ಮೋದಿ ಮೆಚ್ಚಿಸಲು ಉರಿಗೌಡ, ನಂಜೇಗೌಡ ಹೆಸರು ಸೃಷ್ಟಿಸಲಾಯಿತಾ? ಇದು ಮಂಡ್ಯ, ಒಕ್ಕಲಿಗರ ಕುಲಕ್ಕೆ ಮಾಡಿದ ಘೋರ ಅಪಮಾನ- ಹೆಚ್.ಡಿಕೆ.

ಬೆಂಗಳೂರು,ಮಾರ್ಚ್,14,2023(www.justkannada.in):  ಪ್ರಧಾನಿ ಮೋದಿ ಮಂಡ್ಯ ಭೇಟಿ ವೇಳೆ ಉರಿಗೌಡ ಮತ್ತು ನಂಜೇಗೌಡ ಮಹಾದ್ವಾರ ನಿರ್ಮಿಸಿ ನಂತರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೆ ಅದನ್ನ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತರಾಟೆ ತೆಗೆದುಕೊಂಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಹೆಚ್.ಡಿ ಕುಮಾರಸ್ವಾಮಿ,  ಇತಿಹಾಸ ತಿರುಚಿ ಕಪೋಲಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ, ಕೋಮುದ್ವೇಷದ ವಿಷಬೀಜ ಬಿತ್ತಿ, ಅದನ್ನು ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷವೇ ಬಿಜೆಪಿ. ಈಗ ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಹೊಸ ಸುಳ್ಳಿನಕಥೆ ಸೃಷ್ಟಿ ಮಾಡಿ ಅಸಲಿ ಇತಿಹಾಸವನ್ನು ಕೊಲ್ಲುವ ಹುನ್ನಾರ ನಡೆಸಿದೆ ಎಂದು ಕಟು ಟೀಕೆ ಮಾಡಿದ್ದಾರೆ.

ಟಿಪ್ಪುವನ್ನು ಕೊಂದವರೆಂದು ಚರಿತ್ರೆಯಲ್ಲಿ ಇಲ್ಲದ ಉರಿಗೌಡ, ನಂಜೇಗೌಡರೆಂಬ ಒಕ್ಕಲಿಗ ಕಾಲ್ಪನಿಕ ಹೆಸರುಗಳನ್ನು ಸೃಷ್ಟಿಸಿ ಪ್ರಧಾನಿ ನರೇಂಧ್ರ ಮೋದಿ ಅವರ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದು ಮಂಡ್ಯಕ್ಕೆ, ಅದರಲ್ಲೂ ಸಮಸ್ತ ಒಕ್ಕಲಿಗರ ಕುಲಕ್ಕೆ ಮಾಡಿದ ಘೋರ ಅಪಮಾನ.

ಮೇಲಾಗಿ, ಮಹಾದ್ವಾರಕ್ಕೆ ಮೊದಲೇ ಇದ್ದ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಹೆಸರನ್ನು ಮುಚ್ಚಿಟ್ಟು, ಅವರ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ ದುರುದ್ದೇಶವೇನು? ಇದು ಪರಮಪೂಜ್ಯರಿಗೆ ಮಾಡಿದ ಅಪಮಾನ ಎಂದು ಹೆಚ್,ಡಿಕೆ ಕಿಡಿಕಾರಿದ್ದಾರೆ.

ಇಂತಹ ಚಿಲ್ಲರೆ, ದ್ವೇಷದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದು ಎನ್ನುವುದು  ಭ್ರಮೆ, ಮೂರ್ಖತನದ ಪರಮಾವಧಿ. ಹೆಸರು ಬದಲಿಸಿದ ನಂತರ ಸಾರ್ವಜನಿಕರು, ಸ್ಥಳೀಯರು, ಕನ್ನಡಪರ, ಪ್ರಗತಿಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದೇ ತಡ, ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಕಾಲ್ಪನಿಕ ಹೆಸರಗಳನ್ನು ತೆರವುಗೊಳಿಸಿ ಗೌರವ ಉಳಿಸಿಕೊಂಡಿದೆ.

ಇಂತಹ ಲಜ್ಜಗೇಡಿ ನಡೆ ರಾಜ್ಯ ಸರಕಾರದ ನೀಚ ರಾಜಕಾರಣಕ್ಕೆ ಸಾಕ್ಷಿ.ಪ್ರಧಾನಿ ಶ್ರೀ ಮೋದಿ ಅವರನ್ನು ಮೆಚ್ಚಿಸಲು ಉರಿಗೌಡ, ನಂಜೇಗೌಡ ಹೆಸರುಗಳನ್ನು ಸೃಷ್ಟಿಸಲಾಯಿತಾ? ಅಥವಾ ಆ ಷಡ್ಯಂತ್ರಕ್ಕೆ ರಾಜ್ಯ ಸರಕಾರದ ಒಪ್ಪಿಗೆಯೂ ಇತ್ತಾ? ಇಲ್ಲವೇ, ಇಂಥ ಹೊಣೆಗೇಡಿ ಕೃತ್ಯದ ಬಗ್ಗೆ ಪ್ರಧಾನಿ ಕಚೇರಿಗೂ ಮಾಹಿತಿ ಇತ್ತಾ? ತಿಳಿಯಬೇಕಿದೆ ಎಂದಿದ್ದಾರೆ.

ಸುಳ್ಳುಗಳಿಗೆ ಆಯಸ್ಸು ಬಹಳ ಕಡಿಮೆ ಎನ್ನುವುದನ್ನು ಇನ್ನಾದರೂ ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು. ಸುಳ್ಳುಗಳ ಮಹಾ ಕಾರ್ಖಾನೆಯನ್ನೇ ತೆರೆದು ʼಸುಳ್ಳುಸೃಷ್ಟಿʼ ಮಾಡುತ್ತಿರುವ ಬಿಜೆಪಿಯ ವಕ್ರದೃಷ್ಟಿ ಈಗ ಸ್ವಾಭಿಮಾನದಿಂದ ಭೂಮಿತಾಯಿಯನ್ನು ನಂಬಿ ಬದುಕುತ್ತಿರುವ ಒಕ್ಕಲಿಗರ ಮೇಲೆ ಬಿದ್ದಿದೆ.

ಇಡೀ ಒಕ್ಕಲಿಗ ಸಮುದಾಯವನ್ನು ಅಪಹಾಸ್ಯಕ್ಕೆ ಗುರಿ ಮಾಡುವ, ಇಡೀ ಸಮುದಾಯಕ್ಕೆ ಅಪಕೀರ್ತಿ ತರುವ ಹಾಗೂ ಟಿಪ್ಪುವನ್ನು ಕೊಂದ ಕಳಂಕವನ್ನು ಒಕ್ಕಲಿಗರಿಗೆ ಅಂಟಿಸುವ ಹೀನ ಕೆಲಸವನ್ನು ರಾಜ್ಯ ಬಿಜೆಪಿ ಮಾಡಲು ಹೊರಟಿದೆ. ಇದನ್ನು ಒಕ್ಕಲಿಗರು ಸಹಿಸರು ಎಂದು ಹೆಚ್.ಡಿಕೆ ಎಚ್ಚರಿಕೆ ನೀಡಿದರು.

ಒಂದೆಡೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗರನ್ನು ಓಲೈಸುವ ಕೆಲಸ ಮಾಡುತ್ತಿರುವ ಬಿಜೆಪಿಗರು, ಇನ್ನೊಂದೆಡೆ ಕೊಲೆಯ ಕಳಂಕವನ್ನು ಮೆತ್ತಿ, ಅದೇ ಒಕ್ಕಲಿಗ ಸಮುದಾಯಕ್ಕೆ ಐತಿಹಾಸಿಕವಾಗಿ ಶಾಶ್ವತ ಕಪ್ಪುಚುಕ್ಕೆ ಮೆತ್ತಲು ಷಡ್ಯಂತ್ರ ರೂಪಿಸಿದ್ದಾರೆ.

ಮತಕ್ಕಾಗಿ ಮಾನಕ್ಕೂ ಅಂಜದ ಬಿಜೆಪಿ, ಸುಳ್ಳಿನ ಮೂಲಕ ಚುನಾವಣೆ ಗೆಲ್ಲಲು ಹೊರಟಂತಿದೆ. ರೋಡ್ ಶೋ ಮೂಲಕ ಮಂಡ್ಯದ ಜನರಿಗೆ ಮೋಡಿ ಮಾಡುವುದು ಎಂದರೆ ಇದೇನಾ? ಇಂಥ ವಿದ್ರೋಹಿ ಕೃತ್ಯಗಳನ್ನು ಒಕ್ಕಲಿಗರು ಮಾತ್ರವಲ್ಲ, ಸೌಹಾರ್ದತೆಯಿಂದ ರಾಜ್ಯದಲ್ಲಿ ಬಾಳುತ್ತಿರುವ ಯಾವ ಸಮುದಾಯವೂ ಸಹಿಸದು ಎಂದು ಹೆಚ್.ಡಿಕೆ ವಾಗ್ದಾಳಿ ನಡೆಸಿದರು.

ತಾಳ್ಮೆ, ಸ್ವಾಭಿಮಾನ, ಸ್ವಂತಿಕೆ, ಸೇವೆ, ಸೌಹಾರ್ದತೆ, ಸಮನ್ವಯ ತತ್ವದ ತಳಹದಿಯ ಮೇಲೆ ಬೆಳೆದಿದೆ ಒಕ್ಕಲಿಗ ಸಮುದಾಯ. ದ್ವೇಷ ಮತ್ತು ಹಸಿಸುಳ್ಳುಗಳನ್ನು ಅವರೆಂದು ಪೋಷಿಸಿ ಬೆಳೆಸಿದವರಲ್ಲ. ಒಂದೀಡಿ ಸಮುದಾಯವನ್ನು ಇಂಥ ನಿಕೃಷ್ಟ ರಾಜಕಾರಣಕ್ಕೆ ಇಳಿಸಿ, ಬಳಸಬಹುದು ಎಂಬ ಪಾಪಿಚಿಂತನೆಯೇ ಬಿಜೆಪಿಯ ಹೊಲಸು ರಾಜಕಾರಣದ ಪರಾಕಾಷ್ಠೆ.

ಅಭಿವೃದ್ಧಿಯ ಮೇಲೆ ಚುನಾವಣೆಯಲ್ಲಿ ಮತ ಕೇಳಬೇಕಿದ್ದ ಬಿಜೆಪಿ, ಮತ ಫಸಲಿಗೆ ಅಡ್ಡದಾರಿಗಳನ್ನು ಕಂಡುಕೊಂಡು ಸಮುದಾಯ, ಧರ್ಮಗಳ ಜತೆ ಚಲ್ಲಾಟ ಆಡುತ್ತಿದೆ. ಸ್ವಾಭಿಮಾನಿ ಒಕ್ಕಲಿಗರ ಆತ್ಮಾಭಿಮಾನವನ್ನು ಕೆಣಕಿ ರಾಜ್ಯ ಬಿಜೆಪಿ ಬಹುದೊಡ್ಡ ತಪ್ಪು ಮಾಡಿದೆ ಎಂದು ಹೆಚ್.ಡಿಕೆ ಗುಡುಗಿದ್ದಾರೆ.

Key words: Urigowda-Nanjegowda name- created -insult – Mandya- Okkaliga-HDK