ಇಂದಿನಿಂದ ಶಿಕ್ಷಕರ ವರ್ಗಾವಣೆಗೆ ಚಾಲನೆ: ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದ ಶಿಕ್ಷಕ ಸಮೂಹದ ಬಹುದಿನಗಳ ನಿರೀಕ್ಷೆಯಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಬುಧವಾರ ಅಧಿಸೂಚನೆ ಹೊರಡಿಸಲಾಗಿದ್ದು, ಶಿಕ್ಷಕರು ಕೌನ್ಸೆಲಿಂಗ್ ಮೂಲಕ ತಮಗೆ ಅನುಕೂಲವಾದ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

2019-20ನೇ ಸಾಲಿನ ಸಾಮಾನ್ಯ ವರ್ಗಾವಣೆಗಳಲ್ಲಿನ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರು ಹಂಚಿಕೆಯ ಮೇರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ತಾಲೂಕಿನ ಹೊರಗೆ ಅಥವಾ ಪ್ರೌಢಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕರಿಗೆ ವರ್ಗಾವಣೆ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಇಲ್ಲವೇ ಜಿಲ್ಲೆಯೊಳಗೆ ಸ್ಥಳ ನಿಯುಕ್ತಿ ಪ್ರಯೋಜನ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ 2020-21ನೇ ಸಾಲಿನ ಮತ್ತು 2021-22ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗಳೂ ನಡೆಯಲಿವೆ ಎಂದು ಅವರು ವಿವರಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‍ನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮತ್ತು ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್‍ನ್ನು ಇಲಾಖೆಯ ಆಯಾ ವಿಭಾಗೀಯ ಜಂಟಿ ನಿರ್ದೇಶಕರು ನಡೆಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಜೂ. 30ಕ್ಕೆ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಜು. 12ಕ್ಕೆ ಪ್ರಕಟಿಸಲಾಗುತ್ತದೆ. 2019-20ರಲ್ಲಿ ತಾಲೂಕಿನಿಂದ/ಜಿಲ್ಲೆಯಿಂದ ಹೊರಗೆ ಕಡ್ಡಾಯ/ ಹೆಚ್ಚುವರಿ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಪಟ್ಟಿಯನ್ನು ಜು. 19ಕ್ಕೆ, ಈಗಾಗಲೇ ವರ್ಗಾವಣೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಶಿಕ್ಷಕರ ಅಂತಿಮ ಪಟ್ಟಿಯನ್ನು ಜು. 22ರಂದು ಪ್ರಕಟಿಸಲಾಗುತ್ತದೆ. ಇದರ ಹೊರತಾದ ಆಸಕ್ತ ಶಿಕ್ಷಕರು ಜೂ. 23ರಿಂದ29ರೊಳಗೆ ಅರ್ಜಿ ಸಲ್ಲಿಸಬಹುದು. ಈ ಎಲ್ಲ ಶಿಕ್ಷಕರ ಕ್ರೂಢೀಕೃತ ತಾತ್ಕಾಲಿಕ ಪಟ್ಟಿಯನ್ನು ಆ. 02ರಂದು ಪ್ರಕಟಿಸಲಾಗುತ್ತದೆ. ಹಾಗೂ ಆಕ್ಷೇಪಣೆಗಳನ್ನು ಆ. 3ರಿಂದ 8ರವರೆಗೆ ಸಲ್ಲಿಸಬಹುದಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮೇಲಿನ ಪಟ್ಟಿಯಲ್ಲಿನ ಅರ್ಜಿಗಳನ್ನು ಆ. 10ರಿಂದ ಆ.15ರವರೆಗೆ ಪರಿಶೀಲಿಸಿ ಪುರಸ್ಕೃತ/ತಿರಸ್ಕೃತರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ತಿರಸ್ಕೃತ ಪಟ್ಟಿಯಲ್ಲಿನ ಅಹವಾಲುಗಳಿದ್ದರೆ ಆಯಾ ವಿಭಾಗೀಯ ಜಂಟಿ ನಿರ್ದೇಶಕರು ಆ. 17ರಿಂದ 21ರವರೆಗೆ ಆಲಿಸುವರು. ಆ. 30ರಂದು ಕೌನ್ಸೆಲಿಂಗ್ ಜೇಷ್ಠತಾ ಕ್ರಮಾಂಕದ ಪಟ್ಟಿಯನ್ನು ಪ್ರಕಟಿಸಿ ಆ. 31ರಿಂದ ಸೆ.2ವರೆಗೆ ಆಕ್ಷೇಪಣೆಗಳನ್ನು ಸ್ವೀಕರಿಸುವರು. ಸೆ. 6ರವರೆಗೆ ಆಕ್ಷೇಪಣೆಗಳ ಪರಿಶೀಲನೆ ನಡೆಯುವುದು. ಸೆ. 8ರಂದು ಅಂತಿಮ ಕೌನ್ಸೆಲಿಂಗ್ ಅರ್ಹತಾ/ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಸೆ. 15ರಿಂದ ಪ್ರಾಥಮಿಕ ಮತ್ತು ಸೆ. 21ರಿಂದ ಪ್ರೌಢಶಾಲಾ ಶಿಕ್ಷಕರಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಆಯಾ ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕರು ವರ್ಗಾವಣಾ ಕುಂದುಕೊರತೆ ನಿವಾರಣಾಧಿಕಾರಿಯಾಗಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಹೆಚ್ಚುವರಿ/ಕಡ್ಡಾಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜು. 12ರಂದು ಆರಂಭವಾಗಿ ಕೌನ್ಸೆಲಿಂಗ ಸೆ. 21ರಂದು ಮತ್ತು 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜು. 27ರಂದು ಆರಂಭವಾಗಿ 2022ರ ಜನವರಿ 14ರಂದು ಕೌನ್ಸೆಲಿಂಗ್ ನಡೆಯಲಿದೆ ಎಂದು ಸಚಿವರು ವಿವರಿಸಿದ್ದಾರೆ.

2020-21ನೇ ಸಾಲಿನ ಸಾಮಾನ್ಯ ವರ್ಗಾವಣೆ:
2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಸಹ ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದರಲ್ಲಿ ತೀವ್ರ ಅನಾರೋಗ್ಯ, ವಿಕಲಚೇತನ ಶಿಕ್ಷಕರು, ವಿಧವೆ/ವಿಧುರ/ವಿಚ್ಛೇದಿತ ಶಿಕ್ಷಕ/ಶಿಕ್ಷಕಿ, ಮೃತ ಸೈನಿಕರ ಶಿಕ್ಷಕ ಪತಿ ಅಥವಾ ಪತ್ನಿ, ಕೇಂದ್ರ/ರಾಜ್ಯ ಸರ್ಕಾರ ಇಲ್ಲವೇ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರನ್ನು ಮದುವೆಯಾಗಿರುವ ಶಿಕ್ಷಕ/ಶಿಕ್ಷಕಿಯರಿಗೆ ವರ್ಗಾವಣೆಯಲ್ಲಿ ಅವಕಾಶವಿರಲಿದ್ದು, ಇದಕ್ಕಾಗಿ ಅವರು ಅರ್ಹ ಪೂರಕ ದಾಖಲೆಗಳನ್ನು ಒದಗಿಸಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದಕ್ಕಾಗಿ ಪ್ರತ್ಯೇಕ ವರ್ಗಾವಣಾ ವೇಳಾಪಟ್ಟಿಯನ್ನು ಆಯಾ ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜು. 27ರಿಂದ ಆರಂಭವಾಗಿ 2022ರ ಫೆ. 26ರವರೆಗೆ ಕೌನ್ಸೆಲಿಂಗ್ ನಡೆಯಲಿದೆ. ಎಲ್ಲ ಅಡೆತಡೆಗಳನ್ನು ನಿವಾರಿಸಿ ಕೊನೆಗೂ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಶಿಕ್ಷಕರು ಸಹಕಾರ ನೀಡುವ ಮೂಲಕ ಇದರ ಅನುಕೂಲತೆ ಪಡೆದುಕೊಳ್ಳಬೇಕೆಂದು ರಾಜ್ಯದ ಶಿಕ್ಷಕರ ಸಮೂಹದಲ್ಲಿ ಸುರೇಶ್ ಕುಮಾರ್ ಕೋರಿದ್ದಾರೆ.