ವಿಷಾನಿಲ ಸೋರಿಕೆಗೆ ರೈತರಿಗಾದ ನಷ್ಟ ಪರಿಹಾರಕ್ಕೆ ವಾರದೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸಿ – ಮಂಡ್ಯ ಡಿಸಿ ಆದೇಶ.

Promotion

ಬೆಂಗಳೂರು,ಮೇ,14,2022(www.justkannada.in):  ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದಲ್ಲಿ ಮೆ|| ಕೀರ್ತಿ ರಾಸಾಯನಿಕ ಕಾರ್ಖಾನೆಯ ವಿಷಾನಿಲ ಸೋರಿಕೆಗೆ ಸಂಬಂಧ ರೈತರಿಗೆ ಪರಿಹಾರ ನೀಡುವ ಕುರಿತು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದು, ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರ ಶಾಸಕರಾದ ದಿನೇಶ್ ಗೂಳಿಗೌಡ ಅವರ ಪ್ರಯತ್ನ ಮುಂದುವರಿದಿದೆ.

2022ರ ಜನವರಿ 15ರಂದು ರಾಸಾಯನಿಕ (ಸಲ್ಫೂರಿಕ್ ಆ್ಯಸಿಡ್) ತಯಾರಿಕಾ ಘಟಕದಿಂದ ವಿಷಾನಿಲ ಸೋರಿಕೆಯಾಗಿ ಸುತ್ತಮುತ್ತಲ ಗ್ರಾಮಗಳ ಸುಮಾರು 12 – 15 ಎಕರೆ ಜಮೀನು ಹಾಗೂ 20 ಎಕರೆಗೂ ಮೇಲ್ಪಟ್ಟು ಅರಣ್ಯ ಇಲಾಖೆಗೆ ಸೇರಿದ ಅರಣ್ಯ ಪ್ರದೇಶವು ಹಾನಿಗೊಳಪಟ್ಟಿದ್ದವು. ಇದರಲ್ಲಿ ರೈತರು ಬೆಳೆದ ನೂರಾರು ತೆಂಗಿನ ಮರಗಳು, ಟೊಮ್ಯಾಟೋ, ರಾಗಿ, ಹುರಳಿ ಬೆಳೆಗಳು ಸಂಪೂರ್ಣ ನಾಶವಾಗಿರುವುದರ ಜೊತೆಗೆ ನೀಲಗಿರಿ ಮರಗಳು ಸಹ ನಾಶವಾಗಿತ್ತು. ಆದರೆ, ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ಆದ ನಷ್ಟವನ್ನು ಕೂಡಲೇ ಭರಿಸಿಕೊಡಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗಳು,  ಹಾಗೂ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೆ, ಮಾಧ್ಯಮಗಳ ಮೂಲಕವೂ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ದರು.

ವಾರದೊಳಗೆ ಕ್ರಮದ ವರದಿ ಸಲ್ಲಿಕೆಗೆ ಸೂಚನೆ

ಹಾಲಿ ವಿಷಾನಿಲ ಸೋರಿಕೆ ಪ್ರಕರಣ ಸಂಬಂಧ ಆದೇಶ ಹೊರಡಿಸಿರುವ ಮಂಡ್ಯ ಜಿಲ್ಲಾಧಿಕಾರಿಗಳು, ವಿಷಾನಿಲ ಸೋರಿಕೆಯಾಗಿ ಬೆಳೆ ನಾಶವಾಗಿರುವ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಸಂಬಂಧ ಜಂಟಿ ಸಮೀಕ್ಷೆ ನಡೆಸಿ ಕೂಲಂಕಷವಾಗಿ ಪರಿಶೀಲನೆ ನಡೆಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದು. ಜೊತೆಗೆ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಮಂಡ್ಯ ತಹಸೀಲ್ದಾರ್ ರವರ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಒಂದು ವಾರದ ಒಳಗೆ ಸಲ್ಲಿಸಲು ಸೂಚಿಸಿ ಆದೇಶವನ್ನು ಹೊರಡಿಸಿದ್ದಾರೆ. ಮಂಡ್ಯ ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಮಂಡ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಂಡ್ಯ ಸಾಮಾಜಿಕ ವಿಭಾಗದ ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಆದೇಶದಲ್ಲಿ ದಿನೇಶ್ ಗೂಳಿಗೌಡ ಹೆಸರು ಪ್ರಸ್ತಾಪ

ವಿಷಾನಿಲ ಸೋರಿಕೆ ಹಾಗೂ ಇದರಿಂದ ಸಂತ್ರಸ್ತರಾದ ರೈತರಿಗೆ ತುರ್ತಾಗಿ ಪರಿಹಾರ ವಿತರಿಸಲು ಸಂಬಂಧಪಟ್ಟವರಿಗೆ ಆದೇಶ ನೀಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದನ್ನು ಸಹ ಜಿಲ್ಲಾಧಿಕಾರಿಗಳು ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಸದನದಲ್ಲಿ ಗಮನ ಸೆಳೆದಿದ್ದ ಶಾಸಕರು

ಶಾಸಕ ದಿನೇಶ್ ಗೂಳಿಗೌಡ ಅವರು ಪ್ರಕರಣ ಬೆಳಕಿಗೆ ಬಂದಾಗಿನಿಂದ ನಿರಂತರವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ರೈತರಿಗೆ ಹಾಗೂ ಸುತ್ತಮುತ್ತಲ ಪರಿಸರಕ್ಕೆ ಆಗಿರುವ ಹಾನಿ ಬಗ್ಗೆ ಧ್ವನಿ ಎತ್ತಿದ್ದರು. ಈ ಸಂಬಂಧ ಮುಖ್ಯಮಂತ್ರಿಗಳು, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೂ ಸಹ ಪತ್ರ ಬರೆದು ಸಮೀಕ್ಷೆ ತಂಡ ರಚಿಸಿ ವರದಿ ಪಡೆದು ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಘೋಷಿಸುವಂತೆ ಮನವಿ ಮಾಡಿದ್ದರು. ಬಳಿಕ ಸದನದಲ್ಲಿಯೂ ಸಹ ಈ ವಿಚಾರವನ್ನು ಪ್ರಸ್ತಾಪಿಸಿ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದರು. ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಪತ್ರವನ್ನು ಉಲ್ಲೇಖಿಸಿ ಮಂಡ್ಯ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.

Key words: Take action -within – week – report-farmers- compensation – poison- gas- leaks- Mandya DC