ಐಎಂಎ ಆಸ್ತಿ ಮುಟ್ಟುಗೋಲು ಹಾಕಲು ನಿರ್ಧಾರ

kannada t-shirts

ಬೆಂಗಳೂರು:ಜೂ-17: ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣ ಸಂಬಂಧ ನಾಪತ್ತೆ ಆಗಿರುವ ಮನ್ಸೂರ್ ಖಾನ್ ವಿರುದ್ಧ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ (ಕೆಪಿಐಡಿ) ಅನ್ವಯ ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು, ಆಸ್ತಿ ಮುಟ್ಟುಗೋಲು ಹಾಕಲು ತೀರ್ವನಿಸಲಾಗಿದೆ.

ಇದುವರೆಗೂ ದಾಖಲಾಗಿರುವ ದೂರುಗಳ ಪ್ರಕಾರ ಆರೋಪಿ ಮನ್ಸೂರ್ ಖಾನ್ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾನೆ. ಆರೋಪಿಯಿಂದ ಹಣ ವಾಪಸ್ ಬರುವ ನಿರೀಕ್ಷೆ ಇಲ್ಲ. ಹೀಗಾಗಿ ಆತನಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಕೆಪಿಐಡಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲು ಕೋರ್ಟ್ ಅನುಮತಿ ಅಗತ್ಯ. ನ್ಯಾಯಾಲಯ ನೇಮಿಸುವ ಉಪ ವಿಭಾಗಾಧಿಕಾರಿಗಳ ಸಮ್ಮುಖ ಮನ್ಸೂರ್​ಗೆ ಸೇರಿದ ಆಸ್ತಿ ಜಪ್ತಿ ಮಾಡಿಕೊಂಡು ಮುಂದಿನ ತನಿಖೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಪತ್ರ ಬರೆದಿರುವ ಎಸ್​ಐಟಿ, ಬೆಂಗಳೂರಿನಲ್ಲಿ ಮನ್ಸೂರ್ ಹೊಂದಿರುವ ಆಸ್ತಿ ವಿವರ ನೀಡುವಂತೆ ಕೇಳಿದ್ದಾರೆ. ಸದ್ಯದಲ್ಲೇ ಐಎಂಎ ಕಚೇರಿಯಲ್ಲೂ ಪರಿಶೀಲಿಸಲಿದ್ದಾರೆ. ಐಎಂಎ ಕಂಪನಿಯ ಬ್ಯಾಂಕ್ ಖಾತೆಯಿಂದ ಇತ್ತೀಚೆಗೆ ಹಣ ಪಡೆದವರ ಬಗ್ಗೆ ಎಸ್​ಐಟಿ ಮಾಹಿತಿ ಕಲೆ ಹಾಕಿದೆ. ಕಂಪನಿ ವಿರುದ್ಧ 33 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, ಐಎಂಎ ಸಿಬ್ಬಂದಿ ಕೂಡ ಸಂಸ್ಥೆಯಲ್ಲಿ ಹಣ ಹೂಡಿ ಮೋಸ ಹೋಗಿದ್ದಾರೆ.

ಶಿವಾಜಿನಗರದಲ್ಲಿರುವ ಐಎಂಎ ಜುವೆಲರ್ಸ್​ನಲ್ಲಿ ಚಿನ್ನಾಭರಣ ಹಾಗೂ ಮಹತ್ವದ ದಾಖಲೆ ಇರುವುದರಿಂದ ಮಳಿಗೆಗೆ ಪೊಲೀಸರು ಬೀಗ ಜಡಿದು ಕೆಎಸ್​ಆರ್​ಪಿ ತುಕಡಿ ನಿಯೋಜಿಸಿದ್ದಾರೆ. ನ್ಯಾಯಾಲಯ ಅನುಮತಿ ನೀಡುವವರೆಗೂ ಮಳಿಗೆ ಬೀಗ ತೆಗೆಯುವಂತಿಲ್ಲ.

ಮನ್ಸೂರ್ ಬಂಧನ ದೊಡ್ಡ ವಿಷಯವೇ ಅಲ್ಲ. ದೇಶಾದ್ಯಂತ ಸದ್ದು ಮಾಡಿರುವ ಹಗರಣದ ಆರೋಪಿಗೆ ಯಾವುದೇ ರಾಜಕಾರಣಿ (ಸಚಿವ ಜಮೀರ್ ಅಹ್ಮದ್) ತನ್ನ ಮನೆಯಲ್ಲಿ ಆಶ್ರಯ ನೀಡುವುದಿಲ್ಲ.

| ಸತೀಶ ಜಾರಕಿಹೊಳಿ, ಸಚಿವ

ಐಎಂಎ ವಿಚಾರದಲ್ಲಿ ಸರ್ಕಾರದ ಕ್ರಮ ಸಾಲದು. ಪರಿಣಾಮಕಾರಿ ತನಿಖೆ ಮತ್ತು ಹೂಡಿಕೆದಾರರ ಹಿತರಕ್ಷಣೆ ಎರಡೂ ಪರಸ್ಪರ ಪೂರಕವಾಗಿ ನಡೆಯಬೇಕು.

| ಎಚ್.ಕೆ. ಪಾಟೀಲ್, ಕಾಂಗ್ರೆಸ್ ಹಿರಿಯ ನಾಯಕ

ಅಗ್ರಿಗೋಲ್ಡ್ ಸಂತ್ರಸ್ತರ ಸಮಾವೇಶ

ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿ ಮೋಸ ಹೋಗಿರುವ ಗ್ರಾಹಕರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಜು.8ರಂದು ಬೆಂಗಳೂರಿನಲ್ಲಿ ಅಗ್ರಿಗೋಲ್ಡ್ ಬಾಧಿತರ ಸಮಾವೇಶ ಏರ್ಪಡಿಸಲಾಗಿದೆ ಎಂದು ಅಗ್ರಿಗೋಲ್ಡ್ ಹೋರಾಟ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ನಿಸಾರ್ ಅಹ್ಮದ್ ರಾಯಚೂರಿನಲ್ಲಿ ತಿಳಿಸಿದ್ದಾರೆ.
ಕೃಪೆ:ವಿಜಯವಾಣಿ

ಐಎಂಎ ಆಸ್ತಿ ಮುಟ್ಟುಗೋಲು ಹಾಕಲು ನಿರ್ಧಾರ
state-government-decided-to-seize-ima-property

website developers in mysore