದ್ಧವಿದ್ದು, ಈಗಾಗಲೇ ಕೊಡಲು ಪ್ರಾರಂಭಿಸಲಾಗಿದೆ.  ಕೋವಿಶೀಲ್ಡ್‌ ಕೂಡ ಸ್ಟಾಕ್‌ ಇದೆ. ಲಸಿಕೆ ಅಭಿಯಾನ ತೀವ್ರಗೊಳಿಸಲು ಮುಂಚೂಣಿಯ ಕಾರ್ಯಕರ್ತರ ಪಡೆ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಆದ್ಯತೆಯ ಮೇಲೆ ಅವರೆಲ್ಲರಿಗೂ ಲಸಿಕೆ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಾಳೆಯಿಂದ ಮಾಧ್ಯಮ ಸಿಬ್ಬಂದಿ, ಚಿತಾಗಾರ ಸಿಬ್ಬಂದಿ, ವಿಕಲಚೇತನರು, ಆರೋಗ್ಯ ಕಾರ್ಯಕರ್ತರು ಮತ್ತವರ ಕುಟುಂಬ ಸದಸ್ಯರು, ಕೋವಿಡ್‌ ಕೆಲಸಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಸರಕಾರಿ ಸಾರಿಗೆ ಸಿಬ್ಬಂದಿ, ವಿದ್ಯುತ್‌ ಮತ್ತು ನೀರು ಪೂರೈಕೆ ಸಿಬ್ಬಂದಿಗೆ ವ್ಕಾಕ್ಸಿನ್‌ ಕೊಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಇನ್ನೂ ಸೋಂಕಿತರಾಗಿ ಗುಣಮುಖರಾದವರಿಗೆ ತಕ್ಷಣವೇ ಲಸಿಕೆ ಕೊಡಬೇಕಿಲ್ಲ. ಮೂರು ತಿಂಗಳ ನಂತರ ಲಸಿಕೆ ಕೊಟ್ಟರೂ ಸಾಕು. ಕೋವಿಶೀಲ್ಡ್ ಪಡೆದವರಿಗೆ 4-6 ವಾರದಲ್ಲಿ ಸೆಕೆಂಡ್‌ ಡೋಸ್‌ ಕೊಡಬೇಕಿತ್ತು. ಆ ಅಂತರವನ್ನು 16 ವಾರಗಳ‌ ವರೆಗೆ ವಿಸ್ತರಿಸಲಾಗಿದೆ. ಡಿಸೆಂಬರ್‌ ಹೊತ್ತಿಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಕೊಡಲಾಗುವುದು. ಕೋವಿಡ್‌ ನಿಯಂತ್ರಣಕ್ಕೆ ಲಸಿಕೆಯೊಂದೇ ಅಂತಿಮ ಪರಿಹಾರ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

500 ಆಕ್ಷಿಜನ್‌ ಜನರೇಟರ್‌:

ಇನ್ನು ಒಂದೆರಡು ತಿಂಗಳಲ್ಲಿಯೇ ರಾಜ್ಯದ ಎಲ್ಲೆಡೆ 400ರಿಂದ 500 ಆಕ್ಸಿಜನ್‌ ಜನರೇಟರ್‌ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಅಲ್ಲಿಯೂ ಐಸಿಯುಗಳನ್ನು ಹಾಕುತ್ತಿದ್ದೇವೆ ಎಂದು ಅವರು ಹೇಳಿದರು.

ಒಂದು ಆಕ್ಸಿಜನ್‌ ಬೆಡ್‌ ಗೆ 20,000 ಲೀಟರ್‌ ಆಮ್ಲಜನಕ ಬೇಕು. ಈ ಲೆಕ್ಕದಲ್ಲಿ ನೋಡಿದರೆ, ರಾಜ್ಯದಲ್ಲಿರುವ ಎಲ್ಲ ಆಕ್ಸಿಜನ್‌ ಬೆಡ್‌ಗಳಿಗೆ ಆಗಿ ಮಿಕ್ಕುವಷ್ಟು ಆಮ್ಲಜನಕದ ತುರ್ತು ಸಂಗ್ರಹ ನಮ್ಮಲ್ಲಿದೆ. ಮೂರನೇ ಅಲೆಯ ದೃಷ್ಟಿ ಇಟ್ಟುಕೊಂಡು ಇನ್ನು ಹೆಚ್ಚೆಚ್ಚು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 3,000 ವೆಂಟಿಲೇಟರ್‌, 25,000 ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚುವರಿಯಾಗಿ ಒಂದು ವರ್ಷದ ಅವಧಿಯಲ್ಲಿ ಮಾಡಿದ್ದೇವೆ. ಇದರ ಪ್ರಮಾಣವನ್ನು ಮತ್ತೂ  ಹೆಚ್ಚಿಸುತ್ತೇವೆ. ಇನ್ನು ಪಿಎಂ ಕೇರ್‌ನಿಂದ 315 ಕೋಟಿ ಹಣದ ಜತೆಗೆ ವೆಂಟಿಲೇಟರ್‌ ಗಳನ್ನೂ ನಮಗೆ ಕೊಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅಂಕಿ-ಅಂಶ ಕೊಟ್ಟರು.vaccine-18-44-age-group-frontline-worriors-tomorrow-dcm-ashwath-narayan

ಈಗಾಗಲೇ ನೋಂದಣಿಯಾಗಿರುವ, ನೋಂದಣಿಯಾಗದ ಎಷ್ಟೋ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ಗಳನ್ನು ನೀಡಿದ್ದೇವೆ. ಎಲ್ಲೋ ಕುಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಕ್ಸಿಜನ್‌ ದೊರೆಯುತ್ತಿದೆ. ಹಾಗೆಯೇ ಸಣ್ಣ ಪ್ರಮಾಣದಲ್ಲಿದ್ದ ಆಕ್ಸಿಜನ್‌ ಸಾಗಾಣಿಕೆ ವ್ಯವಸ್ಥೆ ಈಗ ದೊಡ್ಡ ಪ್ರಮಾಣದಲ್ಲಿ ಆಗಿದ್ದು, ಪ್ರತ್ಯೇಕ ರೈಲುಗಳಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಬ್ಲ್ಯಾಕ್‌ ಫಂಗಸ್‌ಗೆ ಔಷಧಿ:

ಬ್ಲ್ಯಾಕ್‌ ಫಂಗಸ್‌ ಬೇರೆ ರಾಜ್ಯಗಳಲ್ಲಿ ಮೊದಲು ಕಂಡು ಬಂದಿತ್ತು. ನಮ್ಮಲ್ಲಿ ಈಗ ಕಂಡುಬಂದಿದೆ. ಈಗ ಒಂದು ನಿರ್ದಿಷ್ಟ ಔಷಧಿಗೆ ಬೇಡಿಕೆ ಬಂದಿದೆ. ಆದರೆ, ಇದಕ್ಕೆ ಹಲವಾರು ಔಷಧಿಗಳಿದ್ದರೂ ಜನರು ಮಾತ್ರ ʼಲೈಸೋಸೋಮಲ್ ಅಮಪೋಟೆರಿಸನ್ʼ (liposomal amphotericin) ಔಷಧಿಯನ್ನೇ ಕೇಳುತ್ತಿದ್ದಾರೆ. ʼಲೈಸೋಸೋಮಲ್ ಅಮಪೋಟೆರಿಸನ್-ಬಿʼ ಸೇರಿ ಇನ್ನೂ ಪರ್ಯಾಯ ಔಷಧ ಇದ್ದರೂ ಜನರು ಅದಕ್ಕೇ ಮುಗಿಬೀಳುತ್ತಿದ್ದಾರೆ. ಮೆಡಿಕಲ್‌ ಸ್ಟೋರ್‌ಗಳಲ್ಲಿಯೂ ಪರ್ಯಾಯ ಔಷಧಿಗಳು ಸಿಗುತ್ತಿವೆ. ಈ ತಿಂಗಳ 14ರಂದು  ʼಲೈಸೋಸೋಮಲ್ ಅಮಪೋಟೆರಿಸನ್ʼ ಔಷಧಿಗೆ ಬೇಡಿಕೆ ಸಲ್ಲಿಸಿದ್ದೇವೆ. ಇನ್ನು ಕೆಲ ದಿನಗಳಲ್ಲಿಯೇ ನಮ್ಮ ಕೈ ಸೇರಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಅಂದಹಾಗೆ, ಬ್ಲ್ಯಾಕ್‌ ಫಂಗಸ್‌ ಅನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಲಾಗಿದೆ.  ಖಾಸಗಿ ಆಸ್ಪತ್ರೆಗಳು ರಹಸ್ಯವಾಗಿ ಚಿಕಿತ್ಸೆ ನೀಡುವಂತಿಲ್ಲ, ಯಾರೂ ಪಡೆಯುವಂತೆಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಔಷಧ ಹಂಚಿಕೆಯಲ್ಲಿ ತಾರತಮ್ಮ ಇಲ್ಲ:

ರಾಜ್ಯಕ್ಕೆ ಔಷಧಿ ಹಂಚಿಕೆಯಲ್ಲಿ ಕೇಂದ್ರ ಸರಕಾರ ತಾರತಮ್ಮ ಎಸಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಡಾ.ಅಶ್ವತ್ಥನಾರಾಯಣ; “ಮಹಾರಾಷ್ಟ್ರ, ಗುಜರಾಜ್‌ ಮುಂತಾದ ರಾಜ್ಯಗಳಲ್ಲಿ ಜನವರಿಯಿಂದಲೇ ಎರಡನೇ ಅಲೆ ಆರಂಭವಾಯಿತು. ರಾಜ್ಯದಲ್ಲಿ ಏಪ್ರಿಲ್‌ನಿಂದ ಶುರುವಾಯಿತು. ಅಲ್ಲೆಲ್ಲ ಸೋಂಕಿತರು ಹೆಚ್ಚಾದ ಕಾರಣ ಮೊದಲು ಆದ್ಯತೆಯ ಮೇರೆಗೆ ಔಷಧಿ, ಆಕ್ಸಿಜನ್‌, ರೆಮಿಡಿಸಿವಿರ್‌ಗಳನ್ನು ಕೇಂದ್ರವು ಆ ರಾಜ್ಯಗಳಿಗೆ ಪೂರೈಕೆ ಮಾಡಿತು” ಎಂದರು.

ರಾಜ್ಯದಲ್ಲಿ ಏಪ್ರಿಲ್‌ನಿಂದ ಸೋಂಕು ವಿಪರೀತ ಹೆಚ್ಚಲು ಶುರುವಾಯಿತು. ತಕ್ಷಣವೇ ರಾಜ್ಯ ಸರಕಾರ ಕೇಂದ್ರಕ್ಕೆ ಎಲ್ಲ ಮಾಹಿತಿ ನೀಡಿತು. ಕೂಡಲೇ ಕೇಂದ್ರವೂ ರಾಜ್ಯಕ್ಕೆ ಅಗತ್ಯವಾದ ಎಲ್ಲ ಔಷಧಿ ಒದಗಿಸಲು ತುರ್ತಾಗಿ ಲೈನಪ್‌ ಮಾಡಿ ಕ್ರಮ ವಹಿಸಿತು. ತಕ್ಷಣವೇ ಎಲ್ಲ ಔಷಧಿಗಳ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಯಿತು. ಅದಾದ ಕೆಲ ದಿನಗಳಲ್ಲಿಯೇ ರಾಜ್ಯಕ್ಕೆ ಪೂರೈಕೆ ಆರಂಭವಾಯಿತು. ರೆಮಿಡಿಸಿವರ್‌ ಹಂಚಿಕೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಹಂಚಿಕೆ ಆಗಿರುವುದು ರಾಜ್ಯಕ್ಕೆ ಮಾತ್ರ. ಈ ತಿಂಗಳ 23ರ ಹಂಚಿಕೆಯ ರೆಮಿಡಿಸಿವರ್ ಬಂದರೆ ಮಹಾರಾಷ್ಟ್ರಕ್ಕಿಂತ ನಮಗೇ ಹೆಚ್ಚು ಸಿಕ್ಕಂತಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.‌ಆರ್.‌ವಿಶ್ವನಾಥ್‌ ಉಪಸ್ಥಿತರಿದ್ದರು.

Key words: Vaccine- 18-44 age group -frontline worriors- tomorrow-DCM Ashwath narayan

website developers in mysore