ಬೆಂಗಳೂರು ನಗರದಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ನಿಧಾನಗತಿಯ ಆರಂಭ: ಸಾರ್ವಜನಿಕರಿಂದ ಮಾಹಿತಿ ನೀಡಲು ಹಿಂಜರಿಕೆ.

ಬೆಂಗಳೂರು, ಆಗಸ್ಟ್ 21, 2021 (www.justkannada.in): ರಾಜ್ಯ ಸರ್ಕಾರ ದೇಶದಲ್ಲೇ ಮೊದಲು ಎನಿಸಿಕೊಂಡಿರುವ ಮನೆ ಮನೆಗೆ ತೆರಳಿ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಸಮೀಕ್ಷೆಯನ್ನು ಕೈಗೊಂಡಿದ್ದು, ಈ ಸಮೀಕ್ಷೆಯಲ್ಲಿ ವೈದ್ಯರು, ಪ್ಯಾರಾಮೆಡಿಕ್‌ಗಳು ಹಾಗೂ ಸ್ವಯಂಸೇವಕರು ಬೆಂಗಳೂರು ನಗರದ ೫೪ ವಾರ್ಡುಗಳಲ್ಲಿ ಮನೆ ಮನೆಗೆ ತೆರಳಿ ಕೋವಿಡ್-೧೯ ಲಸಿಕೆ ಸ್ಥಿತಿಗತಿ ಹಾಗೂ ಸಹಖಾಯಿಲೆಗಳ ಜೊತೆಗೆ ಸಾಮಾನ್ಯ ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿದೆ.

ಬಿಬಿಎಂಪಿ ಅಧಿಕಾರಿಯೊಬ್ಬರ ಪ್ರಕಾರ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಈ ಸಮೀಕ್ಷೆಯಡಿ ಈವರಗೆ ೨೯,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳನ್ನು ತಲುಪಲಾಗಿದೆ.

ಆದರೆ ಬಿಬಿಎಂಪಿ ವತಿಯಿಂದ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿದ ಹೊರತಾಗಿಯೂ ಈ ಸಮೀಕ್ಷೆಯನ್ನು ನಡೆಸುವುದು ಅಷ್ಟು ಸುಲಭವಾಗಿಲ್ಲ. ಅನೇಕ ಜನರು ತಮ್ಮ ದೂರವಾಣಿ ಸಂಖ್ಯೆ ಹಾಗೂ ಅವರ ವೈಯಕ್ತಿಕ ಆರೋಗ್ಯ ಕುರಿತಾದ ಮಾಹಿತಿಯನ್ನು ಒದಗಿಸಲು ಹಿಂಜರಿಯುತ್ತಿದ್ದಾರಂತೆ. ಕೆಲವರು ಈ ಸಮೀಕ್ಷೆಯ ಅಗತ್ಯವೇನು ಎಂದು ಪ್ರಶ್ನಿಸುವುದಲ್ಲದೆ, ಬಿಬಿಎಂಪಿಯವರು ಈ ಮಾಹಿತಿಯನ್ನು ಸೋರಿಕೆ ಮಾಡುವುದಿಲ್ಲ ಎನ್ನಲು ಏನು ಖಾತ್ರಿ ಎಂದು ಕೇಳುತ್ತಿದ್ದಾರಂತೆ.

ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಡಿ. ಅವರು ಈ ಕುರಿತು ಹೇಳಿರುವಂತೆ ಸಮೀಕ್ಷೆ ನಡೆಸುತ್ತಿರುವ ಬಿಬಿಎಂಪಿ ಪ್ರತಿನಿಧಿಗಳು ಈ ಸಮೀಕ್ಷೆಯ ಭಾಗವಾಗಿ ಒಂದೊAದು ಮನೆಯಲ್ಲಿಯೂ ಕುಟುಂಬಸ್ಥರ ಮನವೊಲಿಸಲು ಬಹಳ ಸಮಯ ಕಳೆಯಬೇಕಾಗುತ್ತಿದೆ. ಅವರು ಕೇಳವು ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿ, ನಾವು ಸಂಗ್ರಹಿಸುತ್ತಿರುವ ಮಾಹಿತಿ ಯಾವುದೇ ಕಾರಣಕ್ಕೂ ಸೋರಿಕೆ ಆಗುವುದಿಲ್ಲ ಎಂದು ಅವರನ್ನು ನಂಬಿಸಲು ಬಹಳ ಸಮಯ ಹಿಡಿಸುತ್ತಿದೆ ಎಂದಿದ್ದಾರೆ. ಜೊತೆಗೆ ಈ ಸಮೀಕ್ಷೆಯ ಕಾರ್ಯವಿಧಾನದಲ್ಲಿ ಹೊಸದಾಗಿ ಮಾಹಿತಿ ಗೌಪ್ಯತೆ ಕಾಪಾಡುವ ಒಂದು ನೀತಿಯನ್ನು ಅಳವಡಿಸಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಈ ಸಮೀಕ್ಷೆಯನ್ನು ನಗರದ ಒಳಿತಿಗಾಗಿ ನಡೆಸಲಾಗುತ್ತಿರುವುದಾಗಿ ವಿವರಿಸಿ ಸಮೀಕ್ಷೆ ನಡೆಸುವವರೊಂದಿಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ.

ಈ ಸಮೀಕ್ಷೆಯನ್ನು ಕಾಗದರಹಿತ ಮಾದರಿಯಡಿ ನಡೆಸಲಾಗುತ್ತಿದೆ. ಸಮೀಕ್ಷೆ ನಡೆಸುವ ಎಲ್ಲರಿಗೂ ಟ್ಯಾಬ್‌ ಗಳನ್ನು ನೀಡಲಾಗಿದೆ. ಅವರು ಎಲ್ಲಾ ಮಾಹಿತಿಯನ್ನೂ ಸಹ ಕಸ್ಟಂ-ನಿರ್ಮಿತ ಆ್ಯಪ್‌ ಗೆ ಅಪ್‌ಲೋಡ್ ಮಾಡುತ್ತಾರೆ. ಆದರೆ ಯಾರಾದರೂ ಮಾಹಿತಿ ನೀಡಲು ನಿರಾಕರಿಸಿದರೆ ಈ ಸಮೀಕ್ಷಾ ಮಾದರಿಯಲ್ಲಿ  ಆಯ್ಕೆಯನ್ನು ಒದಗಿಸಿಲ್ಲ.

ಪ್ರತಿ ತಂಡಕ್ಕೆ ಪ್ರತಿ ದಿನಕ್ಕೆ ೫೦ ಮನೆಗಳನ್ನು ಸಂದರ್ಶಿಸುವ ಗುರಿಯನ್ನು ನೀಡಲಾಗಿದ್ದು, ಸಮೀಕ್ಷೆ ನಡೆಸುವವರು ೩೫-೪೦ ಮನೆಗಳನ್ನು ಮಾತ್ರ ತಲುಪುವುದು ಸಾಧ್ಯವಾಗಿದೆ.

“ಈ ಸಮೀಕ್ಷೆಯಲ್ಲಿ ಈವರೆಗೆ ತಲುಪಲಾಗಿರುವ ವಾರ್ಡುಗಳು ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಪ್ರತಿ ಮನೆಯಲ್ಲಿ ಕನಿಷ್ಠ ಆರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರುವ ವಾರ್ಡುಗಳಾಗಿವೆ. ಕುಟುಂಬದ ಎಲ್ಲಾ ಸದಸ್ಯರ, ಪೂರಕ ವಿವರಗಳನ್ನು ಸಂಗ್ರಹಿಸುವುದು ತುಂಬಾ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ,” ಎನ್ನುತ್ತಾರೆ ರಣದೀಪ್.

ಈವರೆಗೆ ನಡೆಸಿರುವ ಸಮೀಕ್ಷೆಯಲ್ಲಿ ಪಶ್ಚಿಮ ಭಾಗದಲ್ಲಿ ಅತೀ ಹೆಚ್ಚಿನ ಮನೆಗಳನ್ನು ಅಂದರೆ ೭,೨೬೫ ಮನೆಗಳನ್ನು ಸಂದರ್ಶಿಸಲಾಗಿದೆ. ಆದರೆ ಆರ್‌ಆರ್ ನಗರದಲ್ಲಿ ಈವರೆಗೆ ಕೇವಲ ೧,೧೪೦ ಮನೆಗಳನ್ನು ಮಾತ್ರ ಸಂಗ್ರಹಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: start -home -health -survey –Bangalore-  Hesitation – give information – public.