ಬಯಲುಶೌಚ ಮುಕ್ತ ಬೆಂಗಳೂರು: ಎಲ್ಲಾ ಹಣ ಎಲ್ಲಿ ಹೋಯಿತು? ಅದೊಂದು ದೊಡ್ಡ ರಹಸ್ಯ.

ಬೆಂಗಳೂರು, ಆಗಸ್ಟ್ 27, 2021 (www.justkannada.in): ಬೆಂಗಳೂರು ಮಹಾನಗರ ಒಂದೇ ದಿನದಲ್ಲಿ ಬಯಲುಶೌಚ ಮುಕ್ತವಾಗಲಿಲ್ಲ. ಇತರೆ ಮಾನದಂಡಗಳನ್ನು ಪೂರೈಸುವುದರೊಂದಿಗೆ ಬೆಂಗಳೂರು ನಗರವನ್ನು ಬಯಲುಶೌಚ ಮುಕ್ತ ನಗರವನ್ನಾಗಿ ಮಾಡಲು ಬಿಬಿಎಂಪಿಗೆ ೩,೫೦೦ ಶೌಚಾಲಯಗಳನ್ನು ನಿರ್ಮಿಸಬೇಕಾಯಿತು. ಇದಕ್ಕಾಗಿ ಬಿಬಿಎಂಪಿಯು ಪ್ರತಿ ಬಡ ಕುಟುಂಬಕ್ಕೆ ತಮ್ಮ ಮನೆಗಳಲ್ಲಿಯೇ ಶೌಚಾಲಯ ನಿರ್ಮಿಸಿಕೊಳ್ಳಲು ತಲಾ ರೂ.೧೫,೦೦೦ ನೀಡಬೇಕಾಗಿತ್ತು. ಆದರೆ, ಫಲಾನುಭವಿಗಳು ತಿಳಿಸಿರುವಂತೆ ಎರಡು ವರ್ಷಗಳು ಕಳೆದರೂ ಇನ್ನೂ ಅವರಿಗೆ ಆ ಹಣ ತಲುಪಿಲ್ಲವಂತೆ.

೨೦೧೯ರಲ್ಲಿ ಬೆಂಗಳೂರಿಗೆ, ಸ್ವಚ್ಛ ಭಾರತ ಅಭಿಯಾನದ (ಎಸ್‌ಬಿಎಂ) ಗುರಿಗಳನ್ನು ತಲುಪಿದಕ್ಕಾಗಿ ಬಯಲುಶೌಚ ಮುಕ್ತ (ಒಡಿಎಫ್) ನಗರ ಎಂಬ ಬಿರುದು ಲಭಿಸಿತು. ಇದಕ್ಕಾಗಿ ಅಗತ್ಯವಿದ್ದ ಒಂದು ಮಾನದಂಡವೆಂದರೆ ವ್ಯಕ್ತಿಗತ ಕುಟುಂಬ ಶೌಚಾಲಯ ಯೋಜನೆ (individual household latrine application (IHHL)) ಕಾರ್ಯಕ್ರಮದಡಿ ೩,೫೦೦ ಶೌಚಾಲಯಗಳನ್ನು ನಿರ್ಮಿಸುವುದಾಗಿತ್ತು. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಬಡ ಕುಟುಂಬದವರು ಈ ಕಾರ್ಯಕ್ರಮದಡಿ ಎರಡು ವರ್ಷಗಳ ಹಿಂದೆಯೇ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಬಿಬಿಎಂಪಿ ಆಶ್ವಾಸನೆ ನೀಡಿದ್ದಂತೆ ಪ್ರತಿ ಫಲಾನುಭವಿಗೆ ರೂ.೧೩,೦೦೦ ಸಹಾಯಧನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಎಲ್ಲಾ ಫಲಾನುಭವಿಗಳಿಗೆ ಈ ಕಾರ್ಯಕ್ರಮದಡಿ ಮೊದಲನೆ ಕಂತಾಗಿ ರೂ.೨,೦೦೦ ಬಿಡುಗಡೆಗೊಳಿಸಿದ್ದು, ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡ ನಂತರ ಉಳಿದ ರೂ.೧೩,೦೦೦ ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು. ಆದರೆ ಕಳೆದ ಮೂರು ತಿಂಗಳಿಂದ ಫಲಾನುಭವಿಗಳು ಉಳಿಕೆ ಸಹಾಯಧನ ಪಡೆಯಲು ಬಿಬಿಎಂಪಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ಆದರೆ ಫಲಾನುಭವಿಗಳಿಗೆ ಉಳಿಕೆ ಹಣ ನೀಡಲು ಬಿಬಿಎಂಪಿಯ ಸಂಬಂಧಪಟ್ಟ ಸಿಬ್ಬಂದಿಗಳಾಗಲಿ, ಅಧಿಕಾರಿಗಳಿಗಾಗಲಿ ತಿಳಿಯುತ್ತಿಲ್ಲ. ಏಕೆಂದರೆ ಈ ಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಅಧಿಕಾರಿಗಳು ಈ ಯೋಜನೆ ಅನುಷ್ಠಾನದ ಅವಧಿಯಲ್ಲಿ ಬದಲಾಗುತ್ತಲೇ ಇದ್ದರು.

ಹೆರೊಹಳ್ಳಿಯ ಸೋಮಶೇಖರ್ ಎಂಬ ಹೆಸರಿನ ದಿನಗೂಲಿ ನೌಕರ ಹೇಳಿದಂತೆ ಬಿಬಿಎಂಪಿ ಆಶ್ವಾಸನೆ ನೀಡಿದ ನಂತರ ಅವರ ಕಾಲೋನಿಯಲ್ಲಿ ಸುಮಾರು ೫೬ ಜನರು ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರಂತೆ. “ನಾವೆಲ್ಲರೂ ಇದಕ್ಕೆ ಮುಂಚೆ ಕಾಮನ್ ಟಾಯ್ಲೆಟ್ ಅನ್ನು ಬಳಸುತ್ತಿದ್ದೆವು. ಬಿಬಿಎಂಪಿ ನಮಗೆ ಶೌಚಾಲಯ ನಿರ್ಮಾಣಕ್ಕೆ ತಲಾ ರೂ.೧೫,೦೦೦ ನೀಡುವುದಾಗಿ ಆಶ್ವಾಸನೆ ನೀಡಿತು. ಆದರೆ ಈವರೆಗೂ ನಮಗೆ ಆ ಹಣ ಲಭಿಸಿಲ್ಲ. ನಾನು ಇತರೆ ಫಲಾನುಭವಿಗಳೊಂದಿಗೆ ಕಳೆದ ಒಂದು ತಿಂಗಳಿಂದ ಆಗಾಗ ಬಿಬಿಎಂಪಿ ಕಚೇರಿಗೆ ಅಲೆಯುತ್ತಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಆ ಹಣವನ್ನು ಸಾಧ್ಯವಾದಷ್ಟು ಬೇಗ ನೀಡುವುದಾಗಿ ತಿಳಿಸಿದ್ದಾರೆ ಅಷ್ಟೇ,” ಎಂದು ವಿವರಿಸಿದರು.

ವೆಂಕಟೇಶ್ ಎಂಬ ಹೆಸರಿನ ಓರ್ವ ಸಫಾಯಿ ಕರ್ಮಚಾರಿ ವಿವರಿಸಿದಂತೆ ಈ ಯೋಜನೆಯ ಫಲಾನುಭವಿಗಳು ಜನಸಂಖ್ಯೆ ದಟ್ಟವಾಗಿರುವಂತಹ ಕಾಲೋನಿಗಳಲ್ಲಿ ವಾಸಿಸುತ್ತಿದ್ದಾರೆ. “ಮೊದಲಿಗೆ ಬಿಬಿಎಂಪಿ ಕೇವಲ ರೂ.೨,೦೦೦ ಬಿಡುಗಡೆ ಮಾಡಿದ್ದೇ ತಪ್ಪು. ಒಂದು ಶೌಚಾಲಯ ನಿರ್ಮಿಸಲು ಕನಿಷ್ಠ ರೂ.೧೩,೦೦೦ ಖರ್ಚಾಗುತ್ತದೆ. ಶೌಚಾಲಯಗಳನ್ನು ನಿರ್ಮಿಸಲು ಅನೇಕರು ಸಾಲ ಮಾಡಿಬಿಟ್ಟಿದ್ದಾರೆ. ಈಗಾಗಲೇ ಒಂದು ವರ್ಷವೇ ಕಳೆದುಹೋಗಿದೆ. ಆದರೆ, ಪಾಲಿಕೆಯು ಹಣ ಬಿಡುಗಡೆ ಮಾಡಲು ಇನ್ನೂ ಮೀನಮೇಷ ಎಣಿಸುತ್ತಿದೆ,” ಎಂದರು.

೨೦೧೮ರಲ್ಲಿ ೪,೫೦೦ಕ್ಕೂ ಹೆಚ್ಚಿನ ಸಂಖ್ಯೆಯ ಜನರು ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಬಿಬಿಎಂಪಿ ೩,೫೦೦ ಫಲಾನುಭವಿಗಳನ್ನು ಆಯ್ಕೆ ಮಾಡಿತು.

ಬಿಬಿಎಂಪಿಯ, ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ನಿರಂಜನ್ ಕೆ.ಎಂ. ಅವರು ಈ ಕುರಿತು ಮಾತನಾಡುತ್ತಾ, ಈ ಸಮಸ್ಯೆಯನ್ನು ಸಾಧ್ಯವಾದಷ್ಟೂ ಬೇಗ ಬಗೆಹರಿಸುತ್ತೇವೆ. “ಉಳಿಕೆ ಮೊತ್ತ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿದೆ. ಶೌಚಾಲಯಗಳ ಚಿತ್ರಗಳನ್ನು ಅಪ್‌ ಲೋಡ್ ಮಾಡುವಂತೆ ನಾವು ಈಗ ಫಲಾನುಭವಿಗಳಿಗೆ ತಿಳಿಸಿದ್ದೇವೆ. ಈ ಸಂಬAಧ ನಮ್ಮ ಕಿರಿಯ ಆರೋಗ್ಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳು ಜಾರಿಯಲ್ಲಿವೆ. ಸಾಧ್ಯವಾದಷ್ಟು ಬೇಗ ಉಳಿದ ಹಣವನ್ನು ನೀಡುತ್ತೇವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: toilet-Bangalore-Where – all money – big secret.