ವರ್ಗಾವಣೆ ದಂಧೆಗೆ ಬ್ರೇಕ್

kannada t-shirts

ಬೆಂಗಳೂರು:ಮೇ-12: ಸರ್ಕಾರಿ ನೌಕರರ ವರ್ಗಾವಣೆ ವೇಳೆ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಎಲ್ಲ ಇಲಾಖೆಗಳಿಗೂ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ‘ಬಡವರ ಬಂಧು’ ಯೋಜನೆಯ ಮೂಲಕ ಮೀಟರ್ ಬಡ್ಡಿಕೋರರನ್ನು ಮಟ್ಟಹಾಕಲು ಕ್ರಮ ಕೈಗೊಂಡಿದ್ದ ಸರ್ಕಾರ, ಈಗ ವರ್ಗಾವಣೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೌಕರರಲ್ಲಿ ನೆಮ್ಮದಿ ಮೂಡಿಸಲು ನಿರ್ಧರಿಸಿದೆ.

ಪ್ರತಿ ವರ್ಷ ಸಾಮಾನ್ಯ ವರ್ಗಾವಣೆಗೆ ಅವಧಿ ನಿಗಧಿ ಮಾಡಲಾಗುತ್ತದೆ. ಆದರೆ ನೌಕರರು ವರ್ಷಪೂರ್ತಿ ಆಯಕಟ್ಟಿನ ಸ್ಥಳಗಳಿಗಾಗಿ ಶಾಸಕರ ಮೂಲಕ ಒತ್ತಡ ತರುತ್ತಿರುತ್ತಾರೆ. ಇದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ. ಅದನ್ನು ತಪ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಜನತಾದಳ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎಚ್.ಜಿ. ಗೋವಿಂದೇಗೌಡ, ಶಿಕ್ಷಕರ ವರ್ಗಾವಣೆಯಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ರೂಪಿಸಿದ್ದರು. ಈ ವ್ಯವಸ್ಥೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಆ ನಂತರ ಆರೋಗ್ಯ ಇಲಾಖೆಗೂ ವಿಸ್ತರಣೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಮಿತಿ ಇದೆ. ಇದೀಗ ಎಲ್ಲ ಇಲಾಖೆಗೂ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ಬಜೆಟ್​ನಲ್ಲಿ ಘೋಷಣೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಫೆಬ್ರವರಿ 8ರಂದು ಮಂಡಿಸಿದ್ದ ಆಯವ್ಯಯದಲ್ಲಿ ಎಲ್ಲ ಇಲಾಖೆಗಳ ಸಿ ಮತ್ತು ಡಿ ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ತರುವುದಾಗಿ ಘೋಷಣೆ ಮಾಡಿದ್ದರು. ಈಗ ಇದನ್ನು ಜಾರಿಗೊಳಿಸಲು ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಿದೆ.

ಕಡತ ಸಿದ್ಧ: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಡತ ಸಿದ್ಧಪಡಿಸಿ ಮುಖ್ಯ ಕಾರ್ಯದರ್ಶಿಗೆ (ಸಿಎಸ್) ರವಾನಿಸಿದೆ. ಸಚಿವ ಸಂಪುಟದಲ್ಲಿ ಮಂಡಿಸಲು ಕಡತ ಸಿದ್ಧಪಡಿಸುವಂತೆ ಸಿಎಸ್​ಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡನೆಯಾಗಲಿದೆ. ಯಾವ ಹುದ್ದೆಯಲ್ಲಿ ನೌಕರರ ಅವಧಿ ಎಷ್ಟು ಇರಬೇಕು ಎಂಬುದನ್ನು ಸಂಪುಟದ ವಿವೇಚನೆಗೆ ಬಿಡಲಾಗುತ್ತಿದೆ. ವಿರೋಧದ ಸಾಧ್ಯತೆ: ಎಲ್ಲ ಇಲಾಖೆಗೂ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತಂದರೆ ಲಾಬಿ ಮಾಡಿ ಆಯಕಟ್ಟಿನ ಸ್ಥಳ ಗಿಟ್ಟಿಸಿಕೊಳ್ಳುತ್ತಿದ್ದ ನೌಕರರು ಶಾಸಕರ ಮೂಲಕ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಆದರೆ ಅಂತಹ ವಿರೋಧಕ್ಕೆ ಮಣಿಯದೆ ಮಧ್ಯವರ್ತಿಗಳನ್ನು ಮಟ್ಟ ಹಾಕಲೇಬೇಕು ಎಂಬ ದೃಢ ನಿರ್ಧಾರಕ್ಕೆ ಸರ್ಕಾರ ಬಂದಿದೆ. ನೌಕರರ ಸಂಖ್ಯೆ: ಮಂಜೂರು ಹುದ್ದೆಗಳು 7. 20 ಲಕ್ಷ ಖಾಲಿ ಇರುವ ಹುದ್ದೆಗಳು 2.50 ಲಕ್ಷ ಅಧಿಕಾರಿಗಳ ಸಂಖ್ಯೆ ಸುಮಾರು 4,500

ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕೌನ್ಸೆಲಿಂಗ್ ತರುವ ಸರ್ಕಾರದ ನಿರ್ಧಾರ ಸ್ವಾಗತಿಸುತ್ತೇವೆ. ಈ ವರ್ಷದಿಂದಲೇ ಜಾರಿಗೆ ಬರಲಿ.

| ಮಹದೇವಯ್ಯ ಮಠಪತಿ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ

ವರ್ಗಾವಣೆಯಲ್ಲಿ ಮಿತಿ ಮೀರುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ಕೌನ್ಸೆಲಿಂಗ್ ಅಗತ್ಯವಿತ್ತು. ಆದರೆ ನಿಯಮಗಳನ್ನು ರೂಪಿಸುವಾಗ ಪತಿ-ಪತ್ನಿ, ಕೌಟುಂಬಿಕ ಸಮಸ್ಯೆ ಹಾಗೂ ಅನಾರೋಗ್ಯಕ್ಕೆ ವಿನಾಯ್ತಿ ನೀಡಬೇಕು.

| ಸಿ. ಗುರುಸ್ವಾಮಿ, ರಾಜ್ಯ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ

ಅಧಿವೇಶನದಲ್ಲಿ ಕಾಯ್ದೆ

ಶಿಕ್ಷಕರ ವರ್ಗಾವಣೆ ಕಾಯ್ದೆ ಮಾದರಿಯಲ್ಲೇ ಕೌನ್ಸೆಲಿಂಗ್ ವ್ಯವಸ್ಥೆಗಾಗಿ ಹೊಸ ಕಾಯ್ದೆ ರೂಪಿಸಲಾಗುತ್ತದೆ. ಸಂಪುಟ ಸಭೆಯಲ್ಲಿ ವಿಧೇಯಕದೊಂದಿಗೆ ಕಡತ ಮಂಡನೆಯಾಗಲಿದೆ. ಇದೇ ವಾರದಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆ ವಿಧೇಯಕ ಸಿದ್ಧಪಡಿಸಿಕೊಡಲಿದೆ. ಜುಲೈನಲ್ಲಿ ನಡೆಯುವ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆ ಮಾಡಿ, ಒಪ್ಪಿಗೆ ಪಡೆದು ಜಾರಿಗೆ ತರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ಈ ವರ್ಷವೇ ಜಾರಿ

ಲೋಕಸಭೆ ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಈ ವರ್ಷ ಸಾಮಾನ್ಯ ವರ್ಗಾವಣೆ ವಿಳಂಬವಾಗಿದೆ. ಕೌನ್ಸೆಲಿಂಗ್ ವ್ಯವಸ್ಥೆಯನ್ನು ಇದೇ ವರ್ಷ ಜಾರಿಗೆ ತರಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ.

ಆಡಳಿತ ಯಂತ್ರ ಚುರುಕು ಮಾಡಲು ಕೌನ್ಸೆಲಿಂಗ್ ಅಗತ್ಯವಾಗಿದೆ. ಈ ಬಗ್ಗೆ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ.

| ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ವರ್ಗಾವಣೆಯಲ್ಲಿ ಲಾಬಿ ತಡೆಗಟ್ಟಲು ಕೌನ್ಸೆಲಿಂಗ್ ತರುವುದು ಸರ್ಕಾರದ ಉದ್ದೇಶವಾಗಿದೆ. ಈ ಸಂಬಂಧ ಕಡತ ಸಿದ್ಧವಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ.

| ಟಿ.ಎಂ.ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ

2ನೇ ಹಂತದಲ್ಲಿ ಎ ಮತ್ತು ಬಿ ಹುದ್ದೆಗಳಿಗೆ ಅನ್ವಯ

ಮೊದಲ ಹಂತದಲ್ಲಿ ಸಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಕೌನ್ಸೆಲಿಂಗ್ ಜಾರಿಗೊಳಿಸುವುದು. ಎರಡನೇ ಹಂತದಲ್ಲಿ ಎ ಮತ್ತು ಬಿ ಹುದ್ದೆಗಳ ವರ್ಗಾವಣೆಯನ್ನು ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಮಾದರಿಯಲ್ಲಿ ಸಮಿತಿ ಮೂಲಕ ನಡೆಸಬಹುದೇ ಎಂಬ ಬಗ್ಗೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಚರ್ಚೆ ನಡೆಸಿದ್ದಾರೆ. ಆದರೆ ಹಿರಿಯ ಅಧಿಕಾರಿಗಳಿಂದ ವಿರೋಧ ಎದುರಾಗುವ ಸಾಧ್ಯತೆಯೂ ಇದೆ. ಆದ್ದರಿಂದ ನಿಧಾನವಾಗಿ ಜಾರಿಗೆ ತರಬೇಕು ಎಂಬುದು ಸರ್ಕಾರದ ನಡೆಯಾಗಿದೆ.

ಪದಾಧಿಕಾರಿಗಳಿಗೂ ಬರಲಿ

ನೌಕರರ ಸಂಘಟನೆ ಪದಾಧಿಕಾರಿಗಳು ವರ್ಗಾವಣೆಯಿಂದ ವಿನಾಯ್ತಿ ಪಡೆಯುತ್ತಿದ್ದಾರೆ. ಇದಕ್ಕೆ ನೌಕರರ ವಿರೋಧ ಇದೆ. ಸುಮಾರು ಹತ್ತು ವರ್ಷ ಒಂದೇ ಸ್ಥಳದಲ್ಲಿ ಇರಲು ಪದಾಧಿಕಾರಿಗಳಿಗೆ ಸಾಧ್ಯವಾಗುತ್ತಿದೆ. ಅವರನ್ನೂ ವರ್ಗಾವಣೆ ವ್ಯಾಪ್ತಿಗೆ ತರಬೇಕೆಂಬ ಒತ್ತಾಯವಿದೆ.

ಕೃಪೆ:ವಿಜಯವಾಣಿ

ವರ್ಗಾವಣೆ ದಂಧೆಗೆ ಬ್ರೇಕ್
state-government-planning-to-introduce-counseling-method-for-transfer

website developers in mysore