ಸರ್ಕಾರದಿಂದ ಅಧಿಕೃತ ಆದೇಶ  ಬೆನ್ನಲ್ಲೆ ರಾಜ್ಯ ಸರ್ಕಾರಿ ನೌಕರರಿಂದ ಮುಷ್ಕರ ವಾಪಸ್.

ಬೆಂಗಳೂರು,ಮಾರ್ಚ್,1,2023(www.justkannada.in): ರಾಜ್ಯ ಸರ್ಕಾರಿ ನೌಕರರುಗಳಿಗೆ  01ನೇ ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೆ ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘ ಮುಷ್ಕರವನ್ನ ವಾಪಸ್ ಪಡೆದಿದೆ.

ಸರ್ಕಾರದಿಂದ ಅಧಿಕೃತ ಆದೇಶದ ಬಳಿಕ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ, ನಿನ್ನೆ ರಾತ್ರಿ 9 ಗಂಟೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಕರೆದಿದ್ದರು. ಸರ್ಕಾರ ಸರ್ಕಾರಿ ನೌಕರರು ತದ್ವಿರುದ್ಧವಾಗಿ ಹೋಗುವುದು ಬೇಡ ಎಂದು ಸಿಎಂ ಮನವಿ ಮಾಡಿದ್ದಾರೆ.  ಇದೀಗ ವೇತನ ಭತ್ಯೆ ತಾತ್ಕಾಲಿಕ ಪರಿಹಾರಕ್ಕೆ ಅನುಮತಿ  ನೀಡಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ  ವಾಪಸ್ ಪಡೆಯುವುದಾಗಿ ಘೋಷಿಸಿದರು.

ಅಲ್ಲದೆ ಸರ್ಕಾರಿ ನೌಕರರಿಗೆ ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸಿಎಸ್ ಷಡಕ್ಷರಿ ಸೂಚನೆ ನೀಡಿದರು. ಕರ್ತವ್ಯ ಬಹಿಷ್ಕರಿಸಿದ್ದರಿಂದ ಜನರಿಗೆ ಆದ ತೊಂದರೆ ಬಗ್ಗೆ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಸಿಎಸ್ ಷಡಾಕ್ಷರಿ ತಿಳಿಸಿದರು.

Key words: strike – state government -employees – official- order – government.