ಲಾಡ್ಲೇ ಮಶಾಕ್ ದರ್ಗಾದಲ್ಲಿ ಉರಸ್ ಮತ್ತು ಶಿವಲಿಂಗ ಪೂಜೆ : ಪೊಲೀಸ್ ಬಿಗಿ ಬಂದೋಬಸ್ತ್.

 

ಕಲಬುರಗಿ,ಫೆಬ್ರವರಿ,18,2023(www.justkannada.in):  ಆಳಂದ ತಾಲೂಕಿನ ಲಾಡ್ಲೇ ಮಶಾಕ್ ದರ್ಗಾದಲ್ಲಿ ಉರಸ್ ಮತ್ತು ಶಿವಲಿಂಗ ಪೂಜೆ ಸಲ್ಲಿಕೆಗೆ ಕೋರ್ಟ್ ಅನುಮತಿ ನೀಡಿದ್ದು ಇಂದು ಪೂಜೆ ಸಲ್ಲಿಸುವ ಕಾರಣ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ದರ್ಗಾದ ಸುತ್ತಮುತ್ತ ಪ್ರತಿಯೊಂದು ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದು, ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಭದ್ರತೆಗೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ದರ್ಗಾದಲ್ಲಿ ಪೂಜೆ ಸಲ್ಲಿಸಲು ಹಿಂದೂ, ಮುಸ್ಲಿಮರಿಗೆ ಕೋರ್ಟ್ ಅವಕಾಶ ನೀಡಿದೆ. ಬೆಳಗ್ಗೆ ಉರುಸ್ ಆಚರಿಸಲು ಅವಕಾಶ ನೀಡಿದ್ದು, ಮುಸ್ಲಿಂ ಸಮುದಾಯದ 15 ಜನರಿಗೆ ಮಾತ್ರ ಉರುಸ್​ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಶಿವಲಿಂಗ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಹಿಂದೂ ಸಮುದಾಯದ 15 ಜನ ಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಈ ಮಧ್ಯೆ, ದರ್ಗಾದಲ್ಲಿ ಉರುಸ್ ಆರಂಭವಾಗಿದ್ದು, ಮುಸ್ಲಿಂ ಸಮುದಾಯದ ಜನರು ದರ್ಗಾ ಪ್ರವೇಶಿಸಿದ್ದಾರೆ. ದರ್ಗಾದ ಎರಡನೇ ಗೇಟ್ ಮೂಲಕ ಮುಸ್ಲಿಂ ಸಮುದಾಯದ ಜನರು ಒಳ ಪ್ರವೇಶಿಸಿದ್ದಾರೆ. ಪೊಲಿಸ್ ಸಿಬ್ಬಂದಿ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿ ಒಳಗೆ ಬಿಟ್ಟಿದ್ದಾರೆ.

ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅವಕಾಶ ನೀಡಿದ್ದ ವಕ್ಫ್ ಟ್ರಿಬ್ಯುನಲ್ ಆದೇಶವನ್ನು ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿತ್ತು. ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಹದಿನೈದು ಜನರಿಗೆ ಅವಕಾಶ ನೀಡಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ದರ್ಗಾ ಕಮೀಟಿ, ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ಆಲಿಸಿದ ಹೈಕೋರ್ಟ್​ ನ್ಯಾಯಮೂರ್ತಿ ಜೆ.ಎಂ.ಖಾಜಿ, ಶಿವಲಿಂಗ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

Key words: Uras –Shivlinga- worship -allowed -Ladley Mashak Dargah