ಸಿಎಂ ಗ್ರಾಮವಾಸ್ತವ್ಯದ ಬಗ್ಗೆ ಟೀಕೆ: ಜಿಂದಾಲ್ ಕಂಪನಿಗೆ ಭೂಮಿ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ ಎಂದ್ರು ಬಿ.ಎಸ್ ಯಡಿಯೂರಪ್ಪ…

ಮೈಸೂರು,ಜೂ,17,2019(www.justkannada.in): ಜಿಂದಾಲ್ ಕಂಪನಿಗೆ ಭೂಮಿ ಹಂಚುವ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಜಿಂದಾಲ್‌ಗೆ ಭೂಮಿ ಪರಾಭಾರೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಕೈಗೊಳ್ಳುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ನಾವು ಹೋರಾಟ ರೂಪಿಸಿದ್ದೆವು. ನಾನು ಧರಣಿ ಮಾಡುವುದು ವಾರದ ಹಿಂದೆಯೇ ಮುಖ್ಯಮಂತ್ರಿಗೆ ಗೊತ್ತಿತ್ತು. ಆಗಲೇ ಮಾತುಕತೆಗೆ ಕರೆಯಬಹುದಿತ್ತು. ಆದರೆ ನಾವು ಅಹೋರಾತ್ರಿ ಧರಣಿ ಮುಗಿಸಿ ಮೆರವಣಿಗೆ ಹೊರಡುವ ಹೊತ್ತಿಗೆ ಸಿಎಂ ಪತ್ರ ಬರೆದಿದ್ದಾರೆ. ಯಡಿಯೂರಪ್ಪ ಸಹಕಾರ ಕೊಡಲಿಲ್ಲ. ರಾಜಕೀಯ ಮಾಡುತ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಜಿಂದಾಲ್‌ನಂತಹ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ನನಗೆ ರಾಜ್ಯದ ಒಳಿತು ಮಾತ್ರ ಮುಖ್ಯ  ಎಂದರು.

ಮುಖ್ಯಮಂತ್ರಿಗಳೇ ಗ್ರಾಮವಾಸ್ತವ್ಯದ ನಾಟಕ ನಿಲ್ಲಿಸಿ…

ಸಿಎಂ ಶಾಲಾ ವಾಸ್ತವ್ಯಕ್ಕೆ ಬೇಸರ ವ್ಯಕ್ತಪಡಿಸಿದ ಯಡಿಯೂರಪ್ಪ,ಮುಖ್ಯಮಂತ್ರಿಗಳೇ, ಗ್ರಾಮವಾಸ್ತವ್ಯದ ನಾಟಕ ನಿಲ್ಲಿಸಿ. ಶೇಕಡ ೮೦ರಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮೈಸೂರು, ಚಾಮರಾಜನಗರ ಸೇರಿದಂತೆ ಬಹುತೇಕ ಜಿಲ್ಲೆಗಳಿಲ್ಲಿ ರಾಜ್ಯಾದ್ಯಂತ ತೀವ್ರ ಬರಗಾಲವಿದೆ. ಗ್ರಾಮ ವಾಸ್ತವ್ಯ ಮಾಡುವ ಬದಲು ಬರ ಪರಿಸ್ಥಿತಿ ನಿರ್ವಹಿಸುವ ಬಗ್ಗೆ ಗಮನ ಕೊಡಿ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಮಾನಿಟರ್ ಮಾಡಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಲಹೆ ನೀಡಿದರು.

Key words: There is no need do politics in terms of giving land to Jindal Company-BS Yeddyurappa.

#nopolitics  #JindalCompany #land #BSYeddyurappa.