ಸರ್ವರಿಗೆ ಸೂರು, ಸ್ಲಂಮುಕ್ತ ರಾಜ್ಯ: ಅಭಿವೃದ್ಧಿಯೇ ಮುಖ್ಯ ಅಜೆಂಡಾ, ಶುರು ಸಿಎಂ ಯಡಿಯೂರಪ್ಪ ಸವಾರಿ

kannada t-shirts

ಬೆಂಗಳೂರು:ಆ-23:ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ವರಿಗೂ ಸೂರು ಕಲ್ಪಿಸುವ, ಕೊಳೆಗೇರಿ ಮುಕ್ತ ರಾಜ್ಯ ನಿರ್ವಿುಸುವಂತಹ ಹತ್ತು ಹಲವು ಬೃಹತ್ ಯೋಜನೆಗಳ ಅಜೆಂಡಾದೊಂದಿಗೆ ಮುಂದಡಿ ಇಟ್ಟಿದ್ದಾರೆ.

ಕೆರೆಗಳಿಗೆ ಕಾಯಕಲ್ಪ ನೀಡುವ, ನೀರಾವರಿ ಯೋಜನೆಗಳ ಜಾರಿ ಜತೆಗೆ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವತ್ತಲೂ ಮುಖ್ಯಮಂತ್ರಿಗಳ ಚಿತ್ತ ಹರಿದಿದೆ. ಸಣ್ಣಸಣ್ಣ ಯೋಜನೆಗಳ ಮೂಲಕ ಏನನ್ನೂ ಸಾಧಿಸಲಾಗದೆಂಬುದನ್ನು ಅರಿತಿರುವ ಯಡಿಯೂರಪ್ಪ, ಜನಪ್ರಿಯ ಯೋಜನೆಗಳ ಜತೆಜತೆಗೆ ಇಂತಹ ಶಾಶ್ವತ ಕೆಲಸಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ವತಿಯಿಂದ ಸ್ಲಂಗಳಲ್ಲಿ ವಾಸ್ತವ್ಯ ಹೂಡುವ ಕಾರ್ಯಕ್ರಮವನ್ನು ಯಡಿಯೂರಪ್ಪ ರೂಪಿಸಿದ್ದರು. ಅದರ ಮೂಲಕ ಸ್ಲಂಗಳಲ್ಲಿನ ಸಮಸ್ಯೆ ಅರಿಯುವುದು ಅವರ ಉದ್ದೇಶವಾಗಿತ್ತು. ಯಡಿಯೂರಪ್ಪ ಅವರೇ ಮೆಜೆಸ್ಟಿಕ್ ಬಳಿಯ ಸ್ಲಂನಲ್ಲಿ ರಾತ್ರಿ ಕಳೆದಿದ್ದರು. ಈ ಅನುಭವದ ಆಧಾರದಲ್ಲಿಯೇ ಯೋಜನೆ ರೂಪಿಸುತ್ತಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರ 2022ರೊಳಗೆ ದೇಶದ ಪ್ರತಿಯೊಬ್ಬರಿಗೂ ಸೂರು ನೀಡುವ ಯೋಜನೆ ರೂಪಿಸಿದೆ. ಅದನ್ನೇ ಬಳಸಿಕೊಂಡು ಸ್ಲಂಮುಕ್ತ ಹಾಗೂ ಗುಡಿಸಲುಮುಕ್ತ ಮಾಡುವ ಉದ್ದೇಶ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸುಮಾರು ಮೂರು ಕೋಟಿ ಮನೆಗಳನ್ನು ಕಟ್ಟುವ ಗುರಿ ಹಾಕಿಕೊಂಡಿದೆ. ಅದರಲ್ಲಿ ಹೆಚ್ಚಿನ ಮನೆಗಳನ್ನು ರಾಜ್ಯಕ್ಕೆ ತರುವ ವಿಶ್ವಾಸ ಹೊಂದಲಾಗಿದೆ.

ಬಡವರಿಗೆ ಮನೆಗಳ ನಿರ್ವಣಕ್ಕಾಗಿಯೇ ಸರ್ಕಾರ ಪ್ರತಿ ವರ್ಷ ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತದೆ. ಆದರೆ ಮನೆ ಇಲ್ಲದವರ ಲೆಕ್ಕ ಮಾತ್ರ ಹೆಚ್ಚುತ್ತಲೇ ಇರುತ್ತದೆ. ಈವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ. ಇದೀಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇರುವುದರಿಂದ ಅವಕಾಶ ಬಳಸಿಕೊಳ್ಳುವುದು ಯಡಿಯೂರಪ್ಪ ಅವರ ಉದ್ದೇಶವಾಗಿದೆ.

ಅಪಾರ್ಟ್​ವೆುಂಟ್ ನಿರ್ಮಾಣ

ಪ್ರತಿಯೊಬ್ಬರಿಗೂ ವೈಯಕ್ತಿಕ ಮನೆ ನಿರ್ಮಾಣ ಸಾಧ್ಯವಿಲ್ಲ ವಾದ್ದರಿಂದಲೇ ಸ್ಲಂಗಳ ಜಾಗದಲ್ಲೇ ಲಂಬವಾಗಿ ಮನೆಗಳನ್ನು ಕಟ್ಟುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಎಲ್ಲ ಮೂಲಸೌಕರ್ಯ ಕಲ್ಪಿಸಿ ಸ್ಲಂನ ಯಾವ ಲಕ್ಷಣಗಳು ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ. ಆ ನಿಟ್ಟಿನಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸಮೀಕ್ಷೆ ಆರಂಭಿಸಿದ್ದಾರೆ.

ಬೆಂಗಳೂರಿಗೆ ಹೊಸ ರೂಪ

ಬೆಂಗಳೂರು ನಗರಕ್ಕೆ ಹೊಸ ರೂಪ ನೀಡುವ ಬಗ್ಗೆಯೂ ಚರ್ಚೆಯಾಗಿದೆ. ಪ್ರಮುಖವಾಗಿ ಸಂಚಾರ ದಟ್ಟಣೆಯ ನಿಯಂತ್ರಣ ಹಾಗೂ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ರೂಪಿಸಲಾಗುತ್ತದೆ. ಸಾಕಷ್ಟು ಕಡೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಗತ್ಯವಿರುವ ಕಡೆ ಸಣ್ಣ ಮೇಲ್ಸೇತುವೆಗಳ ನಿರ್ಮಾಣ ಮಾಡುವುದು, ಸಂಚಾರ ದಟ್ಟಣೆ ಉಂಟಾಗದಂತೆ ಆ ಮೂಲಕ ಎಚ್ಚರವಹಿಸುವ ಉದ್ದೇಶ ಇದೆ. ಅದೇ ರೀತಿ ನಗರಕ್ಕೆ ಕಾವೇರಿಯ ಜತೆಗೆ ಬೇರೆ ಮೂಲಗಳಿಂದ ನೀರು ತರುವ ಉದ್ದೇಶವಿದೆ.

ವಸತಿರಹಿತರೆಷ್ಟು?

ಲೆಕ್ಕದ ಪ್ರಕಾರ ರಾಜ್ಯದಲ್ಲಿ 18 ಲಕ್ಷಕ್ಕೂ ಅಧಿಕ ವಸತಿರಹಿತ ಕುಟುಂಬಗಳಿವೆ. ರಾಜ್ಯ ಸರ್ಕಾರ ಪ್ರತಿ ವರ್ಷ 3,500 ಕೋಟಿ ರೂ.ಗಳಿಂದ 4,000 ಕೋಟಿ ರೂ. ತನಕ ಹಣವನ್ನು ವಸತಿಗಾಗಿ ವೆಚ್ಚ ಮಾಡುತ್ತದೆ. 2018-19ರಲ್ಲಿ 1,500 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಿದೆ. ಆದರೆ ಗುಡಿಸಲು ಮುಕ್ತ ಮಾಡುವ ಕನಸು ಮಾತ್ರ ಈಡೇರಿಲ್ಲ.

ಕೊಳೆಗೇರಿಗಳೆಷ್ಟಿವೆ?

ರಾಜ್ಯದ ನಗರ ಪ್ರದೇಶದಲ್ಲಿ 2,804 ಕೊಳೆಗೇರಿಗಳಿವೆ. ಅದರಲ್ಲಿ 2,397 ಗುರುತಿಸಲ್ಪಟ್ಟ ಕೊಳೆಗೇರಿಗಳಿದ್ದು, 40 ಲಕ್ಷಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಇಷ್ಟು ಜನರಿಗೂ ಸೂರು ಕಲ್ಪಿಸುವುದು ಸರ್ಕಾರದ ಆಶಯವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಮನೆಗಳು ನಿರ್ವಣವಾಗಿವೆ. ಉಳಿದ ಕಡೆಗಳಲ್ಲಿ ಎಷ್ಟು ಮನೆಗಳ ನಿರ್ವಣದ ಅಗತ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

ಕೆರೆ ತುಂಬಿಸುವುದು ಮೊದಲ ಆದ್ಯತೆ

ಯಡಿಯೂರಪ್ಪ 2008ರಲ್ಲಿ ಸಿಎಂ ಆಗಿದ್ದಾಗಲೂ ಕೆರೆಗಳನ್ನು ತುಂಬಿಸುವ ಬಗ್ಗೆ ಹೆಚ್ಚು ಆದ್ಯತೆ ನೀಡಿದ್ದರು. ಈಗಲೂ ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುವ ಬಗ್ಗೆ ಯೋಜನೆ ರೂಪಿಸಲು ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಆ ಮೂಲಕ ಕೃಷ್ಣ ಹಾಗೂ ಕಾವೇರಿಯಲ್ಲಿ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳುವುದು ಅವರ ಉದ್ದೇಶವಾಗಿದೆ. ನೀರಾವರಿ ಯೋಜನೆಗಳನ್ನು ಪೂರ್ಣ ಮಾಡಲು 2 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ. ಅಷ್ಟು ದೊಡ್ಡ ಮೊತ್ತ ಹೊಂದಾಣಿಕೆ ಕಷ್ಟವಾಗುತ್ತದೆ. ಅದೇ ಕಾರಣದಿಂದಲೇ ಮೊದಲು ಕೆರೆಗಳನ್ನು ತುಂಬಿಸುವ ಕಡೆ ಆದ್ಯತೆ ನೀಡಲಾಗುತ್ತದೆ.
ಕೃಪೆ:ವಿಜಯವಾಣಿ

ಸರ್ವರಿಗೆ ಸೂರು, ಸ್ಲಂಮುಕ್ತ ರಾಜ್ಯ: ಅಭಿವೃದ್ಧಿಯೇ ಮುಖ್ಯ ಅಜೆಂಡಾ, ಶುರು ಸಿಎಂ ಯಡಿಯೂರಪ್ಪ ಸವಾರಿ

slum-bjp-govt-cm-bs-yeddiyurappa-development-scheme-state-govt-shelter/

website developers in mysore