ಕಬ್ಬು ದರ ನಿಗದಿ ಒತ್ತಾಯಿಸಿ ಅ.27 ರಂದು ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ: ಕುರುಬೂರು ಶಾಂತಕುಮಾರ್

ಮೈಸೂರು, ಅಕ್ಟೋಬರ್ 23, 2022 (www.justkannada.in): ಕಬ್ಬು ದರ ನಿಗದಿ  ರಾಜ್ಯ ಸರ್ಕಾರದ ವಿಳಂಬ ನೀತಿ ವರ್ತನೆ ಖಂಡಿಸಿ ರಾಜ್ಯಾದ್ಯಂತ 27 ರಂದು ರಸ್ತೆ ತಡೆ ಚಳವಳಿ ನಡೆಸಲಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕಬ್ಬಿನ ಎಫ್ ಆರ್ ಪಿ ದರಕ್ಕೆ ಹೆಚ್ಚುವರಿ ದರ ನಿಗದಿಪಡಿಸಲು ಮಂತ್ರಿಗಳು ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದೂಡುತ್ತಿದ್ದಾರೆ. ಇದು ಕಬ್ಬು ಬೆಳೆದ ರೈತರಿಗೆ ಬಗೆದ ದ್ರೋಹವಾಗಿದೆ. ರಾಜ್ಯದ ಕಬ್ಬು ಬೆಳೆಗಾರ ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರು ಯಾವುದೇ ಎಂಎಲ್ಎ, ಎಂಪಿ ,ಮಂತ್ರಿಗಳು, ಈ ಬಗ್ಗೆ ಮಾತನಾಡದೆ ಇರುವುದು ಅನುಮಾನ ಉಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

30 ಲಕ್ಷ ಕಬ್ಬು ಬೆಳೆಗಾರರ 40,000 ಕೋಟಿ ವೈಹಿವಾಟು ನಡೆಸುವ ಈ ಉದ್ಯಮ ಸರ್ಕಾರಕ್ಕೆ ಲಾಭ  ತರುತ್ತಿಲ್ಲವೇ?  5000 ಕೋಟಿ ವ್ಯವಹಾರ ನಡೆಸುವ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡುವ ರಾಜ್ಯದ ಗೃಹ ಸಚಿವರಿಗೆ ಹಾಗೂ ಎಂಪಿಗಳಿಗೆ ಕಬ್ಬು ಬೆಳೆಗಾರರ ಗೂಳಾಟ ಕಾಣುತ್ತಿಲ್ಲವೇ?  ಎಂದು ಪ್ರಶ್ನಿಸಿದ್ದಾರೆ.

ರಾಜ್ಯಸರ್ಕಾರ, ಜನಪ್ರತಿನಿಧಿಗಳನ್ನು ಎಚ್ಚರಿಸಲು 27ರಂದು ರಾಜ್ಯಾದ್ಯಂತ 11ರಿಂದ 1ಗಂಟೆ ತನಕ ರಸ್ತೆ ತಡೆ ಚಳುವಳಿ ನಡೆಸಲಾಗುತ್ತದೆ. 31ರಂದು ರಾಜ್ಯದ ಎಲ್ಲಾ ಜಿಲ್ಲಾ ಅಧಿಕಾರಿಗಳ ,ಕಚೇರಿ ಮುತ್ತಿಗೆ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದದ್ದಾರೆ.

ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಗಳು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಕಬ್ಬು ಕಟಾವು 16 ತಿಂಗಳಾಗುತಿದೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್  ಆಧಾರದ ದರ ಕಡಿತ ಮಾಡಬೇಕು, ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಕ್ಕರೆ ಉದ್ದಿಮೆ ಸಕ್ಕರೆ ಹಾಗು ಕಬ್ಬು ಬೇಸಾಯ ಸಂಪೂರ್ಣವಾಗಿ ಗಣಕೀಕರಣವಾಗಬೇಕು ಎಂಬುದು ರಾಜ್ಯ ಕಬ್ಬು ಬೆಳೆಗಾರ ಸಂಘ ಎಪ್ರಿಲ್ 26ರಂದು ಒತ್ತಾಯಿಸಲಾಗಿತ್ತು. ರೈತನ ಕಬ್ಬಿನ ನಾಟಿ ಒಪ್ಪಂದ, ಜೇಷ್ಠತೆ ಆಧಾರದ ಕಟಾವು ಅನುಮತಿ, ಕಬ್ಬಿನ ತೂಕ, ಕಬ್ಬಿನ ಹಣ ಪಾವತಿ, ಸಕ್ಕರೆ ಇಳುವರಿ, ಎಲ್ಲವೂ ಗಣಕೀಕರಣವಾಗಿ ರೈತರ ಮೊಬೈಲ್ ಆಪ್ ಮೂಲಕ ನೋಂದಾಯಿಸುವ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿತ್ತು ಈಗ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವುದು ಕಬ್ಬು ಬೆಳೆಗಾರರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಜಿಲ್ಲಾಧ್ಯಕ್ಷರಾದ ಪಿ.ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಇತರರು ಇದ್ದರು.