ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಕೈ ಸೀಳುವಂತೆ ಥಳಿಸಿದ ಶಿಕ್ಷಕ: ಪೋಷಕರಿಂದ ಆಕ್ರೋಶ.

ಮೈಸೂರು,ನವೆಂಬರ್,26,2022(www.justkannada.in): ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ ಕೈ ಸೀಳುವಂತೆ ಥಳಿಸಿ ಶಿಕ್ಷಕ ಕ್ರೌರ್ಯ ಮೆರೆದಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

ಎಚ್.ಡಿ.ಕೋಟೆಯ ಟ್ರೂ ಶಫರ್ಡ್ ಪಬ್ಲಿಕ್ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಸಿದ್ದರಾಜು  ಸ್ಟೀಲ್ ಸ್ಕೇಲ್ ನಿಂದ ಥಳಿಸಿ ಕ್ರೌರ್ಯ ಮೆರೆದ ಶಿಕ್ಷಕ . 8ನೇ ತರಗತಿಯ ಅಮೃತ್ ಶಿಕ್ಷಕನ ಥಳಿತದಿಂದ ಗಾಯಗೊಂಡ ವಿದ್ಯಾರ್ಥಿ.

ಸ್ಟೀಲ್ ಸ್ಕೇಲ್ ನಿಂದ ಶಿಕ್ಷಕ ಸಿದ್ಧರಾಜು ವಿದ್ಯಾರ್ಥಿ ಅಮೃತ್ ಗೆ  ಥಳಿಸಿ  ಕ್ರೌರ್ಯ  ಮೆರೆದಿದ್ದು, ವಿದ್ಯಾರ್ಥಿಯ ಬಲಭಾಗದ ಅಂಗೈನ ಸೀಳಿದ ಗಾಯಕ್ಕೆ ವೈದ್ಯರು 6 ಸ್ಟಿಚ್ ಹಾಕಿದ್ದಾರೆ ಎನ್ನಲಾಗಿದೆ.

ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿ ಅಮೃತ್ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದನು. ಸೀಮೆಸುಣ್ಣ ಮುರಿದದ್ದೇ ಅಪರಾಧ ಎಂಬಂತೆ ಭಾವಿಸಿ ಸಿದ್ದರಾಜು ಅಮಾನೀಯವಾಗಿ ಶಿಕ್ಷಿಸಿ ನಂತರ  ಪೋಷಕರಿಗೆ ಕರೆ ಮಾಡಿ ಅಮೃತ್ ಕಟ್ಟರ್ ನಿಂದ ಕೈ ಕಟ್ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ.

ಈ ವೇಳೆ ಅಲ್ಲಿಗೆ ಬಂದ ಪೋಷಕರು ತಕ್ಷಣ ಗಾಯಾಳು ಅಮೃತ್ ನನ್ನ  ಆಸ್ಪತ್ರೆಗೆ ಕರೆದೊಯ್ದು ಗಾಯಕ್ಕೆ 6 ಹೊಲಿಗೆ ಹಾಕಿಸಿ‌ದ್ದಾರೆ. ವಿದ್ಯಾರ್ಥಿ ಗಾಯಗೊಂಡು ರಕ್ತಸ್ರಾವದಲ್ಲಿ ಒದ್ದಾಡುತ್ತಿದ್ದರೂ ಸಹ  ಶಾಲಾ ಆಡಳಿತ ಮಂಡಳಿ ಸೌಜನ್ಯಕ್ಜೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಇನ್ನು ಘಟನೆಗೆ ತಾಲೂಕಿನ ಪ್ರಜ್ಞಾವಂತರು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು. ಮಕ್ಕಳು ತಪ್ಪು ಮಾಡಿದಾಗ ಕೈಕಾಲುಗಳ ಮೇಲೆ ಥಳಿಸಲಿ, ಕೈ ಸೀಳುವಂತೆ ಥಳಿಸಿ ಅಮಾನವೀಯತೆ ಮರೆಯುವುದು ಸರಿಯಲ್ಲ  ಎಂದು ಶಿಕ್ಷಕನ ವಿರುದ್ಧ ಕಿಡಿಕಾರಿದ್ದಾರೆ.

ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ತಪ್ಪಿತಸ್ಥ ಶಿಕ್ಷಕ ಸಿದ್ದರಾಜು ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ಭರವಸೆ ನೀಡಿದರು.

Key words:  teacher – beat – student-Mysore-HD Kote-parents.