ಬರ ಸಮರಕ್ಕೆ ಸಜ್ಜಾದ ಸರ್ಕಾರ: ನೀರು, ಮೇವಿನ ಸಮಸ್ಯೆ ಗಂಭೀರ

ಬೆಂಗಳೂರು:ಮೇ-10: ಲೋಕಸಭಾ ಚುನಾವಣೆ ಮತದಾನದ ಬಳಿಕವೂ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿಹೋಗಿರುವ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕೊನೆಗೂ ಬರದ ಬಿಸಿ ತಟ್ಟಿದೆ. ಈ ವರ್ಷವೂ ಮುಂಗಾರು ಆಶಾದಾಯಕವಾಗಿಲ್ಲ ಎಂಬ ಹವಾಮಾನ ಇಲಾಖೆ ಮುನ್ಸೂಚನೆಯಿಂದ ಎಚ್ಚೆತ್ತ ದೋಸ್ತಿ ಪಡೆ ಬರ ನಿರ್ವಹಣೆಗೆ ಸಜ್ಜಾಗಲು ತೋಳೇರಿಸಿದೆ.

ಬರ ಸ್ಥಿತಿ, ಪರಿಹಾರ ಕಾಮಗಾರಿಗಳಲ್ಲಿ ಆಗುತ್ತಿರುವ ತೊಂದರೆಗಳನ್ನು ಖುದ್ದು ಸಚಿವರೇ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮನದಟ್ಟು ಮಾಡಿಕೊಟ್ಟರು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ, ಕಾಮಗಾರಿಗಳಲ್ಲಿನ ತೊಂದರೆ, ವಿಳಂಬ, ಮೇವಿನ ತೊಂದರೆಯಂತಹ ಸಮಸ್ಯೆಗಳ ಕುರಿತು ಮಾತುಕತೆ ನಡೆಯಿತು. ಅನೇಕ ಅಧಿಕಾರಿಗಳು ಕಾನೂನಿನ ನೆಪ ಹೇಳಿ ಅವಶ್ಯಕವಿದ್ದಷ್ಟು ನೆರವು ನೀಡುತ್ತಿಲ್ಲ. ಹಣ ಪಾವತಿಯಲ್ಲಿ ವಿಳಂಬವಾಗುತ್ತಿರುವ ಕಾರಣ ಟ್ಯಾಂಕರ್​ಗಳ ಮಾಲೀಕರು ಸಹಕಾರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದೂ ಸೇರಿ ಸಾಕಷ್ಟು ಸಮಸ್ಯೆ ಹೇಳಿಕೊಂಡರು. ಆದ್ದರಿಂದಲೇ ಒಂದಷ್ಟು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ತೀರ್ಮಾನ ಮಾಡಲಾಯಿತು.

ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ, ಬರ ಪರಿಹಾರ ಕಾಮಗಾರಿಗಳಲ್ಲಿ ಉಂಟಾಗುತ್ತಿರುವ ಕೆಲವು ನ್ಯೂನತೆಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಸಚಿವರು ಸಿಎಂ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಅಗತ್ಯ ಪರಿಹಾರಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಭೆಗೆ ಸಮ್ಮತಿ: ಬರ ಪರಿಹಾರ ಕಾಮಗಾರಿ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿಪರಿಶೀಲನಾ ಸಭೆ ನಡೆಸಲು ಮಾದರಿ ನೀತಿ ಸಂಹಿತೆಯಿಂದ ಚುನಾವಣಾ ಆಯೋಗ ವಿನಾಯಿತಿ ನೀಡಿದೆ.

ಡಿಸಿ ಖಾತೆಯಲ್ಲಿ 727 ಕೋಟಿ ರೂಪಾಯಿ

ಕುಡಿಯುವ ನೀರಿಗೆ ಕ್ರಿಯಾಯೋಜನೆಯಲ್ಲಿ ನಿಗದಿಪಡಿಸಿರುವ 3,600 ಕೋಟಿ ರೂ. ಬದಲಿಗೆ 201 ಕೋಟಿ ರೂ. ನೀಡಲು ತೀರ್ವನಿಸಲಾಗಿದೆ. ಬರ ಘೋಷಣೆಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ ಪ್ರತಿ ತಾಲ್ಲೂಕಿಗೆ 2 ಕೋಟಿ ರೂ.ನಂತೆ 324 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಸದ್ಯದಲ್ಲಿ ಎಲ್ಲ ಡಿಸಿಗಳ ಪಿಡಿಒ ಖಾತೆಯಲ್ಲಿ ಒಟ್ಟು 727 ಕೋಟಿ ರೂ. ಹಣವಿದ್ದು, ಕುಡಿಯುವ ನೀರು, ಮೇವು ಸೇರಿ ಬರ ಪರಿಹಾರ ಕಾಮಗಾರಿಗೆ ಹಣದ ಕೊರತೆಯಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಶೇ.75-80 ಬರಪರಿಹಾರ ಕಾಮಗಾರಿ ಸೂಕ್ತವಾಗಿಯೇ ನಡೆಯುತ್ತಿದೆ. ಶೇ.15-20 ನ್ಯೂನತೆ ಕುರಿತು ಚರ್ಚೆ ನಡೆಸಲಾಗಿದೆ. ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಸಂಪುಟ ಸಭೆ ತೀರ್ವನಿಸಿದೆ.

| ಕೃಷ್ಣ ಭೈರೇಗೌಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ

ಪ್ರಮುಖ ನಿರ್ಧಾರಗಳು

1. ಯಾವುದೇ ಊರಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದರೂ ಗರಿಷ್ಠ 2 ದಿನದೊಳಗೆ ಟ್ಯಾಂಕರ್ ಮೂಲಕ ಅಥವಾ ಖಾಸಗಿ ಬೋರ್​ವೆಲ್ ಮೂಲಕ ನೀರು ನೀಡುವ ಕೆಲಸ ಆಗಬೇಕು ಎಂದು ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

2. ಟ್ಯಾಂಕರ್ ಅನುಮತಿಯನ್ನು ಜಿಲ್ಲಾಧಿಕಾರಿಗಳು ನೀಡುತ್ತಿರುವುದರಿಂದ ನೀರು ಪೂರೈಸಲು ತಡವಾಗುತ್ತಿದೆ. ಈ ಅಧಿಕಾರವನ್ನು ತಹಸೀಲ್ದಾರರಿಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ನೀರು ಸರಬರಾಜು ಮಾಡಿದ ಟ್ಯಾಂಕರ್​ಗಳಿಗೆ ಹಣ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.

3. ಟೆಂಡರ್ ಇಲ್ಲದೆ ಬಾವಿ ಕೊರೆಯಲು ಜೂ.15ರವರೆಗೆ ವಿನಾಯಿತಿ ನೀಡಲು ತೀರ್ವನಿಸಲಾಗಿದೆ.

ಮೇವಿಗೆ ಬರವಿಲ್ಲ

ಜಾನುವಾರುಗಳಿಗಾಗಿ 150 ಮೇವು ಬ್ಯಾಂಕ್​ಗಳನ್ನು ಸ್ಥಾಪಿಸಲಾಗಿದ್ದು, 12 ಗೋಶಾಲೆಗಳನ್ನು ನಿರ್ವಿುಸಲಾಗಿದೆ. ಕೆ.ಜಿ.ಗೆ 2 ರೂ.ನಂತೆ 11,614 ಜಾನುವಾರಿಗೆ ಮೇವು ನೀಡಲಾಗುತ್ತಿದೆ. ಜನವರಿಯಲ್ಲಿ ರೈತರಿಗೆ ನೀಡಿರುವ 16.8 ಲಕ್ಷ ಮೇವು ಮಿನಿಕಿಟ್​ನಿಂದ 63 ಲಕ್ಷ ಮೆ.ಟನ್ ಉತ್ಪಾದನೆ ಆಗಿದೆ.

ಕೃಪೆ:ವಿಜಯವಾಣಿ

ಬರ ಸಮರಕ್ಕೆ ಸಜ್ಜಾದ ಸರ್ಕಾರ: ನೀರು, ಮೇವಿನ ಸಮಸ್ಯೆ ಗಂಭೀರ
state-govt-drought-cm-hd-kumaraswamy-villages-farmer