ಬಿಜೆಪಿ, ಜೆಡಿಎಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣ: ಶ್ರೀನಿವಾಸ್ ಸೇರ್ಪಡೆಯಿಂದ ತುಮಕೂರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ- ಸಿದ್ಧರಾಮಯ್ಯ.

ಬೆಂಗಳೂರು,ಮಾರ್ಚ್,30,2023(www.justkannada.in): ಬಿಜೆಪಿ, ಜೆಡಿಎಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಹೀಗಾಗಿ ಹಲವರು ಬಿಜೆಪಿ ಮತ್ತು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಎಸ್ ಆರ್  ಶ್ರೀನಿವಾಸ್ ಸೇರ್ಪಡೆಯಿಂದ ತುಮಕೂರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಮಾಜಿ ಸಿಎಂ  ಸಿದ್ಧರಾಮಯ್ಯ ನುಡಿದರು.

ಜೆಡಿಎಸ್ ಮುಖಂಡ, ಮಾಜಿ ಸಚಿವ, ಗುಬ್ಬಿ ಶ್ರೀನಿವಾಸ್ ವಾಸು, ಬಿಜೆಪಿ ಮುಖಂಡರಾದ ಮೂಡಿಗೆರೆಯ ಹಾಲಪ್ಪ, ಸತ್ಯಾನಂದ ಮತ್ತಿತರರು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್,  ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖಂಡರನ್ನು ಪಕ್ಷಕ್ಜೆ ಸ್ವಾಗತಿಸಿ ಶುಭ ಹಾರೈಸಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ  ಸಿದ್ದರಾಮಯ್ಯ ಹೇಳಿದ್ದಿಷ್ಟು.

ವಾಸು ಅವರು ಸ್ವಾಭಿಮಾನಿ ರಾಜಕಾರಣಿ. ಅವರು ಯಾವುದೇ ಪಕ್ಷದಲ್ಲಿದ್ದರು ಬಹಳ ನಿಷ್ಠೆಯಿಂದ ಆ ಪಕ್ಷ ಕಟ್ಟುವ ಕೆಲಸ ಮಾಡುತ್ತಾರೆ. ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದಾಗ ಅವರು ನಮ್ಮ ಪಕ್ಷ ಸೇರಿದ್ದರು. ನಂತರ ಜೆಡಿಎಸ್ ನಲ್ಲಿ ನಿಷ್ಠಾವಂತರಾಗಿ ಮೂರು ಬಾರಿ ಶಾಸಕರಾಗಿ ಒಂದು ಬಾರಿ ಸ್ವತಂತ್ರ್ಯವಾಗಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಬಡವರ ಪರವಾಗಿ ಕೆಲಸ ಮಾಡುವ ಸರಳ ವ್ಯಕ್ತಿ. ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ ಎಂದರು.

ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡುವ ಯಾವುದೇ ಕೆಲಸ ಅವರು ಮಾಡಿಲ್ಲ. ಅವರನ್ನು ಬಲವಂತವಾಗಿ ಪಕ್ಷದಿಂದ ಆಚೆ ತಬ್ಬಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರು ಹೇಳಿದಂತೆ ಕೇಳಬೇಕು. ಅಲ್ಲಿ ಸ್ವತಂತ್ರಯವಾಗಿ ಯಾರಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಅವರು ಆ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ. ಅವರ ಕುಟುಂಬದಲ್ಲಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಅದರ ವಿರುದ್ಧ ಮಾತನಾಡಿದರೆ ಅವರನ್ನು ಉಳಿಯಲು ಬಿಡುವುದಿಲ್ಲ. ನನಗೂ ಅದೇ ರೀತಿ ಆಗಿತ್ತು, ವಾಸುಗೂ ಅದೇ ಆಗಿದೆ ಎಂದು ಸಿದ‍್ಧರಾಮಯ್ಯ ಜೆಡಿಎಸ್ ಅನ್ನು ಟೀಕಿಸಿದರು.

ನಾನು ನ.1ರಂದು ಗುಬ್ಬಿಗೆ ಹೋದಾಗ, ಹಾಲಿ ಶಾಸಕ ವಾಸು ಬಹಳ ನೋವಿನಿಂದ ಮಾತನಾಡಿದ್ದರು. ನಾನು ಕೂಡ ಅವರಿಗೆ ಪಕ್ಷ ಸೇರುವ ಆಹ್ವಾನ ನೀಡಿರಲಿಲ್ಲ. ಅವರಿಗೆ ತೀರ್ಮಾನ ಬಿಟ್ಟಿದ್ದೆ. ಅವರದ್ದು ಕಾಂಗ್ರೆಸ್ ಕುಟುಂಬ. ಮತ್ತೆ ಅವರು ಮನೆಗೆ ಹಿಂತಿರುಗಿದ್ದಾರೆ. ಅವರು ಯಾವುದೇ ಷರತ್ತು ಇಲ್ಲದೆ ಬಂದಿದ್ದಾರೆ. ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ.

ಮೂಡಿಗೆರೆ ಕ್ಷೇತ್ರದ ಹಾಲಪ್ಪ ಅವರು ಪುರಸಭೆ ಮಾಜಿ ಅಧ್ಯಕ್ಷರು, ಗೃಹ ಮಂಡಳಿ ಅಧ್ಯಕ್ಷರಾಗಿದ್ದರು. ಇನ್ನು ಮಂಡ್ಯದ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸತ್ಯಾನಂದ ಅವರು, ಮಾಜಿ ಅಧ್ಯಕ್ಷರಾದ ಸುಲ್ತಾನ್, ಬಾಬು ಅವರು ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರಿಗೂ ಆತ್ಮೀಯ ಸ್ವಾಗತ.

ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣವಿರುವ ಕಾರಣ ಪಕ್ಷ ಬಿಟ್ಟು ಬಂದಿದ್ದಾರೆ. ಇಂದು ಅನೇಕ ಹಾಲಿ ಶಾಸಕರು, ಪರಿಷತ್ ಸದಸ್ಯರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ರಾಜ್ಯ ಉಳಿಸಲು ಸಾಧ್ಯ ಎಂದು ಜನ ಭಾವಿಸಿದ್ದಾರೆ. ಬಿಜೆಪಿ ರಾಜ್ಯದ ವ್ಯವಸ್ಥೆ ಭ್ರಷ್ಟಗೊಳಿಸಿದ್ದು, ಅದನ್ನು ಸರಿಪಡಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಜನ ತೀರ್ಮಾನಿಸಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.

ಜೆಡಿಎಸ್ ಎಂದಿಗೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ನಾಶವಾಗಲಿದೆ ಎಂದು ಜನರಿಗೆ ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮಾತ್ರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ಇತ್ತೀಚಿನ ಸಮೀಕ್ಷೆಗಳನ್ನು ನೀವು ನೋಡಿದ್ದೀರಿ. ಪ್ರಸ್ತುತ ರಾಜ್ಯದ ವಾತಾವರಣ ನೋಡಿದರೂ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮೆಲಕು ಹಾಕಿ ಎಲ್ಲರ ಸರ್ಕಾರವನ್ನು ಹೋಲಿಕೆ ಮಾಡುತ್ತಿದ್ದಾರೆ.  ಹೀಗಾಗಿ ಜನರಿಗೆ ಸ್ಪಷ್ಟವಾಗಿ ಅರಿವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯ ಉಳಿಸಲು ಸಾಧ್ಯ ಎಂದು ಸಿದ್ಧರಾಮಯ್ಯ ನುಡಿದರು.

ಭ್ರಷ್ಟಾಚಾರ ತೊಲಗಿಸಲು, ಜನಪರ ಆಡಳಿತ ನೀಡಲು, ನುಡಿದಂತೆ ನಡೆಯಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯ ಎಂದು ಜನರಿಗೆ ಅರಿವಾಗಿದ್ದು, ಜನ ಬದಲಾವಣೆ ಬಯಸಿದ್ದಾರೆ. ನನ್ನ ಪ್ರಕಾರ 100ಕ್ಕೆ 100ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷ ಸೇರುತ್ತಿರುವ ಎಲ್ಲರಿಗೂ ಈ ಸಂದರ್ಭದಲ್ಲಿ ಶುಭ ಕೋರುತ್ತೇನೆ ಎಂದರು.

Key words: SR Shrinivas-join- Congress –former CM-Siddaramaiah.