ಕುಲಪತಿಗಳ ಶೀಘ್ರ ನೇಮಕಾತಿಗೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

ಬೆಂಗಳೂರು, ಮಾರ್ಚ್ 29, 2022 (www.justkannada.in): ಬೆಂಗಳೂರು ವಿಶ್ವವಿದ್ಯಾಲಯದ (ಬಿಯು) ವಿದ್ಯಾರ್ಥಿಗಳು ಕುಲಪತಿಗಳ ಶೀಘ್ರ ನೇಮಕಾತಿಗೆ ಒತ್ತಾಯಿಸಿ ತರಗತಿಗಲನ್ನು ಬಹಿಷ್ಕರಿಸಿ, ಪೋಸ್ಟ್ ಕಾರ್ಡ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಸೋಮವಾರದಂದು ಸ್ನಾತಕೋತ್ತರ ವಿಭಾಗದ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಿಂದ ಆರಂಭಿಸಿ ಆಡಳಿತ ಕಟ್ಟಡದವರೆಗೂ ಪ್ರತಿಭಟನಾ ರ್ಯಾಲಿಯನ್ನು ಕೈಗೊಂಡರು. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ವಾಂಸರ ಸಂಘ ಜ್ಞಾನಭಾರತಿ ಆವರಣದಲ್ಲಿ ಅನಿರ್ದಿಷ್ಟಾವಧಿಯವರೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳು ಕುಲಪತಿಗಳ ನೇಮಕಾತಿ ಹಾಗೂ ಸಮಸ್ಯೆ ಬಗೆಹರಿಸುವ ಸಂಬಂಧ ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಯಾರು ಎಂಬ ಪ್ರಶ್ನೆಯೊಂದಿಗೆ, ಶೀಘ್ರವಾಗಿ ವಿಶ್ವವಿದ್ಯಾಲಯದ ಉನ್ನತ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿ ಮಾನ್ಯ ರಾಜ್ಯಪಾಲರಿಗೆ ಪತ್ರ ಅಭಿಯಾನವನ್ನು ಆರಂಭಿಸಿದ್ದಾರೆ.

ರಾಜ್ಯದ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದಿಂದ ಪ್ರೊ. ಕೆ.ಆರ್.ವೇಣುಗೋಪಾಲ್ ಅವರ ನೇಮಕಾತಿಯನ್ನ ರದ್ದುಪಡಿಸಿ ಆದೇಶವನ್ನು ಹೊರಿಡಿಸಿದಾಗಿನಿಂದ, ಅಂದರೆ ಮಾರ್ಚ್ ೧೬ ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಹುದ್ದೆ ಖಾಲಿಯಾಗಿದೆ.

ಈ ಸಂಬಂಧ ಮಾತನಾಡಿದ ಸಂಶೋಧನಾ ವಿಭಾಗದ ವಿದ್ಯಾರ್ಥಿ ಲೋಕೇಶ್ ರಾಮ್ ಅವರು, ” ರಾಜ್ಯಪಾಲರು ಹಾಗೂ ಸರ್ಕಾರ ಈ ಸಂಬಂಧ ಯಾವುದಾದರೂ ಕ್ರಮವನ್ನು ಕೈಗೊಳ್ಳುವವರೆಗೂ ನಾವು ತರಗತಿಗಳ ಬಹಿಷ್ಕಾರವನ್ನು ಮುಂದುವರೆಸುತ್ತೇವೆ. ಏಷ್ಯಾದ ಅತೀ ದೊಡ್ಡ ಎನಿಸಿಕೊಂಡಿರುವ ವಿಶ್ವವಿದ್ಯಾನಿಲಯಕ್ಕೆ ಎರಡು ವಾರಗಳಾದರೂ ಮುಖ್ಯಸ್ಥರನ್ನು ನೇಮಕ ಮಾಡದಿರುವುದು ನಿಜಕ್ಕೂ ನಾಚಿಕೆ ಪಡುವ ವಿಷಯ,” ಎಂದು ಆರೋಪಿಸಿದರು.

ಮತ್ತೋರ್ವ ಸ್ನಾತಕೋತ್ತರ ವಿದ್ಯಾರ್ಥಿ, “ಇಷ್ಟೊಂದು ಗಂಭೀರ ವಿಷಯದ ಬಗ್ಗೆ ಸರ್ಕಾರ ಹಾಗೂ ಕುಲಪತಿಗಳು ಹೇಗೆ ಇಷ್ಟು ನಿರ್ಲಕ್ಷ್ಯ ವಹಿಸಬಹುದು? ನಮ್ಮ ಕುಂದುಕೊರತೆಗಳನ್ನು ಆಲಿಸಲು ವಿಶ್ವವಿದ್ಯಾಲಯದಲ್ಲಿ ಯಾರೂ ಇಲ್ಲ, ಒಂದು ವೇಳೆ ಇದೇ ಪರಿಸ್ಥಿತಿ ಇನ್ನೂ ಎರಡು ದಿನಗಳಿಗಿಂತ ಹೆಚ್ಚಿನ ಸಮಯದವರೆಗೆ ಇದೇ ರೀತಿ ಮುಂದುವರೆದರೆ, ನಾವು ಪರಿಹಾರ ಕೋರಿ ರಾಜಭವನದ ಮುಂದೆ ಪ್ರತಿಭಟಿಸಬೇಕಾಗುತ್ತದೆ,” ಎಂದರು.

ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ, ವಿದ್ಯಾರ್ಥಿಗಳು ಸೋಮವಾರದಂದು ಆಡಳಿತ ಕಚೇರಿಯನ್ನೂ ಬಲವಂತವಾಗಿ ಮುಚ್ಚಿಸಿದರು. ಸಮಸ್ಯೆಯನ್ನು ಬಗೆಹರಿಸದಿದ್ದರೆ ಇಡೀ ವಿಶ್ವವಿದ್ಯಾಲಯದ ಕೆಲಸಗಳನ್ನೇ ಸ್ಥಗಿತಗೊಳಿಸುವುದು ಅನಿವಾರ್ಯ. “ಘಟಿಕೋತ್ಸವವನ್ನೂ ಮುಂದೂಡಬೇಕೆನ್ನುವುದು ನಮ್ಮ ಒತ್ತಾಯ,” ಎಂದು ವಿದ್ಯಾರ್ಥಿ ರಾಮ್ ತಿಳಿಸಿದ್ದಾರೆ. ಬಿಯುನ ಘಟಿಕೋತ್ಸವ ಏಪ್ರಿಲ್ ೮ಕ್ಕೆ ನಡೆಯಬೇಕಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: students –protest-Bangalore University-VC