ಯುವಕರಲ್ಲಿ ಕೌಶಲ್ಯತೆ ಬೆಳೆದರೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತದೆ- ಪ್ರೊ.ಎ.ಪಿ.ಜ್ಞಾನಪ್ರಕಾಶ್.

ಮೈಸೂರು,ಜುಲೈ,15,2022(www.justkannada.in): ಯುವಕರಲ್ಲಿ ಕೌಶಲ್ಯತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶ ಸಿಗುವಂತೆ ಮಾಡಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗ ಅಂತರಾಷ್ಟ್ರೀಯ ಯುವ ಕೌಶಲ್ಯ ಅಭಿವೃದ್ಧಿ ದಿನದ ಅಂಗವಾಗಿ ಎಜಿ ಅಂಡ್ ಪಿ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ಸೂಕ್ಷ್ಮದರ್ಶಕಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. 12 ಮೈಕ್ರೋಸ್‌ ಟಾಗಳನ್ನು ಇಂದು ವಿತರಣೆ ಮಾಡಲಾಗಿದೆ. ಇದು 10 ಲಕ್ಷದ ವೌಲ್ಯದ್ದು. ಇದು ವಿದ್ಯಾರ್ಥಿಗಳು ಉಪಯೋಗಕ್ಕೆ ಬಳಕೆಯಾಗುತ್ತದೆ. ಜೆನೆಟಿಕ್ಸ್ ವಿದ್ಯಾರ್ಥಿಗಳಿಗೆ ಮೈಕ್ರೋಸ್‌ಟಾ ತುಂಬಾ ಮುಖ್ಯ. ಇದು ಇಲ್ಲದಿದ್ದರೆ ಸಂಶೋಧನಾ ಹಾದಿ ಕಷ್ಟ. ಈ ನಿಟ್ಟಿನಲ್ಲಿ ಇದು ಹೆಚ್ಚು ಉಪಯೋಗಕ್ಕೆ ಬರುತ್ತದೆ ಎಂದರು.

ಇದೇ ವೇಳೆ ಸನ್ಮಾನ ಸ್ವೀಕರಿಸಿದ ಸೋಲಿಗ ಸಮುದಾಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಾ. ರತ್ನಮ್ಮ ಮಾತನಾಡಿ, ನಾವು ಕಾಡಿನ ಮಕ್ಕಳು. ಅಲ್ಲಿನ ಮರಗಿಡ, ಪ್ರಾಣಿ ಪಕ್ಷಿ, ಪ್ರಕೃತಿಯನ್ನು ಪೂಜೆ ಮಾಡುತ್ತೇವೆ. ಕಾಡಲ್ಲಿ ನಾವು ಪ್ರಕೃತಿ ಜೊತೆ ಒಂದಾಗಿ ಇರುತ್ತೇವೆ. ರಾಜ್ಯದಲ್ಲಿ 51 ಬುಡಕಟ್ಟು ಇದೆ. ಇದರಲ್ಲಿ 15 ಕಾಡಂಚಲ್ಲೇ ಇದೆ. ಅದರಲ್ಲಿ ಸೋಲಿಗರು ಒಂದು. ಬಿಳಿಗಿರಿ, ಮಹದೇಶ್ವರ ಬೆಟ್ಟದಲ್ಲಿ ಸೋಲಿಗರು ಹೆಚ್ಚಿದ್ದಾರೆ. ಈ ಸಮುದಾಯದಿಂದ ಬಂದ ನಾನು ಸ್ನಾತಕೋತ್ತರ ಪದವಿ ಪೂರೈಸಿ ನಂತರ ಪಿಎಚ್.ಡಿ ಮಾಡಿದೆ. ಇದೀಗ ಸೋಲಿಗರ ಪ್ರಗತಿಗಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಎಜಿ ಅಂಡ್ ಪಿ ಕಂಪನಿ ಪ್ರಾದೇಶಿಕ ಮುಖ್ಯಸ್ಥ ಅರುಣ್ ನಾಯ್ಕ್ ಮಾತನಾಡಿದರು. ಎನ್.ಬಹದ್ದೂರ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸೈನ್ಸ್ ನ ಪ್ರೊ.ಡಿ.ಆನಂದ್ ಯುವಕರಲ್ಲಿ ಕೌಶಲ್ಯತೆ ಮತ್ತು ಉದ್ಯೋಗಾವಾಕಶಗಳ ಬಗ್ಗೆ ಅರಿವು ಮೂಡಿಸಿದರು. ಸಿಂಡಿಕೇಟ್ ಸದಸ್ಯರಾದ ಡಾ.ಚೈತ್ರ ನಾರಾಯಣ್, ವಿಭಾಗದ ಅಧ್ಯಕ್ಷೆ ಪ್ರೊ.ಎಸ್.ಎಸ್.ಮಾಲಿನಿ, ಪ್ರೊ. ರಾಮಚಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ವೇಳೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಐವರು ಗಣ್ಯರನ್ನು ಸನ್ಮಾನಿಸಲಾಯಿತು. ರವಿ ಬಿ.ಎಸ್ (ಕ್ರೀಡೆ), ಡಾ. ರತ್ನಮ್ಮ (ಸೋಲಿಗ ಸಮುದಾಯ ಅಭಿವೃದ್ಧಿ), ಉರ್ಜಾ ಎಂ.ಪಿ (ಡಿಜಿಟಲ್ ಮಾರ್ಕೆಟಿಂಗ್) ವೆಂಕಟೇಶ್ ಎಸ್.ವಿ (ಸಂವಹನ ತರಬೇತಿ) ಡಾ. ನಿಂಗರಾಜು (ಜಾನಪದ ಕಲೆ) ಅವರನ್ನು ಸನ್ಮಾನಿಸಲಾಯಿತು.

Key words: skills-developed-youth- job -opportunities-mysore university- Prof. AP Gnanaprakash