ಸಂಪುಟ ವಿಸ್ತರಣೆ ಬೆನ್ನಲ್ಲೆ ಅಸಮಾಧಾನ ಸ್ಪೋಟ: ನಾವು ಕೆಲ ಶಾಸಕರು ಬೆಂಗಳೂರಲ್ಲಿ ಸಭೆ ಸೇರಿ ಚರ್ಚಿಸುತ್ತೇವೆ ಎಂದ ಶಾಸಕ ತಿಪ್ಪಾರೆಡ್ಡಿ…

ಬೆಂಗಳೂರು,ಆ,20,2019(www.justkannada.in):  ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಂಪುಟಕ್ಕೆ 17 ಮಂದಿ ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಬೆನ್ನಲ್ಲೆ ಸಚಿವ ಸ್ಥಾನ ಸಿಗದಿದ್ದ ಶಾಸಕರಿಂದ ಅಸಮಾಧಾನ ಸ್ಪೋಟಗೊಂಡಿದೆ.

ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಅವರು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ನಾವು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇವೆ. ನಮ್ಮನ್ನು ಪರಿಗಣಿಸದೆ ಇರುವುದು ಬೇಸರ ತಂದಿದೆ. ನಾವು  ಕೆಲ ಶಾಸಕರು ಬೆಂಗಳೂರಲ್ಲಿ ಸಭೆ ಸೇರಿ ಚರ್ಚಿಸುತ್ತೇವೆ. ಪಕ್ಷದ ಹೈಕಮಾಂಡ್ ಮತ್ತು ಸಿಎಂ ಬಿಎಸ್ ವೈಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಮಾಧ್ಯಮದ ಮುಂದೆ ತಮ್ಮ ಅಸಮಾಧಾನ ಹೊರ ಹಾಕಿದ ಬಿಜೆಪಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ, ‘ಸಚಿವ ಸಂಪುಟ ರಚನೆಯ ಪಟ್ಟಿ ನೋಡಿ ನಮಗೆ ಬೇಸರ ತಂದಿದೆ.  ಹಿರಿತನ ಪಕ್ಷದ ನಿಷ್ಟಾವಂತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗೆಯೇ ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಬೇಸರವಿದೆ.  ಕೇವಲ ನನಗೆ ಮಾತ್ರ ಅಲ್ಲ. ನನ್ನಂತ ಅನೇಕ ಹಿರಿಯರಿಗೆ ನಿರಾಸೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು 6 ಬಾರಿ ಶಾಸಕನಾಗಿದ್ದೇನೆ. ಈ ಬಾರಿಯೂ ಪಕ್ಷ ನನ್ನನ್ನ ಕಡೆಗಣಿಸಿದೆ.  ಹೀಗಾಗಿ ನನಗೆ ಅಸಮಾಧಾನ ಬೇಸರವಿದೆ ಎಂದಿದ್ದಾರೆ.

Key words: upset- cabinate-explosion – meeting – some MLA-G.H Thippareddy.