ಮನೆಗಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರ ವಿರುದ್ಧವೂ ದಾಖಲಾಯ್ತು ಪ್ರಕರಣ

ಬೆಂಗಳೂರು:ಆ-22:(www.justkannada.in) ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದು, ಇಬ್ಬರು ಕಳ್ಳರ ಜತೆಗೆ ಸಾರ್ವಜನಿಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.

ಬಂಧಿತ ಕಳ್ಳರನ್ನು ತಮಿಳುನಾಡಿನ ಕೃಷ್ಣಗಿರಿನಲ್ಲಿರುವ ಹೊಸೂರು ಮೂಲದ ಮುತ್ತು (33) ಮತ್ತು ಅವರ ಸಂಬಂಧಿ ಮಣಿ (31) ಎಂದು ಗುರುತಿಸಲಾಗಿದೆ. ಅತ್ತಿಬೆಲೆಯ ಭಕ್ತಿಪುರ ಗ್ರಾಮದಲ್ಲಿ ಸೋಮವಾರ ಮುಂಜಾನೆ 12.30 ರಿಂದ 12.45 ರ ನಡುವೆ ಈ ಘಟನೆ ನಡೆದಿದೆ.

ಹೊಸೂರಿನಿಂದ ರಾತ್ರಿ 7 ಗಂಟೆ ಸುಮಾರಿಗೆ ಇಬ್ಬರು ಅತ್ತಿಬೆಲೆಗೆ ಬಂದಿದ್ದಾರೆ. ಬೀಗಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡಲು ನಿರ್ಧರಿಸಿ ಬೀದಿಗಳಲ್ಲಿ ತಿರುಗಾಡಿ ಕೆಲ ಮನೆಗಳನ್ನು ಗುರುತಿಸಿದ್ದಾರೆ. ಮಧ್ಯರಾತ್ರಿ 12.30ರ ಸುಮಾರಿಗೆ ಭಕ್ತಿಪುರ ಗ್ರಾಮದ ಮನೆಯೊಂದಕ್ಕೆ ಮುಖ್ಯ ಬಾಗಿಲುಗಳನ್ನು ಒಡೆಯುವ ಮೂಲಕ ಪ್ರವೇಶ ಪಡೆದರು. ಮನೆಯಲ್ಲಿ ಮಲಗಿದ್ದ ಇಬ್ಬರು ಎಚ್ಚೊಂಡು, ಕಳ್ಳರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಬಂದ ಇಬ್ಬರೂ ಮತ್ತೊಂದು ಮನೆಗೆ ಬಂದು ಮತ್ತೊಂದು ಮನೆಯಿಂದ ದರೋಡೆ ಮಾಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೋಯರು ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೇ ಮರದ ತುಂಡುಗಳಿಂದ ಮನಬಂದಂತೆ ಕಳ್ಳರನ್ನು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಳ್ಳರು ರಕ್ತದ ಮಡುವಲ್ಲಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಗ್ರಾಮಸ್ಥರೇ ಕರೆದೊಯ್ದು ಬಳಿಕ ಅತ್ತಿಬೆಲೆ ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ.

ಕಳ್ಳರಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಕಾನೂನು ಕೈಗೆತ್ತಿಕೊಂಡ ಹಿನ್ನಲೆಯಲ್ಲಿ ಗ್ರಾಮಸ್ಥರ ವಿರುದ್ಧವೂ ಐಪಿಸಿ ಸೆಕ್ಷನ್ 324, 143 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಗಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರ ವಿರುದ್ಧವೂ ದಾಖಲಾಯ್ತು ಪ್ರಕರಣ
Thieves file plaint, get booked for theft too