ಪ್ರಗತಿಯತ್ತ ಮುಖ ಮಾಡದ ಸ್ಮಾರ್ಟ್ ಸಿಟಿಗಳು

ಬೆಂಗಳೂರು:ಜೂ-6: ಕೇಂದ್ರ ಸರ್ಕಾರದ ಪ್ರಗತಿದಾಯಕ ಹೆಜ್ಜೆ ಎಂದೇ ಬಿಂಬಿತವಾಗಿದ್ದ ಸ್ಮಾರ್ಟ್ ಸಿಟಿ ಯೋಜನೆ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸುಗೊಂಡಿಲ್ಲ.

ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು, ಬೆಂಗಳೂರನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಆಯ್ಕೆ ಮಾಡಿಕೊಂಡಿತ್ತು. ಈ ನಗರಗಳು ಸ್ಮಾರ್ಟ್ ರೂಪ ಪಡೆದುಕೊಳ್ಳುವುದಿರಲಿ, ಆ ದಿಕ್ಕಿನತ್ತ ಮುಖವನ್ನೂ ತಿರುಗಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ನಗರ ವ್ಯವಸ್ಥೆಯಲ್ಲಿನ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಕೊಡುವುದು, ಜನ ಸಾಮಾನ್ಯರಿಗೆ ಸವಾಲು ರಹಿತವಾಗಿ ಸೇವೆಗಳನ್ನು ದೊರಕಿಸುವುದು, ನಗರ ವ್ಯಾಪ್ತಿಯಲ್ಲಿನ ಸಾಮಾನ್ಯ ಅಡೆತಡೆ ತೊಡೆದುಹಾಕುವುದು, ತಂತ್ರಜ್ಞಾನ ಅಳವಡಿಕೆ, ನಾವೀನ್ಯ ಬೆಳವಣಿಗೆಗಳ ಬಳಕೆ ಯೋಜನೆಯ ಕಲ್ಪನೆ. ಆದರೆ, ರಾಜ್ಯದಲ್ಲಿ ಈಗ ನಡೆದಿರುವ ಕೆಲಸಕಾರ್ಯಗಳು ಕೇವಲ ಕಾಂಕ್ರೀಟ್ ರಸ್ತೆ ಮಾಡುವುದು, ಪಾರ್ಕ್ ಅಭಿವೃದ್ಧಿಗೆ ಸೀಮಿತವಾಗಿದೆ.

ವಿವಿಧ ಹಂತದಲ್ಲಿರುವ ಕಾಮಗಾರಿ 381

ಒಟ್ಟು ಮೊತ್ತ 6462.63 ಕೋಟಿ

ಆಗಿರುವುದೇನು?: ಈವರೆಗೆ ಒಟ್ಟಾರೆ 40 ಯೋಜನೆಗಳು ಮುಗಿದಿದ್ದು 40 ಕೋಟಿ ರೂ.ಖರ್ಚಾಗಿದೆ. 2101.9 ಕೋಟಿ ರೂ.ವೆಚ್ಚದಲ್ಲಿ 145 ಕಾಮಗಾರಿಗಳನ್ನು ನಡೆಸಲು ಅವಾರ್ಡ್ ಮಾಡಲಾಗಿದೆ. 20.43 ಕೋಟಿ ವೆಚ್ಚದ 91 ಕೆಲಸಗಳಿಗೆ ಟೆಂಡರ್ ಪ್ರಕ್ರಿಯೆ ವಿವಿಧ ಹಂತದಲ್ಲಿ ನಡೆಯುತ್ತಿದೆ. ಇನ್ನು 963.71 ಕೋಟಿ ವೆಚ್ಚದ ಯೋಜನೆಗಳು ಸಮಗ್ರ ಯೋಜನಾ ವರದಿ ತಯಾರಿಕೆ ಹಂತದಲ್ಲಿದ್ದರೆ, 1322.2 ಕೋಟಿ ವೆಚ್ಚದ 46 ಕಾಮಗಾರಿ ಕಾನ್ಸೆಪ್ಟ್ ಸ್ಟೇಜ್​ನಲ್ಲಿದೆ.

ತಡವಾಗಿದ್ದೇಕೆ?: ಸ್ಮಾರ್ಟ್ ಸಿಟಿ ಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಕಷ್ಟು ತಡವಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ನಗರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿತ್ತು, ಕಾಮಗಾರಿ ನಡೆಸಲಾಗುತ್ತಿತ್ತು. ಇದೇ ರೀತಿ ಸ್ಮಾರ್ಟ್ ಸಿಟಿ ಎಂದೇ ಅಧಿಕಾರಿಗಳು ಭಾವಿಸಿದ್ದರು. ಇದೀಗ ಯೋಜನೆ ಸ್ವೂರೂಪ ತಿಳಿಯುತ್ತಿದೆ. ಇನ್ನು ಕಾಮಗಾರಿ ಮೇಲುಸ್ತುವಾರಿಗಾಗಿ ವಿಶೇಷ ವಾಹಕ ರಚನೆ ಮಾಡುವಲ್ಲಿ ಸಾಕಷ್ಟು ತಡವಾಗಿದೆ.

ವಿಶೇಷ ವಾಹಕ ರಚನೆ ಸೇರಿ ವಿವಿಧ ಕಾರಣಕ್ಕೆ ಕಾಮಗಾರಿಗಳು ಪ್ರಗತಿ ಹೊಂದಿರಲಿಲ್ಲ. ಇನ್ನು ಮುಂದೆ ವೇಗ ಪಡೆದುಕೊಳ್ಳಲಿದೆ.

| ಅಜುಂ ಪರ್ವೆಜ್ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ


ಕೃಪೆ:ವಿಜಯವಾಣಿ

ಪ್ರಗತಿಯತ್ತ ಮುಖ ಮಾಡದ ಸ್ಮಾರ್ಟ್ ಸಿಟಿಗಳು
smart-city-central-govt-state-govt-urban-development-central-scheme