ದೃಷ್ಟಿದೋಷವುಳ್ಳವರಿಗಾಗಿ ಮಾತನಾಡುವ ಲ್ಯಾಪ್‌ ಟಾಪ್‌ ಗಳು.

ಬೆಂಗಳೂರು, ಸೆಪ್ಟೆಂಬರ್ 30,2022 (www.justkannada.in): ರಾಜ್ಯ ಸರ್ಕಾರವು ಉನ್ನತ ಶಿಕ್ಷಣ/ ಕಾಲೇಜು ಶಿಕ್ಷಣ ಪಡೆಯುತ್ತಿರುವ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಮಾತನಾಡುವ ಲ್ಯಾಪ್‌ಟಾಪ್’ಗಳನ್ನು ವಿತರಿಸಲಿದೆ.

ಈ ಮಾತನಾಡುವ ಲ್ಯಾಪ್‌ ಟಾಪ್‌ ಗಳ ಯೋಜನೆ ವಾರ್ಷಿಕ ಯೋಜನೆಯಾಗಿದ್ದು, ದೃಷ್ಟಿ ದೋಷವುಳ್ಳವರು ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಪರಿಚಯಸಲಾಗಿದೆ. ಈ ಯೋಜನೆಯಡಿ ಉನ್ನತ ಶಿಕ್ಷಣ ಅಥವಾ ಕಾಲೇಜು ಶಿಕ್ಷಣ ಪಡೆಯುತ್ತಿರುವ ದೃಷ್ಟಿದೋಷವಿರುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ‘ಮಾತನಾಡುವ ಲ್ಯಾಪ್‌ಟಾಪ್’ಗಳನ್ನು ವಿತರಿಸಲಾಗುತ್ತದೆ.

ಈ ಲ್ಯಾಪ್‌ ಟಾಪ್‌ ಗಳು ನಿವಿಡಿಯಾ ಸಾಫ್ಟ್ವೇರ್ ಉಳ್ಳ ಜೆನೆರಿಕ್ ಮಾದರಿಗಳಾಗಿದ್ದು, ಈ ಲ್ಯಾಪ್‌ ಟಾಪ್‌ಗಳನ್ನು ಬಳಸುವ ದೃಷ್ಟಿದೋಷವಿರುವವರಿಗೆ ಅವರು ಒತ್ತುವ ಪ್ರತಿ ಕೀಗಳ ಶಬ್ದ ಕೇಳಿಸುತ್ತದೆ. ಇದರಿಂದಾಗಿ ಬಳಸುವವರಿಗೆ ಲ್ಯಾಪ್‌ಟಾಪ್ ಬಳಕೆ ಸುಲಭವಾಗುತ್ತದೆ.

ಉದಾಹರಣೆಗೆ, ದೃಷ್ಟಿದೋಷವಿರುವ ಒಬ್ಬ ವ್ಯಕ್ತಿ ಸಾಧಾರಣ ಲ್ಯಾಪ್‌ ಟಾಪ್ ಅನ್ನು ಬಳಸುವಾಗ, ಅವರಿಗೆ ಅವರು ಏನು ಟೈಪ್ ಮಾಡುತ್ತಿದ್ದಾರೆ, ಅಥವಾ ಕರ್ಸರ್‌ ಗಳು ಎಲ್ಲಿದೆ ಎಂದು ಗೊತ್ತಾಗುವುದಿಲ್ಲ. ಈ ಮಾತನಾಡುವ ಲ್ಯಾಪ್‌ ಟಾಪ್‌ನೊಂದಿಗೆ ವ್ಯಕ್ತಿ ಕರ್ಸರ್ ಎಲ್ಲಿಗೆ ಜರುಗಿದರೂ ಅಲ್ಲಿಗೆ ಶಬ್ದ ಕೇಳಿಸುತ್ತದೆ. ಕೀಗಳು ಬಳಸುವವರು ಟೈಪ್ ಮಾಡಿದ ಅಕ್ಷರದ ಶಬ್ದವನ್ನು ಹೊಮ್ಮಿಸುತ್ತದೆ.

“ಈ ವಿಶೇಷ ಲ್ಯಾಪ್‌ ಟಾಪ್‌ ಗಳನ್ನು ಉನ್ನತ ಶಿಕ್ಷಣ ಅಥವಾ ಕಾಲೇಜುಮಟ್ಟದ ಶಿಕ್ಷಣ ಪಡೆಯುತ್ತಿರುವ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಲ್ಯಾಪ್‌ ಟಾಪ್‌ಗಳು ದೃಷ್ಟಿದೋಷವಿರುವವರಿಗೆ ನೆರವಾಗಲಿದೆ. ಪ್ರತಿ ವರ್ಷ ಇಂತಹ ವಿದ್ಯಾರ್ಥಿಗಳಿಗೆ ಈ ಲ್ಯಾಪ್‌ ಟಾಪ್‌ಗಳನ್ನು ವಿತರಿಸಲು ಸರ್ಕಾರ ಆಯವ್ಯಯವನ್ನು ಹಂಚಿಕೆ ಮಾಡುತ್ತದೆ,” ಎಂದು ಸಂಬಂಧಪಟ್ಟ ಸರ್ಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಕಳೆದ ವರ್ಷ, ಪ್ರತಿ ಲ್ಯಾಪ್‌ ಟಾಪ್‌ಗೆ ರೂ.೮೫,೦೦೦ ವೆಚ್ಚದಲ್ಲಿ ಈ ಲ್ಯಾಪ್‌ ಟಾಪ್‌ ಗಳನ್ನು ಖರೀದಿಸಲಾಯಿತು. ಈ ವರ್ಷ ಇಲಾಖೆಯು ಇದಕ್ಕಾಗಿ ರೂ.೩ ಕೋಟಿ ವ್ಯಯಿಸಲಿದೆ.

ಈ ಯೊಜನೆಯಡಿ ಈ ವರ್ಷ ೩೫೩ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ೨೦೧೧ರ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ೧೩,೨೪,೨೦೫ ವಿಶೇಷಚೇತನರಿದ್ದು, ಈ ಪೈಕಿ ೨೬,೪೧೭೦ ಜನರು ದೃಷ್ಟಿದೋಷವುಳ್ಳವವರಾಗಿದ್ದಾರೆ, ಬೆಂಗಳೂರು ಒಂದರಲ್ಲೇ ೮೩,೯೧೦ ಜನರಿದ್ದಾರೆ.

ಹಲವು ಕಾರಣಗಳಿಗಾಗಿ ಜನಸಂಖ್ಯೆಯೂ ಸೇರಿದಂತೆ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯ ದೃಷ್ಟಿದೋಷವಿರುವ ವ್ಯಕ್ತಿಗಳಿದ್ದಾರೆ. ಆ ಪ್ರಕಾರವಾಗಿ ಶೇ.೦.೧೩೩%ರಷ್ಟು ಪೀಡಿತ ಜನಸಂಖ್ಯೆಗೆ ಈ ವರ್ಷ ಮಾತನಾಡುವ ಲ್ಯಾಪ್‌ ಟಾಪ್‌ ಗಳು ಲಭ್ಯವಾಗಲಿವೆ.

ತಜ್ಞರು ಈ ತಂತ್ರಜ್ಞಾನವನ್ನು ಸ್ವಾಗತಿಸಿದ್ದು, ಸರ್ಕಾರ ಆಫ್‌ ಲೈನ್ ಬ್ರೈಲ್ ಪುಸ್ತಕಗಳನ್ನು ಒದಗಿಸುವ ಕಡೆಯೂ ಗಮನಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿಶೇಷಚೇತನರಿಗೂ ಅನುಕೂಲವಾಗುವಂತಹ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದರೆ ಅದು ಎಂದಿಗೂ ಸ್ವಾಗತಾರ್ಹ. ಆದರೆ ಬ್ರೈಲ್ ಪುಸ್ತಕಗಳ ಅಭಿವೃದ್ಧಿ ಹಾಗೂ ವಿತರಣೆಯನ್ನೂ ಮರೆಯಬಾರದು. ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಯೋಜನೆಗಳು ಅಥವಾ ಕ್ರಮಗಳ ಅನುಷ್ಠಾನ ಹಾಗೂ ತಂತ್ರಜ್ಞಾನ ಕಷ್ಟಕರವೇ. ಇದಕ್ಕೆ ಪೂರಕವಾಗಿ ಇಂತಹ ತಂತ್ರಜ್ಞಾನವನ್ನು ಬಳಸಲು ಬೇಕಾಗಿರುವ ಅಗತ್ಯ ತರಬೇತಿಗಳನ್ನೂ ಸಹ ಆಯೋಜಿಸಬೇಕು. ಅಂತಹ ತರಬೇತಿಗಳಿಲ್ಲದಿದ್ದರೆ, ತಂತ್ರಜ್ಞಾನ ಪರಿಣಾಮಕಾರಿಯಾಗುವುದಿಲ್ಲ,” ಎನ್ನುವುದು ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಾಗಸಿಂಹ ಜಿ. ರಾವ್ ಅವರ ಅನಿಸಿಕೆಯಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Talking -laptops – visually –impaired- government