ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿ : ‘ಸಂಸದರಾಗಿರಲು ನೀವು ನಾಲಾಯಕ್’ ಎಂದ ಡಾ.ಪುಷ್ಪ ಅಮರ್ ನಾಥ್…

ಮೈಸೂರು,ಡಿಸೆಂಬರ್,9,2020(www.justkannada.in): ಭಯೋದ್ಪಾದಕರು ಬಂದ್ ನಲ್ಲಿ ಭಾಗವಹಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅನ್ನದಾತರನ್ನು ಭಯೋತ್ಪಾದಕರು ಎನ್ನುವ ನಿಮಗೆ ನೈತಿಕತೆ ಇದೆಯಾ. ಸಂಸದರಾಗಿರಲು ನೀವು ನಾಲಾಯಕ್. ಈ ಕೂಡಲೇ ನೀವು ರಾಜೀನಾಮೆ ನೀಡಬೇಕು  ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ಆಗ್ರಹಿಸಿದರು.logo-justkannada-mysore

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಡಾ.ಪುಷ್ಪ ಅಮರ್ ನಾಥ್,  ಬಂದ್ ವಿಫಲ ಎಂಬ ಸಿಎಂ  ಹೇಳಿಕೆ ಅಮಾನುಷ.  ರೈತರ ಹೆಸರಿನಲ್ಲಿ ಅಧಿಕಾರ ಹಿಡಿದ ಬಿಎಸ್ ವೈ ಅವರ ನೇತೃತ್ವದ ಸರ್ಕಾರದಿಂದ ಇಂತಹ ಹೇಳಿಕೆ ಅಮಾನವೀಯ. ಬಂದ್ ಮಾಡಿದ ಮೇಲೆ ಚರ್ಚೆಗೆ ಬನ್ನಿ ಎನ್ನುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.

25 ಮಂದಿ ಸಂಸದರು ಎಲ್ಲಿದ್ದೀರಾ..! ರೈತರ ಪರವಾಗಿ ಧ್ವನಿ ಎತ್ತಿದ್ದೀರಾ..?

ಹಾಗೆಯೇ ರಾಜ್ಯ ಬಿಜೆಪಿ ಸಂಸದರ  ವಿರುದ್ಧ ವಾಗ್ದಾಳಿ ಮುಂದುವರೆಸಿದ ಡಾ.ಪುಷ್ಪ ಅಮರ್ ನಾಥ್,  25 ಮಂದಿ ಸಂಸದರು ಎಲ್ಲಿದ್ದೀರಾ..! ರೈತರ ಪರವಾಗಿ ಧ್ವನಿ ಎತ್ತಿದ್ದೀರಾ..? ಗ್ಯಾಸ್ ಬೆಲೆ 50ರೂ. ಹೆಚ್ಚಳವಾಗಿದೆ. ಇನ್ನು ಮುಂದೆ ಸಬ್ಸಿಡಿ ಇಲ್ಲ. ಇನ್ನು ಎಷ್ಟು ದಿನ ಕಣ್ಣೊರೆಸೊ ತಂತ್ರ ಮಾಡ್ತೀರಾ. ಪೆಟ್ರೋಲ್, ಡೀಸೆಲ್ ಬೆಲೆ 40 ರೂ. ಇದ್ದಾಗ ನೀವು ಪ್ರತಿಭಟಿಸಿದ್ರಿ. ಈಗ ಏನು ಮಾಡ್ತಿದ್ದೀರಾ..? ಎಂದು ಹರಿಹಾಯ್ದರು.

ರೈತರು ಹೇಡಿಗಳಲ್ಲ ನೀವು ಹೇಡಿಗಳು….

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕರೆದಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಡಾ.ಪುಷ್ಪ ಅಮರ್ ನಾಥ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವರು ಹೇಳುತ್ತಾರೆ. ರೈತರು ಹೇಡಿಗಳಲ್ಲ ನೀವು ಹೇಡಿಗಳು. ಬಿಜೆಪಿ ನಾಯಕರಿಗೆ ರೈತರ ಮೇಲೆ ಗೌರವವಿಲ್ಲ. ಒಬ್ಬ ಶಾಸಕರು, ಸಂಸದರು ಮಹಿಳೆಯರ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಆಡಳಿತದಿಂದಾಗಿ ಯಾರು ನೆಮ್ಮದಿಯಿಂದಿಲ್ಲ. ಅದಾನಿ, ಅಂಬಾನಿ ದೊಡ್ಡ ಕಾರ್ಪೊರೇಟ್ ಕಂಪನಿ ಮಾಲೀಕರು ನೆಮ್ಮದಿಯಾಗಿದ್ದಾರೆ. ಆದರೆ ರೈತರು, ಕಾರ್ಮಿಕರು, ಮಹಿಳೆಯರಿಗೆ ದೇಶದಲ್ಲಿ ರಕ್ಷಣೆ ಇಲ್ಲ. ಮಹಿಳೆಯರ ಮೇಲೆ  ಅತ್ಯಾಚಾರ ನಿರಂತರವಾಗಿದೆ. ಈ ಎಲ್ಲದರ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದಿಂದ ಕರಪತ್ರವನ್ನು ಹಂಚುವ ಕೆಲಸ ಮಾಡುತ್ತೇವೆ ಎಂದು  ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಈ ಮಧ್ಯೆ ಕಾಂಗ್ರೆಸ್ ಪಕ್ಷದವರು ಪ್ರತಿಭಟಿಸಲು ಅವಕಾಶ ನೀಡುತ್ತಿಲ್ಲ. ಪ್ರತಿಕೃತಿ ದಹನ ಮಾಡಲು ಅವಕಾಶ ನೀಡುತ್ತಿಲ್ಲ. ಹೊರಗಡೆ ಪ್ರತಿಭಟಿಸಿದ್ರೆ ಜೈಲಿಗೆ ಹಾಕೋದಾಗಿ ಪೊಲೀಸರು ಬೆದರಿಕೆ ಹಾಕುತ್ತಾರೆ. ಬಿಜೆಪಿಯವರು ಪೊಲೀಸರ ಮೂಲಕ ನಮ್ಮ ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪುಷ್ಪ ಅಮರ್ ನಾಥ್ ಕಿಡಿಕಾರಿದರು.

Key words: Spark -against -state – central government- KPCC Women’s Unit- president- Dr. Pushpa Amarnath.