ಟಿ.ವಿ.ಮೋಹನ್‌ ದಾಸ್‌ ಪೈ ಅವರಿಗೆ ರಾಣಿ ಚೆನ್ನಮ್ಮ ವಿವಿ ಗೌರವ ಡಾಕ್ಟರೇಟ್‌ ಪದವಿ ಪ್ರದಾನ…

ಬೆಂಗಳೂರು,ಜನವರಿ,11,2021(www.justkannada.in):  ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮೋಹನ್‌ ದಾಸ್‌ ಪೈ ಅವರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಯನ್ನು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯ್‌ ವಾಲ ಅವರು ಪ್ರದಾನ ಮಾಡಿದರು.

jk-logo-justkannada-mysore

ರಾಜಭವನದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ವಜೂಭಾಯ್‌ ವಾಲ ಅವರು, ಪೈ ಅವರಿಗೆ ಈ ಪದವಿಯನ್ನು ಪ್ರದಾನ ಮಾಡಿದರಲ್ಲದೆ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಪೈ ಅವರ ಸೇವೆ ಅನುಕರಣೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮೋಹನ್‌ ದಾಸ್‌ ಪೈ ಅವರು, ಇನ್ಫೋಸಿಸ್‌ನಂಥ ಪ್ರತಿಷ್ಠಿತ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಆ ಕಂಪನಿಗೆ ಆರ್ಥಿಕ ಸದೃಢತೆಯನ್ನು ತಂದುಕೊಟ್ಟವರು. ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಸಲ್ಲುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದರು.

ಸಂಶೋಧನೆಗೆ ಹೆಚ್ಚು ಒತ್ತು ಬೇಕೆಂದ ಪೈ:

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಮೋಹನ್‌ದಾಸ್‌ ಪೈ; ಶೈಕ್ಷಣಿಕವಾಗಿ ರಾಜ್ಯವು ಉನ್ನತ ಮಟ್ಟದಲ್ಲೇ ಇದ್ದರೂ ಸಂಶೋಧನೆಗೆ ಇನ್ನಷ್ಟು ಒತ್ತು ನೀಡಲೇಬೇಕು.‌ ಕೊನೆ ಪಕ್ಷ 100 ಕೋಟಿ ರೂ.ಗಳಷ್ಟು ಮೊತ್ತವನ್ನಾದರೂ ಸಂಶೋಧನಾ ಕ್ಷೇತ್ರಕ್ಕೇ ಮೀಸಲಿಡಬೇಕು. ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಆರ್ಥಿಕ ಸಹಕಾರವನ್ನು ಒದಗಿಸಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಬರುತ್ತದೆ ಹಾಗೂ ದೇಶದ ಅಭಿವೃದ್ಧಿಗೆ ವೇಗ ಬರುತ್ತದೆ ಎಂದರು.

ಶಾಲೆ-ಕಾಲೇಜುಗಳಲ್ಲಿ ಕಲಿಯುವ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಉದಾರವಾಗಿ ಒದಗಿಸಬೇಕು. ಮೂಲಸೌಕರ್ಯಗಳನ್ನು ಪರಿಣಾಮಕಾರಿ ಒದಗಿಸಬೇಕು ಎಂದು ಪೈ ಮನವಿ ಮಾಡಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರ ಗೌಡ, ಕುಲಸಚಿವ ಪ್ರೊ.ಬಸವರಾಜ್‌ ಪದ್ಮಶಾಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: TV Mohan Das Pai – honorary doctorate -rani Chennamma university.