ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಪಾರ: ಸಚಿವ ಎಸ್.ಟಿ.ಸೋಮಶೇಖರ್

ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ

ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಡಾ.ರಾಧಾಕೃಷ್ಣನ್ ಅವರ ಜನ್ಮ ದಿನವಾದ ಇಂದು ನಾವೆಲ್ಲ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಶಿಕ್ಷಕರನ್ನು ಗುರುತಿಸಿ, ಗೌರವಿಸಬೇಕು. ಅವರ ತ್ಯಾಗ, ಪರಿಶ್ರಮವನ್ನು ಈ ದಿನದಂದು ನಾವೆಲ್ಲ ನೆನೆಯುವಂತಾಗಿದೆ. ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ತಾನು ಆರ್ಥಿಕವಾಗಿ, ಸಾಮಾಜಿಕವಾಗಿ ಎಷ್ಟೇ ಸಂಕಷ್ಟದಲ್ಲಿದ್ದರೂ ಶೈಕ್ಷಣಿಕವಾಗಿ ಪ್ರಗತಿಯ ದಾಪುಗಾಲಾಕುವುದರಲ್ಲಿ ಶಿಕ್ಷಕ ಸದಾ ಮುಂದಿರುತ್ತಾನೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕ ತೆರೆ ಹಿಂದೆಯೇ ನಿಂತು ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾನೆ. ಇಂದು ಭಾರತ ವೈಜ್ಞಾನಿಕವಾಗಿ, ಆರ್ಥಿಕವಾಗಿ ಜಗತ್ತಿನ ಮುಂದೆ ತಲೆಎತ್ತಿ ನಿಂತಿದೆ ಎಂದರೆ ಅದರ ಹಿಂದೆ ಶಿಕ್ಷಕರ ಪಾತ್ರವಿದೆ ಎಂದು ಹೇಳಿದರು.

ಸಮಾಜದ ಅಂಕುಡೊಂಕು ತಿದ್ದುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುವಲ್ಲಿ ಶಿಕ್ಷಕರು ಮುಂಚೂಣಿಯಲ್ಲಿದ್ದಾರೆ. ಇಂತಹ ಶಿಕ್ಷಕರ ಮುಂದೆ ಇಂದು ನಾನಾ ಸವಾಲುಗಳು ಎದುರಾಗಿದ್ದು ಅವೆಲ್ಲವನ್ನೂ ಮೆಟ್ಟಿ ನಿಲ್ಲುವ ಕೆಲಸವಾಗಬೇಕು ಎಂದು ಹೇಳಿದರು.

ಯುವಕರಲ್ಲಿ ಶಿಸ್ತು, ರಾಷ್ಟ್ರಪ್ರೇಮ, ಅಧ್ಯಯನದ ತುಡಿತ, ಸಾಧಿಸುವ ಛಲ ಮೂಡಿಸುವಂತಹ ಕಾರ್ಯವಾಗಬೇಕು. ಶಾಲಾ ಹಂತದಲ್ಲೇ ಮಕ್ಕಳಿಗೆ ಬೋದನೆ ಜೊತೆಗೆ ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸ್ಪೂರ್ತಿ ತುಂಬಬೇಕು. ಮಕ್ಕಳಿಗೆ ಬಲವಂತವಾಗಿ ಪಠ್ಯದ ವಿಷಯವನ್ನು ತುರುಕುವ ಬದಲಿಗೆ ಖುಷಿಯಿಂದ ಕಲಿಯುವಂತಹ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ಕೊಟ್ಟರು.

ತಂದೆತಾಯಿಗಳು ಮಕ್ಕಳನ್ನು ಕೇವಲ ಪಾಲನೆ ಪೋಷಣೆ ಮಾಡಿದರೆ ಶಿಕ್ಷಕರಾದವರು ಅವರ ಜೀವನ ರೂಪಿಸುವ ಕಾರ್ಯ ಮಾಡುತ್ತಾರೆ. ಬದುಕುವ ಕಲೆ, ಆತ್ಮಸ್ಥೈರ್ಯ, ಧೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪಠ್ಯದ ಜೊತೆಗೆ ಬದುಕಿನ ಜಂಜಾಟದ ಬಗ್ಗೆಯೂ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದು ಹೇಗೆ? ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದರೆ ಅನುಸರಿಸಬೇಕಾದ ದಾರಿ, ಪಾಲಿಸಬೇಕಾದ ರೀತಿನೀತಿಗಳ ಬಗ್ಗೆ ತಿಳಿಹೇಳುವ ಕೆಲಸವಾಗಬೇಕು.

ಈ ವಿಚಾರದಲ್ಲಿ ಡಾ. ರಾಧಾಕೃಷ್ಣನ್‌ ಅವರು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಶಿಕ್ಷಕ ಕ್ಷೇತ್ರಕ್ಕೆ ಅರ್ಥವತ್ತಾದ ಚೌಕಟನ್ನು ಹಾಕಿಕೊಂಡು ದೇಶದ ಅಭಿವೃದ್ಧಿಗಾಗಿ ಜೀವನ ಮುಡುಪಾಗಿಟ್ಟ ಡಾ. ರಾಧಾಕೃಷ್ಣನ್‌ ಅವರು ಹಾಕಿಕೊಟ್ಟ ದಾರಿಯನ್ನು ಶಿಕ್ಷಕರು ಅನುಸರಿಸಬೇಕು ಎಂದು ಕರೆ ಕೊಟ್ಟರು.

ನಮ್ಮ ಸರ್ಕಾರ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಶಿಕ್ಷಕರ ಸಮಸ್ಯೆ, ಸವಾಲುಗಳನ್ನು ಬಗೆಹರಿಸುವಲ್ಲಿ ದಾಪುಗಾಲಿಟ್ಟಿದೆ. ಬದಲಾದ ಕಾಲಘಟ್ಟದಲ್ಲಿ ಆಧುನಿಕತೆಗೆ ತಕ್ಕಂತೆ ಹೊಂದಿಕೊಳ್ಳಬೇಕು. ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಹಿಂದೆಲ್ಲಾ ನಾವು ಓದಬೇಕಾದರೆ ಏನಾದರೂ ಡೌಟ್‌ ಬಂದ್ರೆ ಅದನ್ನು ನೋಟ್‌ ಮಾಡಿಕೊಂಡು ಮರುದಿನ ಶಾಲೆಯಲ್ಲಿ ಕೇಳಬೇಕಿತ್ತು. ಆದರೆ ಈಗ ಪರಿಸ್ಥಿತಿ ಆಗಿಲ್ಲ. ಫೋನ್‌ ಕಾಲ್‌, ವಾಟ್ಸಾಪ್‌ ಮೂಲಕ ಆ ಕ್ಷಣವೇ ಡೌಟ್‌ ಪರಿಹಾರ ಮಾಡಿಕೊಳ್ಳುವಷ್ಟರ ಮಟ್ಟಿಗೆ ಸೌಲಭ್ಯಗಳು ಸಿಗುತ್ತಿವೆ. ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಮಕ್ಕಳಲ್ಲಿ ಶಾಲಾ ದಿನಗಳಲ್ಲಿ ಶಿಸ್ತು, ರಾಷ್ಟ್ರಪ್ರೇಮ, ಸಾಧಿಸುವ ಉತ್ಸಾಹ ತುಂಬಿದರೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಿದಂತಾಗುತ್ತದೆ. ಆ ಕೆಲಸವನ್ನು ಇಂದು ಶಿಕ್ಷಕರು ಮಾಡಬೇಕಿದೆ ಎಂದರು.

ಇಂದಿನ ಕಾಲದಲ್ಲಿ ಶಿಕ್ಷಕರನ್ನೇ ನೇರವಾಗಿ ಭೇಟಿ ಮಾಡದೆ ಆನ್‌ ಲೈನ್‌ ನಲ್ಲೇ ಮಾತುಕತೆ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ವಿದ್ಯಾರ್ಥಿಗಳಿಗೆ ನಷ್ಟವಾಗುತ್ತದೆ. ಹಲವಾರು ವ್ಯಸನಗಳಿಗೆ ಇಂದಿನ ಪ್ರಜ್ಞಾವಂತ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ವಿಷಾದದ ಸಂಗತಿ. ಈ ರೀತಿ ದಾರಿ ತಪ್ಪುತ್ತಿರುವ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು. ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಕರು ಕೈಜೋಡಿಸಬೇಕು ಎಂದು ಹೇಳಿದರು.

ಆಧುನಿಕ ಕಾಲದಲ್ಲಿ ಗುರು ಶಿಷ್ಯರ ಪರಂಪರೆ ಮಾಯವಾಗಿದೆ. ಆನ್‌ ಲೈನ್‌ ಶಿಕ್ಷಣದಿಂದ ಶಿಕ್ಷಕರ ಅಸ್ತಿತ್ವಕ್ಕೆ ಧಕೆಯಾಗುತ್ತಿದೆ. ಇದರ ಜೊತೆಗೆ ಗೂಗಲ್‌ ಟೀಚರ್‌ ಸಂಸ್ಕೃತಿ ಬೆಳೆಯುತ್ತಿದೆ. ಗೋಗಲ್‌ ಟೀಚರ್‌ ಬದಲಿಗೆ ಜ್ಞಾನಭಂಡಾರವನ್ನು ಹೊಂದಬೇಕು. ಇದಕ್ಕಾಗಿ ಅಧ್ಯಯನಗಳಲ್ಲಿ ತೊಡಗಿಕೊಳ್ಳಬೇಕು.

ತಾವು ಮಾಡುವ ವೃತ್ತಿಯನ್ನು ಯಾರು ಪ್ರೀತಿಸಿ, ಗೌರವಿಸುತ್ತಾರೋ ಅವರು ಅತ್ಯುನ್ನತ್ತ ಸ್ಥಾನಕ್ಕೇರುತ್ತಾರೆ ಎಂಬುದಕ್ಕೆ ಡಾ. ರಾಧಕೃಷ್ಣನ್‌ ಅವರಂತಹ ಮಹಾನ್‌ ವ್ಯಕ್ತಿಯೇ ಸಾಕ್ಷಿ. ಸಾಮಾನ್ಯ ಶಿಕ್ಷಕರಾಗಿದ್ದ ವ್ಯಕ್ತಿಯೊಬ್ಬ ಈ ದೇಶದ ರಾಷ್ಟ್ರಪತಿ ಸ್ಥಾನಕ್ಕೇರುತ್ತಾರೆ ಎಂದರೆ ಅದಕ್ಕೆ ಅವರಲ್ಲಿನ ಅಧ್ಯಯನದ ತುಡಿತ, ಸಾಧಿಸುವ ಛಲ, ಶಿಸ್ತಿನ ಜೀವನ, ಸಮಯಪ್ರಜ್ಞೆ, ನಿಸ್ವಾರ್ಥ ಸೇವೆಯೇ ಕಾರಣ. ಯಾವುದೇ ಪ್ರತಿಫಲ ಬಯಸದೇ ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗಿಸಿದ ರಾಧಾಕೃಷ್ಣನ್ ಅವರಂತೆ ಮತ್ತಷ್ಟು ಶಿಕ್ಷಕರು ಉನ್ನತ ಸ್ಥಾನಕ್ಕೇರಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.