ಬೋರ್ಡ್ ಹಾಗೂ ಸಾಂಸ್ಥಿಕ ಪರೀಕ್ಷೆಗಳನ್ನು ಬರೆಯಲು ವಿಶೇಷಚೇತನ ಪ್ರಮಾಣಪತ್ರಗಳಿಗಾಗಿ ಕಾಯುತ್ತಿರುವ ಆರು ವಿಶೇಷಚೇತನ ಮಕ್ಕಳು.

ಬೆಂಗಳೂರು, ಜನವರಿ 20, 2022 (www.justkannada.in): ತಮ್ಮ ತಪ್ಪೇನೂ ಇಲ್ಲದಿದ್ದರೂ ಸಹ ಆರು ವಿಶೇಷಚೇತನ ಮಕ್ಕಳಿಗೆ ಮುಂಬರುವ ತಿಂಗಳುಗಳಲ್ಲಿ ನಡೆಯಲಿರುವ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದಿರಬಹುದಾದಂತಹ ಪರಿಸ್ಥಿತಿ ಎದುರಾಗಿದೆ.

ಬೃಂದಾವನ್ ಎಜುಕೇಷನ್ ಟ್ರಸ್ಟ್ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ, ವಿಶೇಷಚೇತನ ಮಕ್ಕಳಿಗೆ ಹಾಗೂ ಅವರ ಪೋಷಕರಿಗೂ ಸಹ ಖಾಸಗಿಯಾಗಿ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ತರಬೇತಿಯನ್ನು ಒದಗಿಸುತ್ತಿದೆ. ವಿಶೇಷಚೇತನ ಮಕ್ಕಳಿಗೆ ಸರ್ಕಾರದ ವತಿಯಿಂದ ಪ್ರಮಾಣಪತ್ರಗಳನ್ನು ಒದಗಿಸಲಾಗುತ್ತದೆ. ಬೋರ್ಡ್ ಪರೀಕ್ಷೆಗಳನ್ನು ಎದುರಿಸಲು ಈ ವಿಶೇಷಚೇತನ ಪ್ರಮಾಣಪತ್ರ ಅಗತ್ಯ. ಆದರೆ ಈವೆರೆಗೂ ಇವರ್ಯಾರಿಗೂ ಪ್ರಮಾಣಪತ್ರಗಳು ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಬೃಂದಾವನ ಎಜುಕೇಷನ್ ಟ್ರಸ್ಟ್ ಸಂಬಂಧಪಟ್ಟ ಇಲಾಖೆಯ ಸಂಸ್ಥೆಯನ್ನು ಪ್ರತಿ ದಿನ ಪ್ರಮಾಣಪತ್ರಗಳನ್ನು ಒದಗಿಸುವಂತೆ ಕೇಳಿಕೊಳ್ಳುತ್ತಿದೆ. ಈ ವಿದ್ಯಾರ್ಥಿಗಳು ಬರುವ ಮಾರ್ಚ್ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಬರೆಯಲು ಸಜ್ಜಾಗಿದ್ದಾರೆ. ಆದರೆ ವಿಶೇಷಚೇತನ ಮಕ್ಕಳಿಗೆ ಎಸ್ಎಸ್ಎಲ್ಸಿ ಮಂಡಳಿಯಿಂದ ಒದಗಿಸುವ ವಿಶೇಷ ರಿಯಾಯಿತಿಗಳನ್ನು ಪಡೆಯಲು ವಿಶೇಷಚೇತನ ಪ್ರಮಾಣಪತ್ರವನ್ನು ನೀಡುವುದು ಅಗತ್ಯ. ಈ ಪ್ರಮಾಣಪತ್ರಗಳನ್ನು ನೀಡಲು ಮಂಡಳಿಯು ಬೆಂಗಳೂರಿನಲ್ಲಿ ಒಂದು ಹಾಗೂ ಮೈಸೂರಿನಲ್ಲಿ ಒಂದು, ಹೀಗೆ ಕೇವಲ ಎರಡು ಸಂಸ್ಥೆಗಳಿಗೆ ಮಾತ್ರ ಅನುಮೋದನೆ ನೀಡಿದೆ.

ಮೈಸೂರಿನ ಈ ಸಂಸ್ಥೆಯಲ್ಲಿ ವಿಶೇಷಚೇತನ ಪ್ರಮಾಣಪತ್ರಗಳನ್ನು ಪಡೆಯಲು ಕಳೆದ ೧೫ ವರ್ಷಗಳಿಂದ ಸೆಪ್ಟೆಂಬರ್ ತಿಂಗಳಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಇದನ್ನು ಪಡೆದುಕೊಳ್ಳುತ್ತಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಖಾಸಗಿಯಾಗಿ ಬರೆಯಲು ಅಕ್ಟೋಬರ್ ತಿಂಗಳಲ್ಲಿ ಅವರಿಗೆ ಟ್ರಸ್ಟ್ ಮೂಲಕ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಎಂದಿನಂತೆ ಎಲ್ಲಾ ವಿಧಾನಗಳನ್ನು ಸರಿಯಾಗಿ ಅನುಸರಿಸಿದ್ದರೂ ಸಹ ಆರು ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಡೆಯಿಂದ ಪ್ರಮಾಣಪತ್ರಗಳು ದೊರೆತಿಲ್ಲ. ಪ್ರಮಾಣಪತ್ರಗಳ ಕುರಿತು ವಿಚಾರಿಸಲು ಈ ಮಕ್ಕಳ ಪೋಷಕರು ಪ್ರತಿ ದಿನ ಸಂಸ್ಥೆಗೆ ಹೋಗಿ ಭೇಟಿಯಾಗುತ್ತಿದ್ದರೂ ಸಹ ಪ್ರಮಾಣಪತ್ರಗಳನ್ನು ವಿತರಿಸುವ ಪ್ರಕ್ರಿಯೆ ವಿಳಂಬವಾಗಿದೆ.

ಟ್ರಸ್ಟ್ನ ಶೈಕ್ಷಣಿಕ ಸಂಯೋಜಕಿ ರಜನಿ ಪದ್ಮನಾಭನ್ ಅವರು ಈ ಸಂಬಂಧ ಮಾತನಾಡಿ, “ನಾವು ಪ್ರಮಾಣಪತ್ರಗಳನ್ನು ವಿತರಿಸುವ ಆ ಸಂಸ್ಥೆಯೊಂದಿಗೆ ಕಳೆದ ೧೫ ವರ್ಷಗಳಿಂದಲೂ ಸಂಪರ್ಕ ಹೊಂದಿದ್ದೇವೆ. ಇದುವರೆವಿಗೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ ಈ ಬಾರಿ ಅದೇಕೋ ಮಕ್ಕಳಿಗೆ ಪ್ರಮಾಣಪತ್ರಗಳನ್ನು ಈವರೆಗೂ ನೀಡಿಲ್ಲ ಹಾಗೂ ಪೋಷಕರು ಈ ಕುರಿತು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ,” ಎಂದರು. ಈ ಪ್ರಮಾಣಪತ್ರಗಳಿಲ್ಲದೆ ಮಕ್ಕಳು ಬೋರ್ಡ್ ಪರೀಕ್ಷೆಗಳನ್ನು ಬರೆಯಲಾಗುವುದಿಲ್ಲ. ಏಕೆಂದರೆ ಬೋರ್ಡ್ ಕಡೆಯಿಂದ ವಿಶೇಷಚೇತನ ಮಕ್ಕಳಿಗೆ ಕೆಲವು ರಿಯಾಯಿತಿಗಳು ಲಭಿಸುತ್ತವೆ.

ಮಮತಾ ಜಿ. ಎಂಬ ಹೆಸರಿನ ಓರ್ವ ವಿಶೇಷಚೇತನ ಮಗುವಿನ ಪೋಷಕರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾ ನನ್ನ ಮಗಳು ನಿಧಾನವಾಗಿ ಕಲಿಯುತ್ತಾಳೆ, ಇದನ್ನು ಗಮನಿಸಿ ಅವಳಿಗೆ ಕೆಲವು ವಿಷಯಗಳಿಂದ ವಿನಾಯಿತಿ ದೊರೆಯುತ್ತದೆ. “ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸಿ ಆಕೆಯ ಹೆಸರನ್ನು ನೋಂದಾಯಿಸಿಕೊಂಡರು. ಆದರೆ ಅದಾದ ನಂತರ ಎರಡನೆಯ ಪರೀಕ್ಷೆ/ತಪಾಸಣೆಗೆ ಸಂಬಂಧಿಸಿದಂತೆ ಯಾವುದೇ ಕರೆ ಬರಲಿಲ್ಲ,” ಎಂದು ವಿವರಿಸಿದರು. ಪೋಷಕರು ಈ ಕುರಿತು ಪ್ರಶ್ನಿಸಿದಾಗ ಪ್ರಮಾಣಪತ್ರಗಳನ್ನು ವಿತರಿಸುವ ಸಂಸ್ಥೆಗೆ ಭೇಟಿ ನೀಡುವಂತೆ ತಿಳಿಸಿದರಂತೆ.

ಬೃಂದಾವನ್ ಎಜುಕೇಷನ್ ಟ್ರಸ್ಟ್ ತಿಳಿಸಿರುವಂತೆ ಬೆಂಗಳೂರು ಮೂಲದ ಸಂಸ್ಥೆ ಈ ವರ್ಷ ಪ್ರಮಾಣಪತ್ರಗಳನ್ನು ವಿತರಿಸುತ್ತಿಲ್ಲ. ಹಾಗಾಗಿ ಪೋಷಕರು ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.

ನನ್ನ ಮಗಳು ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ನಡೆಸುವ ೧೦ನೇ ತರಗತಿಯ ಪರೀಕ್ಷೆಗಳನ್ನು ಈ ಬಾರಿ ಎದುರಿಸಲಿದ್ದಾಳೆ. ಆಕೆಗೆ ಗಂಭೀರ ಸ್ವರೂಪದ ಕಲಿಕಾ ದೌರ್ಬಲ್ಯಗಳಿವೆ. ಆದ್ದರಿಂದ ಆಕೆಗೆ ಬೋರ್ಡ್ ಪರೀಕ್ಷೆಯಲ್ಲಿ ಕೆಲವು ವಿನಾಯಿತಿ ಪಡೆಯಲು ಅನುಮೋದಿತ ಸಂಸ್ಥೆಯಿಂದ ನೀಡುವ ಕಲಿಕಾ ದೌರ್ಬಲ್ಯ (learning disability (LD)) ಪ್ರಮಾಣಪತ್ರ ಪಡೆಯುವ ಅಗತ್ಯವಿದೆ.

ಆಕೆ ಓದುತ್ತಿರುವ, ಕಲಿಕಾ ದೌರ್ಬಲ್ಯಗಳಿರುವ ಮಕ್ಕಳಿಗೆ ತರಬೇತಿ ನೀಡುವ ಶಾಲೆ ಬೃಂದಾವನ್ ಎಜುಕೇಷನ್ ಸೊಸೈಟಿಯ ಸಲಹೆಯ ಮೇರೆಗೆ ಪ್ರಮಾಣಪತ್ರವನ್ನು ಪಡೆಯಲು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಅರ್ಜಿ ಸಲ್ಲಿಸಿದೆವು. ಈ ಸಂಬಂಧ ಸೆಪ್ಟೆಂಬರ್ ೨೦೨೧ರಂದು ಒಂದು ಸುತ್ತಿನ ಅಂದಾಜಿಸುವ ಪ್ರಕ್ರಿಯೆಯೂ ಮುಗಿದಿದೆ, ಎರಡನೇ ಸುತ್ತಿನ ಅಂದಾಜಿಸುವಿಕೆ ಮತ್ತು ಎಲ್ಡಿ ಪ್ರಮಾಣಪತ್ರ ವಿತರಣೆಗೆ ಸಂಬಂಧಪಟ್ಟಂತೆ ಅಪಾಯಿಂಟ್ ಮೆಂಟ್ ಗಾಗಿ ಕಾಯುತ್ತಿದ್ದೇವೆ.

ಈ ಸಂಬAಧ ನಾವು ನಿಮ್ಮಿಂದ ಈ ಕೆಳಕಂಡ ಬೆಂಬಲವನ್ನು ಕೋರಿದ್ದೇವೆ:

೧)       ಐಷ್ ನಿಂದ ನೀಡುವ ಕಲಿಕಾ ದೌರ್ಬಲ್ಯದ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸುವುದು; ಅಥವಾ

೨)       ಕಲಿಕಾ ದೌರ್ಬಲ್ಯ ಪ್ರಮಾಣಪತ್ರವನ್ನು ಸಲ್ಲಿಸಲು ಕರ್ನಾಟಕದ ಎಸ್ಎಸ್ಎಲ್ಸಿ ಮಂಡಳಿ ಹೆಚ್ಚುವರಿ ಸಮಯವನ್ನು ಒದಗಿಸುವುದು

Key words: specialty children- waiting  – certificates -board – exams