ಜು. 20ಕ್ಕೆ ಶಿಕ್ಷಕರ ಕೌನ್ಸೆಲಿಂಗ್

ಬೆಂಗಳೂರು:ಜುಲೈ-13: ಬಹು ನಿರೀಕ್ಷೆಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ವೇದಿಕೆ ಸಜ್ಜಾಗಿದ್ದು, ಜು.20ರಂದು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 29ರಂದು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ಆರಂಭವಾಗಲಿದೆ. ವರ್ಗಾವಣೆಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರ ಕೊನೆಯದಿನವಾಗಿತ್ತು. ಒಟ್ಟಾರೆ ಪ್ರಕ್ರಿಯೆಗೆ ಈವರೆಗೆ 10 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ತಂತ್ರಾಂಶದಲ್ಲಿನ ದೋಷ ಮತ್ತು ಸುಳ್ಳು ದಾಖಲೆ ನೀಡಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಪ್ರಕ್ರಿಯೆಯಲ್ಲಿ ತೊಡಕಾಗಿತ್ತು.

ಆ ಆಕ್ಷೇಪಣೆಗಳನ್ನು ಸರಿಮಾಡಿ ಅಂತಿಮ ಆದ್ಯತಾ ಪಟ್ಟಿಯನ್ನು ಜು.18ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರು ಪ್ರಕಟಿಸಲಿದ್ದಾರೆ. ಆನಂತರದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಜುಲೈ ಮೊದಲ ವಾರದಿಂದಲೇ ಹಂತ ಹಂತವಾಗಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಟಿಡಿಎಸ್ ತಂತ್ರಾಂಶದಲ್ಲಿ ಶಿಕ್ಷಕರ ಮಾಹಿತಿಯನ್ನು ಸಮರ್ಪಕವಾಗಿ ನಮೂದಿಸದೇ ಇರುವುದು ಹಾಗೂ ವರ್ಗಾವಣೆ ತಂತ್ರಾಂಶದಲ್ಲಿನ ಕೆಲವು ದೋಷ ಗಳಿಂದ ನಿಗದಿತ ವೇಳಾಪಟ್ಟಿಯಂತೆ ಪ್ರಕ್ರಿಯೆಗಳು ನಡೆಯದೆ, ವಿಳಂಬ ಉಂಟಾಗಿತ್ತು. ಹೀಗಾಗಿ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್​ಸೈಟ್ http://www.schooleducation.kar.nic.in ನೋಡಬಹುದು.
ಕೃಪೆ:ವಿಜಯವಾಣಿ

ಜು. 20ಕ್ಕೆ ಶಿಕ್ಷಕರ ಕೌನ್ಸೆಲಿಂಗ್
teachers-transfer-counselling-starting-from-july-20