ಬಿಬಿಎಂಪಿಯ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ ಜತೆ ಕೈಜೋಡಿಸಿದ ಟ್ರ್ಯಾಫಿಕ್ ಪೊಲೀಸರು

ಬೆಂಗಳೂರು:ಆ-31:(www.justkannada.in) ಬೆಂಗಳೂರು ನಗರದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಆರಂಭಿಸಿದ ‘ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌’ (ನನ್ನ ಬೀದಿ ಸರಿಪಡಿಸಿ) ಯೋಜನೆಯೊಂದಿಗೆ ಈಗ ಟ್ರ್ಯಾಫಿಕ್ ಪೊಲೀಸರು ಕೂಡ ಕೈಜೋಡಿಸಲು ಮುಂದಾಗಿದ್ದಾರೆ.

ನಗರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಾಲಿಕೆ ಜಾರಿಗೆ ತಂದಿರುವ ಫಿಕ್ಸ್ ಮೈ ಸ್ಟ್ರೀಟ್ ಅಪ್ಲಿಕೇಶನ್ ಅನ್ನು ಬಳಸಲು ಎಲ್ಲಾ ಟ್ರಾಫಿಕ್ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ.

ಆಗಸ್ಟ್ 28 ರಂದು ನೇಮಕಗೊಂಡಿರುವ ಜಂಟಿ ಪೊಲೀಸ್ ಆಯುಕ್ತರು (ಸಂಚಾರ ವಿಭಾಗ) ಬೆಂಗಳೂರಿನ ಸಮಸ್ಯೆಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ಎಲ್ಲಾ ಟ್ರಾಫಿಕ್ ಇನ್ಸ್ ಪೆಕ್ಟರ್ ಗಳಿಗೆ ಟೆಕ್ಸ್ಟ್ ಮೆಸೇಜ್ ರವಾನಿಸಿದ್ದು, ಬಿಬಿಎಂಪಿಯ ಫಿಕ್ಸ್ ಮೈ ಸ್ಟ್ರೀಟ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಈ ಮೂಲಕಎಲ್ಲೇ ಸಮಸ್ಯೆಗಳನ್ನು ಕಂಡುಬಂದರೂ ಅವುಗಳ ಫೋಟೋ ಹಾಗೂ ಸ್ಥಳಗಳ ಮಾಹಿತಿಯೊಂದಿಗೆ ಸಂದೇಶ ಕಳುಹಿಸಬೇಕು. ನಂತರ ಬಿಬಿಎಂಪಿ ಈ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಲಿದೆ ಎಂದು ತಿಳಿಸಿದ್ದಾರೆ.

ರಸ್ತೆಗುಂಡಿಗಳು, ಫುಟ್ ಪಾತ್ ಮೇಲೆ ಮರದಲ್ಲಿ ತೂಗಾಡುತ್ತಿರುವ ಕೇಬಲ್ ಗಳು, ಸಂಚಾರ ದಟ್ಟಣೆ, ನೋಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ ಹೀಗೆ ಯಾವುದೇ ಸಮಸ್ಯೆಗಳಾಗಿದ್ದರೂ ಟ್ರ್ಯಾಫಿಕ್ ಪೊಲೀಸ್ ಸಿಬ್ಬಂದಿ ತಕ್ಷಣ ಅವುಗಳ ಫೋಟೋ ತೆಗೆದು ಯಾವ ಸ್ಥಳ ಎಂಬ ಬಗ್ಗೆ ಪಾಲಿಕೆಗೆ ಮೆಸೆಜ್ ರವಾನಿಸಬೇಕು. ಈ ಬಗ್ಗೆ ತಕ್ಷಣ ಬಿಬಿಎಂಪಿ ಸ್ಪಂದಿಸಲಿದೆ. ಈ ಮೂಲಕ ನಗರದಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದು ನೂತನ ಜಂಟಿ ಪೊಲೀಸ್ ಆಯುಕ್ತರ (ಸಂಚಾರ ವಿಭಾಗ) ಯೋಜನೆ.

ಫಿಕ್ಸ್ ಮೈ ಸ್ಟ್ರೀಟ್ ಅಪ್ಲಿಕೇಶನ್ ಮೂಲಕ ಹಲವುಬಾರಿ ದೂರು ನೀಡಿದರೂ ಸಮಸ್ಯೆಗಳ ಬಗ್ಗೆ ಪಾಲಿಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿಬಂದಿದೆ. ಆದರೀಗ ಬಿಬಿಎಂಪಿ ಜತೆ ಟ್ರಾಫಿಕ್ ಪೊಲೀಸರು ಕೂಡ ಕೈಜೋಡಿಸಿರುವುದರಿಂದ ಇನ್ನಾದರೂ ನಗರದಲ್ಲಿನ ಸಮಸ್ಯೆಗಳು ಪರಿಹಾರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಬಿಬಿಎಂಪಿಯ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ ಜತೆ ಕೈಜೋಡಿಸಿದ ಟ್ರ್ಯಾಫಿಕ್ ಪೊಲೀಸರು

Traffic police to team up with BBMP, via app