ಮೈಸೂರು ಅರಮನೆಯಲ್ಲಿ ವಿಶೇಷ ಫಲಪುಷ್ಪ ಪ್ರದರ್ಶನ: ನಟ ಅಪ್ಪು, ಶ್ರೀರಾಮಮಂದಿರ ಸೇರಿ ವಿವಿಧ ಪ್ರತಿಕೃತಿಗಳ ಅನಾವರಣ.

ಮೈಸೂರು,ಡಿಸೆಂಬರ್,25,2021(www.justkannada.in): ಮೈಸೂರು ಅರಮನೆಯಲ್ಲಿ ವರ್ಷಾಂತ್ಯದ ಜೊತೆಗೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಮೈಸೂರು ಅರಮನೆ ಮಂಡಳಿಯಿಂದ ಇಂದಿನಿಂದ ಅರಮನೆ ಆವರಣದಲ್ಲಿ ವಿಶೇಷ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.

ಮೈಸೂರು ಅರಮನೆ ಆವರಣದಲ್ಲಿ ಇಂದಿನಿಂದ ಆರಂಭವಾದ ವಿಶೇಷ ಫಲ ಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಚಾಲನೆ ನೀಡಿದರು.  15 ಸಾವಿರ ವಿಭಿನ್ನ ಮಾದರಿಯ ಅಲಂಕಾರಿಕ ಹೂವಿನ ಗಿಡಗಳು, ಸುಮಾರು 1 ಲಕ್ಷ ವಿವಿಧ ಹೂವುಗಳು ಅನಾವರಣ ಮಾಡಲಾಗಿದ್ದು, ಚಿತ್ತಾಕರ್ಷಕವಾಗಿ ಮೂಡಿ ಬಂದಿರುವ ಅಯೋಧ್ಯೆಯ ಶ್ರೀರಾಮಮಂದಿರ ಪ್ರತಿಕೃತಿ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ.

ಜೊತೆಗೆ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ, ನಂದಿ ಮತ್ತು ಮಹಿಷಾಸುರನ ಮಾದರಿಗಳು ಸೇರಿದಂತೆ ಒಟ್ಟು 18 ವಿವಿಧ ಬಗೆಯ ಪ್ರತಿಕೃತಿಗಳನ್ನ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ನಿಧನರಾದ ಜನರಲ್‌ ಬಿಪಿನ್ ರಾವತ್, ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ರವರ ಪ್ರತಿಕೃತಿಗಳನ್ನು ಸಹ ನಿರ್ಮಾಣ ಮಾಡಲಾಗಿದೆ.

ಇದೀಗ ಮೈಸೂರು ಅರಮನೆ ವೀಕ್ಷಣೆಗೆ ಆಗಮಿಸುತ್ತಿರುವ ಪ್ರವಾಸಿಗರನ್ನು ಫಲಪುಷ್ಪ ಪ್ರದರ್ಶನ ಸೆಳೆಯುತ್ತಿದ್ದು, ಇಂದಿನಿಂದ ಜನವರಿ 2ರವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30ರವರೆಗೆ ವೀಕ್ಷಿಸಲು ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಪ್ರವಾಸಿಗರು ಬಂದು ವಿವಿಧ ಪ್ರತಿಕೃತಿಗಳನ್ನ ನೋಡಿ ಕಣ್ತುಂಬಿಕೊಳ್ಳಬಹುದು.

Key words: Special -Flower Show -Mysore Palace-various- Replica