ಬೆಂಗಳೂರು ಮೆಟ್ರೊ ಯೋಜನೆಗೆ ಬಳಸುವ ಟಿಬಿಎಂಗೆ 33 ಅಡಿ ಆಳದಲ್ಲಿ ಟಕ್ಕರ್ ಕೊಟ್ಟ ಬೃಹತ್ ತ್ಯಾಜ್ಯದ ಗುಡ್ಡ..

ಬೆಂಗಳೂರು, ಅಕ್ಟೋಬರ್ 10,2022 (www.justkannada.in): ಕೆಲವು ವಾರಗಳ ಹಿಂದೆ ನಮ್ಮ ಮೆಟ್ರೊ ಯೋಜನೆಗಾಗಿ ಸುರಂಗವನ್ನು ತೋಡುವ ಯಂತ್ರಕ್ಕೆ (ಟಿಬಿಎಂ) ಒಂದು ಅಪರೂಪದ ಸವಾಲು ಎದುರಾಯಿತು. ಯಂತ್ರವನ್ನು ಬಳಸಿ ಡೈರಿ ವೃತ್ತದಿಂದ ಲಕ್ಕಸಂದ್ರದ ಕಡೆಗೆ ಸುರಂಗವನ್ನು ಕೊರೆಯಲಾಗುತಿತ್ತು. ಆಗ 33 ಅಡಿ ಭೂಮಿಯ ಆಳದಲ್ಲಿ ಬೃಹತ್ ತ್ಯಾಜ್ಯದ ಗುಡ್ಡವೊಂದು ಎದುರಾಯಿತು.

ಮೊದಲಿಗೆ ಇದೊಂದು ದೊಡ್ಡ ಕಲ್ಲು ಎಂದೆ ಭಾವಿಸಲಾಯಿತು. ಆದರೆ ಸ್ವಲ್ಪ ಸಮಯದ ನಂತರ ಅದು ಕಲ್ಲಲ್ಲ, ಬದಲಿಗೆ ಬೃಹತ್ ತ್ಯಾಜ್ಯದ ಗುಡ್ಡ ಎಂದು ತಿಳಿದು ಬಂದು. ಈ ಸನ್ನಿವೇಶ ನಿಖರವಾಗಿ ಯಾವಾಗ ಎದುರಾಯಿತು ಎಂಬುದು ಸರಿಯಾಗಿ ತಿಳಿದು ಬಂದಿಲ್ಲ.

ಈ ಸುರಂಗ ಕೊರೆಯುವ ಯಂತ್ರವನ್ನು (ಟಿಬಿಎಂ) ಮೆಟ್ರೋ ಯೋಜನೆಯ ೨ನೇ ಹಂತದಡಿ ಬರುವಂತಹ ೧೪ ಕಿ.ಮೀ. ನೆಟ್‌ ವರ್ಕ್ ಮೂಲಕ ಸುರಂಗಕ್ಕೆ ಅಳವಡಿಸಲಾಗಿತ್ತು. “ಭೌಗೋಳಿಕ ಸವಾಲುಗಳಿಂದಾಗಿ ಬೆಂಗಳೂರಿನಲ್ಲಿ ಸುರಂಗ ಕೊರೆಯುವ ಕಾಮಗಾರಿಗಳಲ್ಲಿ ಹಲವಾರು ಸವಾಲುಗಳು ಎದುರಾಗಿವೆ. ಆದರೆ ಇಂತಹ ಬೃಹತ್ ತ್ಯಾಜ್ಯದ ಗುಡ್ಡದ ಸವಾಲು ಇದೇ ಮೊದಲು,” ಎಂದು ಬಿಎಂಆರ್‌ಸಿಎಲ್‌ ನ ಎಂ.ಡಿ. ಅಂಜುಮ್ ಪರ್ವೇಜ್ ಅವರು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದ ಅಧಿಕಾರಿಗಳಿಗೆ ಈ ಪ್ರದೇಶದಲ್ಲಿ ಹಲವು ದಶಕಗಳ ಹಿಂದೆ ಗಣಿಗಾರಿಕೆಗೆ ಅನುಮತಿ ನೀಡಿದ್ದ ಸಂಗತಿ ಬಹಿರಗಂಗೊಂಡಿದೆ. ಇಲ್ಲಿ ಖಾಸಗಿ ಗಣಿಗಾರಿಕಾ ಕಂಪನಿಗಳವರು ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಪರ್ವೇಜ್ ಅವರ ಪ್ರಕಾರ, ಈ ಭೂಮಿಯನ್ನು ನಂತರದಲ್ಲಿ ಒಂದು ತ್ಯಾಜ್ಯ ವಿಲೇವಾರಿ ನಿವೇಶನವನ್ನಾಗಿ ಪರಿವರ್ತಿಸಲಾಗಿತ್ತಂತೆ. ಟಿಬಿಎಂ ಯಂತ್ರಕ್ಕೆ ಸುಮಾರು 35 ಮೀಟರ್‌ ಗಳಷ್ಟು ಬೃಹತ್ ಗಾತ್ರದ ತ್ಯಾಜ್ಯ ಎದುರಾಗಿದೆ.

ಈ ಸಂಬಂಧ ಮಾತನಾಡಿದ ಬಿಎಂಆರ್‌ ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ, ಹೆಗ್ಗಾ ರೆಡ್ಡಿ ಅವರು, ಈ ತ್ಯಾಜ್ಯ ಪ್ಲಾಸ್ಟಿಕ್ ಬಕೆಟ್‌ ಗಳು, ಟೈರ್‌ ಗಳು, ಬ್ಯಾಗ್‌ ಗಳು ಹಾಗೂ ಮೂಳೆಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಇದರಿಂದಾಗಿ ಯಂತ್ರಕ್ಕೆ ಮುಂದಕ್ಕೆ ಸುರಂಗ ಕೊರೆಯುವುದು ಸಾಧ್ಯವಾಗಿಲ್ಲ.

ಬಿಎಂಆರ್‌ ಸಿಎಲ್ ಅಧಿಕಾರಿಗಳು ತಿಳಿಸಿದಂತೆ ಮಣ್ಣಿನ ಪರೀಕ್ಷೆ ನಡೆಸಿದಾಗ ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಲಭಿಸಿರಲಿಲ್ಲವಂತೆ. ಈ ತ್ಯಾಜ್ಯವನ್ನು ಕೂಡಲೇ ತೆಗೆದು, ಕಾಂಕ್ರೀಟ್ ಮಿಶ್ರಣಗಳ ಲೇಪನ ಮಾಡಲಾಗುತ್ತದೆ. ಇದಾದ ನಂತರ ಯಂತ್ರವನ್ನು ಈ ಕಾಂಕ್ರೀಟ್ ಬ್ಲಾಕ್ ಮೂಲಕ ಕೊರೆಯಲು ಬಳಸಲಾಗುವುದು. ಇದಕ್ಕೆ ಮೂರು ತಿಂಗಳ ಕಾಲಾವಕಾಶವಾದರೂ ಬೇಕಾಗುತ್ತದೆ ಎಂದು ವರದಿಯಲ್ಲಿ ವಿವರಸಿಲಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: TBM – Bangalore Metro- project – huge mound – waste