ನೇಪಾಳದಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.0ರ ತೀವ್ರತೆ ದಾಖಲು

ಬೆಂಗಳೂರು, ಜುಲೈ 31, 2022 (www.justkannada.in): ನೇಪಾಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0ರ ತೀವ್ರತೆ ದಾಖಲಾಗಿದೆ.

ಇಂದು ಬೆಳಗ್ಗೆ ನೇಪಾಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪನದ ಕೇಂದ್ರ ಬಿಂದು ಕಠ್ಮಂಡುವಿನಿಂದ 147 ಕಿ.ಮೀ. ಪೂರ್ವ-ಆಗ್ನೇಯದ ಬಳಿ ಇದ್ದು, 10 ಕಿಮೀ ಆಳದಲ್ಲಿ ಭೂಕಂಪನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದಿಂದ ಯಾವುದೇ ಹಾನಿ ಆದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಜುಲೈ 25ರಂದು ಸಹ 4.3 ತೀವ್ರತೆಯ ಕಂಪನ ದಾಖಲಾಗಿತ್ತು.

ಬೆಳಗ್ಗೆ 7.58ರ ಸುಮಾರಿಗೆ ಈ ಕಂಪನ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಏಪ್ರಿಲ್ 25, 2015 ರಂದು ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಪೋಖರಾ ನಗರದ ನಡುವೆ ಭೀಕರ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.8 ರಷ್ಟಿತ್ತು. ಈ ಭೀಕರ ಕಂಪನದಿಂದಾಗಿ ಉಂಟಾದ ಕಟ್ಟಡಗಳ ಕುಸಿತದಿಂದಾಗಿ 8,964 ಜನರು ಬಲಿಯಾಗಿ, 22,000 ಜನರು ಗಾಯಗೊಂಡಿದ್ದರು.