ಮೈಸೂರು ಭಾಗದಲ್ಲಿ ಶಿವರಾತ್ರಿ ವೇಳೆ ವಿಶೇಷ ಆಕರ್ಷಣೀಯ ಕೇಂದ್ರ ಬಿಂದುವಾಗಿವೆ ಎರಡು ಚಿನ್ನದ ಕೊಳಗಗಳು.

kannada t-shirts

ಮೈಸೂರು,ಫೆಬ್ರವರಿ,28,2022(www.justkannada.in):  ಹಿಂದೂಗಳಿಗೆ ಶಿವರಾತ್ರಿ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ. ಶಿವನಿಗೆ ಅಭಿಷೇಕ, ವಿಶೇಷ ಪೂಜೆ, ಉಪವಾಸ ಮೂಲಕ ಭಕ್ತರು ಶಿವಾರಾಧನೆ ಮಾಡುತ್ತಾರೆ. ಈ ಹಬ್ಬದಂದು ಎಲ್ಲೆಡೆಯಿರುವ ಶಿವನ ದೇವಾಲಯಗಳಲ್ಲಿ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗುತ್ತದೆ. ಅದರಲ್ಲೂ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯ ಹಾಗೂ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿಗೆ ಧರಿಸುವ ರಾಜಮನೆತನ ಕೊಡುಗೆ ನೀಡಿರುವ ಚಿನ್ನದ ಕೊಳಗ  ವಿಶೇಷ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ಹೌದು,  ಮೈಸೂರು ಅರಮನೆಯ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿಗೆ ಧರಿಸುವ ಚಿನ್ನದ ಕೊಳಗ ವರ್ಷಕ್ಕೆ ಒಂದೇ ದಿನ ಮಾತ್ರ ಲಿಂಗಕ್ಕೆ ಧಾರಣೆ ಮಾಡುವುದು ವಿಶೇಷ. ಇನ್ನು ಮಲೆ ಮಹದೇಶ್ವರಬೆಟ್ಟದಲ್ಲಿನ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಅಭಿಷೇಕ ನೆರವೇರಿದ ಬಳಿಕ ಲಿಂಗಕ್ಕೆ ಚಿನ್ನದ ಕೊಳಗ ಧಾರಣೆ ಮಾಡಲಾಗುತ್ತದೆ. ಈ ಎರಡೂ ದೇವಾಲಯಗಳಲ್ಲಿ ಧರಿಸುವ ಚಿನ್ನದ ಕೊಳಗ ಮೈಸೂರು ರಾಜವಂಶಸ್ಥರು ಕೊಡುಗೆ ನೀಡಿರುವುದು ವಿಶೇಷ.

ಮೈಸೂರು ಸಂಸ್ಥಾನದ ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರು 11 ಕೆಜಿ ತೂಕದ ಚಿನ್ನದ ಕೊಳಗ(ಮುಖವಾಡ)ವನ್ನು 1954ರಲ್ಲಿ ತ್ರಿನೇಶ್ವರಸ್ವಾಮಿ ದೇವಾಲಯಕ್ಕೆ ಅರ್ಪಿಸಿದ್ದರು. ಅಂದಿನಿಂದ ಶಿವರಾತ್ರಿ ದಿನದಂದು ತ್ರಿನೇಶ್ವರಸ್ವಾಮಿ ಮೂಲ ವಿಗ್ರಹ(ಲಿಂಗ)ಕ್ಕೆ ಧರಿಸಿ ವಿಶೇಷ ಪೂಜೆ ಸಲ್ಲಿಸುವ ಪರಂಪರೆ ಅನುಸರಿಸಲಾಗುತ್ತಿದೆ. ಈ ಚಿನ್ನದ ಕೊಳಗವನ್ನು ವರ್ಷವಿಡಿ ಬಿಗಿಭದ್ರತೆಯಲ್ಲಿ ಖಜಾನೆಯಲ್ಲಿ ಸರಕ್ಷಿತವಾಗಿಡಲಾಗುತ್ತದೆ.

ಶಿವರಾತ್ರಿ ಮುನ್ನಾ ದಿನ ಬಿಗಿ ಭದ್ರತೆಯಲ್ಲಿ ಮುಜರಾಯಿ ತಹಶೀಲ್ದಾರ್ ಹಾಗೂ ಚಾಮುಂಡಿಬೆಟ್ಟದ ಸಮೂಹ ದೇವಾಲಯಗಳ ಆಡಳಿತಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಖಜಾನೆಯಿಂದ ಅರಮನೆ ಆವರಣದಲ್ಲಿನ ತ್ರಿನೇಶ್ವರ ದೇವಾಲಯಕ್ಕೆ ತರಲಾಗುತ್ತದೆ.

ಶಿವರಾತ್ರಿ ಹಬ್ಬದ ದಿನ ಮುಂಜಾನೆ 4 ರಿಂದ 6 ಗಂಟೆಯೊಳಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನದ ಕೊಳಗ ಧರಿಸಿ ನಂತರ ಹೂವಿನ ಅಲಂಕಾರ ಮಾಡಿ, ರಾಜವಂಶಸ್ಥರ ಹೆಸರಲ್ಲಿ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬೆಳಗ್ಗೆ 6 ಗಂಟೆಯಿಂದ ಭಕ್ತರ ದರ್ಶನಕ್ಕೆ ಪ್ರವೇಶಾವಕಾಶ ನೀಡಲಾಗುತ್ತದೆ. ಅಂದು ಮಧ್ಯರಾತ್ರಿ 12 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮರುದಿನ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೊಳಗವನ್ನು ಲಿಂಗದಿಂದ ತೆಗೆದು ಬಿಗಿ ಭದ್ರತೆಯಲ್ಲಿ ಮತ್ತೆ ಖಜಾನೆಗೆ ಕೊಂಡೊಯ್ದು ಸುರಕ್ಷಿತವಾಗಿಡಲಾಗುತ್ತದೆ.

ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದಂದು ಜಾತ್ರೆಯಂತೆ ವಿಶೇಷ ಪೂಜೆ ನೆರವೇರುತ್ತದೆ. ದಶಕಗಳ ಹಿಂದಿನವರೆಗೂ ಅರಮನೆ ಆವರಣದಲ್ಲಿ ಜಾಗರಣೆ ಮಾಡಲು ಹರಿಕಥೆ ಸೇರಿದಂತೆ ವಿವಿಧ ಭಕ್ತಿಗೀತೆ, ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಇದರಿಂದ ದೇವಾಲಯದಲ್ಲಿ ರಾತ್ರಿಯಿಡಿ ದರ್ಶನ ಪಡೆಯಲು ಬರುತ್ತಿದ್ದ ಭಕ್ತರು ದರ್ಶನ ಪಡೆದ ನಂತರ ಅರಮನೆ ಮುಂಭಾಗದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ಇದರಿಂದ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಚಿನ್ನದ ಕೊಳಗ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಇನ್ನು ಕೊಳಗದಲ್ಲಿ ಒಂದು ಚಿನ್ನದ ಜಟಾಮುಕುಟ, ಒಂದು ಚಿನ್ನದ ಕರ್ಣಕುಂಡಲ, ಒಂದು ಚಿನ್ನದ ತಾಟಂಕ, ಎರಡು ಲೋಲಕ, ಎರಡು ಕೆಂಪಿನ ಹರಳಿನ ಓಲೆಗಳು, ಹಣೆಯಲ್ಲಿ ಕೆಂಪು ಕಲ್ಲಿನ ತಿಲಕ, ಒಂದು ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆ ಹೊಂದಿದೆ. ಒಟ್ಟಾರೆಯಾಗಿ ಈ ಚಿನ್ನದ ಕೊಳಗವು ಏಳು ಕೆಂಪು ಕಲ್ಲುಗಳು, ಬೆಳ್ಳಿಯ ಅರ್ಧ ಚಂದ್ರ ಮತ್ತು ಬೆಳ್ಳಿಯ ಒಂದು ತಿರುಪು ಹೊಂದಿದೆ.

ಮಲೆಮಹದೇಶ್ವರ ಬೆಟ್ಟದ ಕೊಳಗ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿರುವ ಚಿನ್ನದ ಕೊಳಗ ಸುಮಾರು 20 ಕೆಜಿ ಹೆಚ್ಚಿನ ತೂಕ ಹೊಂದಿದೆ. ಕೃಷ್ಣರಾಜ ಒಡೆಯರ್ ಅವರು ಈ ಸುವರ್ಣ ಕೊಳಗದ ಸೇವೆ ನೀಡಿದವರಾಗಿದ್ದು, ನೋಡಲು ಆಕರ್ಷಕವಾಗಿದೆ. ಈ ಚಿನ್ನದ ಕೊಳಗವು ಹಣೆಯಲ್ಲಿ ರತ್ನಖಚಿತವಾದ 176 ವಜ್ರಗಳು, 21 ರೂಬಿಗಳನ್ನು ವಿಭೂತಿ ಮಾದರಿಯಲ್ಲಿ ಮೂರು ಪಟ್ಟೆಯಲ್ಲಿ ಅಳವಡಿಸಲಾಗಿದೆ. ಗಂಗಾದೇವಿಗೆ ಒಂದು ರತ್ನದ ಮೂಗುತಿ, ಬುಲಾಕುವಿನ ಆಭರಣ, ಶಿರದ ಭಾಗದಲ್ಲಿ ಅರ್ಧ ಚಂದ್ರ, ಚಂದ್ರಾಕೃತಿಯು 110 ಫ್ಲಾಟ್ ವಜ್ರಗಳಿಂದ ಕೂಡಿದೆ. ಈ ರತ್ನ ಖಚಿತ ವಿಭೂತಿ ತಾಟಂಕಿ ಸರ್ಪಕುಂಡಲ ಗಂಗೆ ಅಲಂಕಾರದ 9 ನಗಗಳನ್ನು ಹೊಂದಿರುವ ಈ ನಾಗಾಭರಣ 1930ರಲ್ಲಿ ಮಲೆ ಮಹದೇಶ್ವರಸ್ವಾಮಿಗೆ ಒಪ್ಪಿಸಲಾಗಿದೆ.

ಅಂದಿನಿಂದ ಪ್ರತಿದಿನ ಮುಂಜಾನೆ ಅಭಿಷೇಕ ಮುಗಿದ ಬಳಿಕ ಲಿಂಗಕ್ಕೆ ಧಾರಣೆ ಮಾಡಿ ಅಲಂಕಾರ ಮಾಡಲಾಗುತ್ತದೆ.  ಮೈಸೂರಿನ ತ್ರಿನೇಶ್ವರ ಸ್ವಾಮಿ ದೇವಾಲಯದ ಲಿಂಗಕ್ಕೆ ಹೋಲಿಸಿದರೆ ಮಹದೇಶ್ವರರ ಲಿಂಗವು ಗಿಡ್ಡದ್ದಾಗಿದ್ದರೂ ಹೆಚ್ಚು ಅಗಲವಿದೆ. ಚಿನ್ನದ ಕೊಳಗ ಧರಿಸುವ ವಿಶೇಷ ಸೇವೆಯೂ ಭಕ್ತರು ಮಾಡಿಸಬಹುದಾಗಿದೆ. ಭಕ್ತರು 900 ರೂ. ಪಾವತಿಸಿ ಚಿನ್ನದ ಕೊಳಗದ ಧಾರಣೆ ಸೇವೆ ಮಾಡಿಸಬಹುದಾಗಿದೆ.

ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ದೇವಾಲಯಕ್ಕೆ ಮೈಸೂರು ಮಹಾರಾಜರ ಕೊಡುಗೆ ಸ್ಮರಿಸುವ ನಿಟ್ಟಿನಲ್ಲಿ ಈ ಹಿಂದೆ ಚಾಮರಾಜನಗರದ ಅಪರ ಜಿಲ್ಲಾಧಿಕಾರಿಯೂ ಹಾಗೂ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೂ ಆಗಿದ್ದ ಸಿ.ಎಲ್.ಆನಂದ್ ಅವರು ಮಹದೇಶ್ವರಸ್ವಾಮಿಯ ಕೊಳಗದ ವಿಶೇಷತೆ ಬಗ್ಗೆ ಚಿಕ್ಕ ಬುಕ್ ಲೆಟ್ ಪ್ರಕಟಿಸಿದ್ದಾರೆ. ಈ ಬುಕ್‍ ಲೆಟ್‍ನಲ್ಲಿ ಕೊಳಗದಲ್ಲಿರುವ ಆಭರಣ, ವಜ್ರಗಳ ಬಗ್ಗೆ ಮಾಹಿತಿಯೂ ಒಳಗೊಂಡಿದೆ. ಅಲ್ಲದೆ ಮೈಸೂರು ಮಹರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರು ಕೊಡುಗೆ ನೀಡಿದ್ದನ್ನೂ ಪ್ರಸ್ತಾಪಿಸಲಾಗಿದೆ.

ಕೃಪೆ.

ಎಂ.ಟಿ.ಯೋಗೇಶ್ ಕುಮಾರ್

ಮೈಸೂರು.

Key words: two golden- special attraction -Mysore -Shivaratri.

 

website developers in mysore