ರೈತರ ಶೋಷಣೆ ತಪ್ಪಿಸಲು ಕಬ್ಬು ಬೆಳೆಗಾರರ ಪ್ರಬಲ ಹೋರಾಟ ಅವಶ್ಯಕ- ಕುರುಬೂರು ಶಾಂತಕುಮಾರ್.

ಮೈಸೂರು,ಆಗಸ್ಟ್,2,2022(www.justkannada.in): ಕಬ್ಬಿನ ದರ ನಿಗದಿ, ಕಬ್ಬು ಕಟಾವು, ಸಾಗಣಿಕೆ ವೆಚ್ಚ ರೈತರ ಶೋಷಣೆ ತಪ್ಪಿಸಲು  ಕಬ್ಬು ಬೆಳೆಗಾರರ ಪ್ರಬಲ ಹೋರಾಟ ಅವಶ್ಯಕ ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್  ಹೇಳಿದರು.

ನಗರದ ಕುವೆಂಪು ಪಾರ್ಕ್ ನಲ್ಲಿ ನಡೆದ ಮೈಸೂರು ತಾಲೂಕು ಕಬ್ಬುಬೆಳೆಗಾರರ ಸಭೆಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಸರ್ಕಾರ ಕಬ್ಬಿನ ದರ ನಿಗದಿ ಮಾಡದೆ ವಿಳಂಬ ಮಾಡುತ್ತಿರುವುದು ರೈತರ ಶೋಷಣೆಗೆ ದಾರಿಯಾಗಿದೆ.   ಬಣ್ಣಾರಿ ಹಾಗೂ  ಮಹದೇಶ್ವರ ಸಕ್ಕರೆ  ಕಾರ್ಖಾನೆಯವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಕಳೆದ ವರ್ಷದ ಬೆಲೆಗಿಂತ  ಟನ್ನಿಗೆ  350ರೂ ಕಡಿಮೆ ಹಣವನ್ನು ರೈತರಿಗೆ ನೀಡುತ್ತಿರುವುದು,   ಕಬ್ಬು ಸರಬರಾಜು ಮಾಡಿದ  ಪಾವತಿ ಬಿಲ್ಲನ್ನು ಸಹ ನೀಡದೆ ರೈತರನ್ನು ಶೋಷಣೆ ಮಾಡುತ್ತಿರುವುದು ಕಾನೂನುಬಾಹಿರ ಚಟುವಟಿಕೆ.   ಸಕಾರಣವಿಲ್ಲದೆ ಕಳೆದ ವರ್ಷಕ್ಕಿಂತ  ಕಬ್ಬು  ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚವನ್ನು ರೈತರಿಂದ  ಹೆಚ್ಚುವರಿ ಹಣ ಕಡಿತ ಮಾಡುತ್ತಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.special-package-announcement-cm-bs-yeddyurappa-farmer-leader-kuruburu-shanthakumar

ಬ್ಯಾಂಕುಗಳು ರೈತರಿಗೆ ಸಾಲವನ್ನು ಕಟ್ಟಬೇಕೆಂದು ನೋಟಿಸ್ ನೀಡಿ ಕಿರುಕುಳ ನೀಡುತ್ತಿವೆ. ಕೆಲವು ಬ್ಯಾಂಕುಗಳು ನ್ಯಾಯಾಲಯದಲ್ಲಿ ದಾವೆ ದಾಖಲಿಸುತ್ತಿವೆ. ಜಿಲ್ಲೆಯಲ್ಲಿ ಯೂರಿಯಾ ಡಿಎಪಿ ರಸಗೊಬ್ಬರ ಸಮಸ್ಯೆ ಸೃಷ್ಟಿಯಾಗಿದ್ದು, ಭತ್ತದ ನಾಟಿಗೆ  ಗೊಬ್ಬರ ಬಳಸಲು ಅಂಗಡಿಗಳಲ್ಲಿ ದಾಸ್ತಾನು ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಮಾತನಾಡಿ, ಅತಿಯಾದ ಮಳೆಯಿಂದ ಹಣ್ಣು ತರಕಾರಿ ಬೆಳೆಗಳು ನೀರಿನಲ್ಲಿ ಕೊಳೆತು ರೈತರಿಗೆ ಅಪಾರ ಬೆಳೆ  ಹಾನಿಯಾಗಿದೆ.  ಬೆಳೆನಷ್ಟಕ್ಕಾಗಿ ಬೆಳೆನಷ್ಟ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಭೆಯ ನಂತರ ಮೈಸೂರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿನ್ನೆಲೆ ಧರಣಿ ಸ್ಥಳಕ್ಕೆ ಬಂದ ಗ್ರೇಡ್ 2 ತಹಸೀಲ್ದಾರ್ ವಿಶ್ವನಾಥ್ ಅವರಿಗೆ  ಎಲ್ಲಾ ಸಮಸ್ಯೆಗಳ ಬಗ್ಗೆ ಮೂರ್ನಾಲ್ಕು ದಿನದೊಳಗೆ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಲಾಯಿತು.

ತಾಲ್ಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್ ಸಭೆಯ ಅಧ್ಯಕ್ಷತೆ  ವಹಿಸಿದ್ದರು. ರೈತ ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಲಕ್ಷ್ಮಿಪುರ ಶ್ರೀರಾಂ, ಕಾಟೂರು ಮಹದೇವಸ್ವಾಮಿ, ಪಿ ರಾಜು, ಸಾತಗಳ್ಳಿ ಬಸವರಾಜ್, ವರಕೋಡು ನಾಗೇಶ್, ವಾಜಮಂಗಲ ಮಾದೇವು, ಮಾಲಿಂಗನಾಯಕ್, ರಾಜು, ಸಾಕಮ್ಮ, ಶಿವಪ್ಪ,  ಕೆ ಆರ್ ಎಸ್ ರಾಮೇಗೌಡ, ಚುಂಚರಾಯನಹುಂಡಿ ನಿಂಗಣ್ಣ, ಸತೀಶ್,ಮಂಜು ಮತ್ತಿತರರು ಇದ್ದರು.

Key words: sugarcane -growers –exploitation- farmers- Kuruburu Shanthakumar