ಸಾರ್ವಜನಿಕ ಉಪಯೋಗಕ್ಕಿರುವ ಪಾರ್ಕ್ ಹಾಳುಗೆಡವಿರುವ ಶಾಸಕ ರಾಮದಾಸ್ ವಿರುದ್ಧ ಕ್ರಮ ಜರುಗಿಸಿ- ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಆಗ್ರಹ.

ಮೈಸೂರು,ಸೆಪ್ಟಂಬರ್,18,2021(www.justkannada.in):  ಸಾರ್ವಜನಿಕರ ಉಪಯೋಗಕ್ಕೆ ಅಭಿವೃದ್ಧಿಪಡಿಸಿರುವ ಉದ್ಯಾನವನದಲ್ಲಿ ರಾಜಕೀಯ ಕಾರ್ಯಕ್ರಮಕ್ಕೆ ಬಳಸಿಕೊಂಡು ಪಾರ್ಕ್ ಹಾಳುಗೆಡವಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಕ್ರಮಜರುಗಿಸುವಂತೆ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಒತ್ತಾಯಿಸಿದ್ದಾರೆ.

ವಿದ್ಯಾರಣ್ಯಪುರಂನಲ್ಲಿರುವ ಪಾರ್ಕ್‌ ನಲ್ಲಿ ಮೋದಿ ಯುಗ್ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲು ವೇದಿಕೆ ನಿರ್ಮಿಸಲಾಗಿತ್ತು. ವಸ್ತುಪ್ರದರ್ಶನದ ಮಳಿಗೆಗಳನ್ನು ನಿರ್ಮಿಸಲು ಸಣ್ಣಸಣ್ಣ ಮರಗಳನ್ನು ಕಡಿಯಲಾಗಿದೆ. ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಕುರ್ಚಿಗಳನ್ನು ಹಾಕಿ ಹಸಿರಿನ ಪ್ರದೇಶವನ್ನು ನಾಶ ಮಾಡಲಾಗಿದೆ. ಪರಿಸರ ಕಾಳಜಿ ಬಗ್ಗೆ ಮಾತನಾಡುವ ಶಾಸಕರಿಗೆ ಇಂತಹ ಕೆಲಸ ಮಾಡಬಾರದೆಂದು ಗೊತ್ತಿಲ್ಲವೇ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಪ್ರಶ್ನಿಸಿದರು.

ಪಾರ್ಕ್‌ನಲ್ಲಿ ರಾಜಕೀಯ ಸಮಾರಂಭ, ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಆದರೆ, ಮೋದಿ ಹೆಸರಿನಲ್ಲಿ ಪ್ರಚಾರ ಪಡೆಯಲು ಪಾರ್ಕ್‌ ಅನ್ನು ಬಳಸಿಕೊಂಡು ಅಲ್ಲಿರುವ ಮರಗಿಡಗಳನ್ನು ನಾಶ ಮಾಡಿದ್ದು ಖಂಡನೀಯ. ಪಾರ್ಕ್ ಅಭಿವೃದ್ಧಿಗೆ ಲಕ್ಷಾಂತರ ರೂ.ಖರ್ಚು ಮಾಡುವ ನಗರಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದು ಸರಿಯಲ್ಲ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.

ಜಿಲ್ಲಾಡಳಿತ ಕೂಡಲೇ ವರದಿ ಪಡೆದುಕೊಂಡು ತೆರವುಗೊಳಿಸಬೇಕು. ಮೋದಿ ಹೆಸರಿನಲ್ಲಿ 20 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿರುವುದರಿಂದ ಅಲ್ಲಿಯ ತನಕ ಪಾರ್ಕ್‌ ನ ಹಸಿರಿನ ವಾತಾವರಣ ಹಾಳಾಗಲಿದೆ. ಹಾಗಾಗಿ, ಹಾಕಿರುವ ವೇದಿಕೆ ಸೇರಿ ಎಲ್ಲವನ್ನು ತೆರವುಗೊಳಿಸಲು ತಕ್ಷಣವೇ ಗಮನಹರಿಸಬೇಕು ಎಂದು ಎಚ್.ಎ ವೆಂಕಟೇಶ್ ಒತ್ತಾಯಿಸಿದ್ದಾರೆ.

Key words: Take action -against –MLA-SA Ramadas-KPCC spokesperson- HA Venkatesh