ಅಮೆರಿಕದ ಅಥೆನ್ಸ್ ವಿವಿ ಜತೆ ಎಸ್.ಜೆ.ಪಿ. ಒಡಂಬಡಿಕೆ: ಅಸೋಸಿಯೇಟ್ ಡಿಗ್ರಿಗೆ ಚಾಲನೆ ಕುರಿತು ಚರ್ಚೆ.

kannada t-shirts

ಬೆಂಗಳೂರು,ಆಗಸ್ಟ್,17,2022(www.justkannada.in):  ಪ್ರತಿಷ್ಠಿತ ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ (ಎಸ್.ಜೆ.ಪಿ) ಮತ್ತು ಅಮೆರಿಕದ ಅಥೆನ್ಸ್ ಸ್ಟೇಟ್ ಯೂನಿವರ್ಸಿಟಿ ನಡುವೆ ಒಡಂಬಡಿಕೆ ಮಾಡಿಕೊಂಡು ಅಸೋಸಿಯೇಟ್ ಡಿಗ್ರಿ ಕೋರ್ಸ್ ಆರಂಭಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಬುಧವಾರ ಪೂರ್ವಭಾವಿ ಚರ್ಚೆ ನಡೆಸಿದರು.

ಈ ಚರ್ಚೆಯಲ್ಲಿ ಅಥೆನ್ಸ್‌ ಸ್ಟೇಟ್ ಯೂನಿವರ್ಸಿಟಿ ಮುಖ್ಯಸ್ಥ ಫಿಲಿಫ್ ಕೆ.ವೇ ಭಾಗವಹಿಸಿದ್ದರು. ನಂತರ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಈ ಒಡಂಬಡಿಕೆಯ ಅನ್ವಯ ಸೈಬರ್ ಸೆಕ್ಯೂರಿಟಿ, ಇಂಗ್ಲಿಷ್ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕೋರ್ಸುಗಳ ಅಡಿಯಲ್ಲಿ ಅಸೋಸಿಯೇಟ್ ಡಿಗ್ರಿ ಕೋರ್ಸುಗಳಲ್ಲಿ ಸಂಯೋಜಿತ ಅಸೋಸಿಯೇಟ್ ಡಿಗ್ರಿ ಆರಂಭಿಸುವ ಚಿಂತನೆ ಇದೆ. ಅಥೆನ್ಸ್ ವಿವಿ ಅಡಿಯಿರುವ ಡಲ್ಲಾಸ್ ಕಮ್ಯುನಿಟಿ ಕಾಲೇಜಿನ ಜತೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.

ಇದು ಅಂತಿಮ‌ರೂಪ ಪಡೆದರೆ ಡಲ್ಲಾಸ್ ಕಮ್ಯುನಿಟಿ  ಕಾಲೇಜಿನ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬಂದು ಅಧ್ಯಯನ ಮಾಡಲು ಅವಕಾಶ ನೀಡಲಾಗುವುದು. ಅಥೆನ್ಸ್ ವಿವಿ ಈಗಾಗಲೇ  ಕುವೆಂಪು ವಿವಿ ಮತ್ತು ಶ್ರೀ ಕೃಷ್ಣದೇವರಾಯ ವಿವಿ ಜತೆ ಒಡಂಬಡಿಕೆಗಳನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

ಸೈಬರ್ ಸೆಕ್ಯೂರಿಟಿ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಎಸ್ ಜೆ ಪಿ 24 ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿ ಕೊಡಲಾಗಿದೆ. ಈ ವರ್ಷ ಆನ್ಲೈನ್ ಮೂಲಕ ಅಮೆರಿಕದ 8 ಕೋರ್ಸ್ ಗಳನ್ನು ಮಾಡುತ್ತಿದ್ದಾರೆ. 2023-24 ರಲ್ಲಿ ಈ ವಿದ್ಯಾರ್ಥಿಗಳು ಅಥೆನ್ಸ್  ವಿಶ್ವವಿದ್ಯಾಲಯಕ್ಕೆ ತೆರಳಿ ವ್ಯಾಸಂಗ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಅಥೆನ್ಸ್ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಗುಣಮಟ್ಟದ ಇಂಗ್ಲೀಷ್ ಕಲಿಸಲು ಉತ್ಸುಕವಾಗಿದೆ. ಇದಕ್ಕಾಗಿ ಡಿಸಿಟಿಇ ಯಲ್ಲಿ ತರಬೇತಿ ಕೇಂದ್ರ ಸ್ಥಾಪನೆಗೆ ಅದು ಆಸಕ್ತಿ ತೋರಿದೆ ಎಂದು ಅವರು ಮಾಹಿತಿ ನೀಡಿದರು.

ಕೌಶಲ್ಯ ಅಭಿವೃದ್ಧಿ ವಿಷಯದಲ್ಲಿ ಅಮೆರಿಕದ ಈ ಸಂಸ್ಥೆ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಜೊತೆ ಕೈಗೂಡಿಸಿ ನಾಲ್ಕು ವರ್ಷಗಳ ನರ್ಸಿಂಗ್ ಪದವಿ ವಿದ್ಯಾಭ್ಯಾಸ ಒದಗಿಸಲಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಮಂಗಳವಾರ ರಾಜ್ಯಕ್ಕೆ  ಆಗಮಿಸಿರುವ ಅಮೆರಿಕದ ಈ ನಿಯೋಗವು ಹತ್ತು ದಿನ ರಾಜ್ಯದಲ್ಲಿ ಇರಲಿದೆ. ಗುರುವಾರ ಎಸ್.ಜೆ.ಪಿ.ಗೆ ಭೇಟಿ ನೀಡಿ, ಟ್ವಿನ್ನಿಂಗ್ ಡಿಗ್ರಿ ಮುಂತಾದವುಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದೆ.

ಆ.22ರಂದು ಕೃಷ್ಣದೇವರಾಯ ವಿವಿ ಕುಲಪತಿ ಜೊತೆ  ಚರ್ಚಿಸಲಿದೆ. ಆ.23ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ  ಪ್ರೊ.ಬಿ. ತಿಮ್ಮೇಗೌಡ ಅವರೊಂದಿಗೆ ಹೆಚ್ಚಿನ ಸಹಭಾಗಿತ್ವ ಕುರಿತು ಮಾತುಕತೆ ನಡೆಸಲಿದೆ ಎಂದು ಅಶ್ವತ್ ನಾರಾಯಣ್ ಮಾಹಿತಿ ನೀಡಿದರು.

ಅಮೆರಿಕದ ನಿಯೋಗವು ಆ.21ರ ಭಾನುವಾರ ವಿಶ್ವವಿಖ್ಯಾತ ಹಂಪೆಗೆ ತೆರಳಿ ಅಲ್ಲಿನ ತಾಣಗಳನ್ನು ವೀಕ್ಷಿಸಲಿದೆ. ಪೂರ್ವಭಾವಿ ಚರ್ಚೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ , ನಿರ್ದೇಶಕ ಅಪ್ಪಾಜಿ ಗೌಡ, ಹೆಚ್ಚುವರಿ ನಿರ್ದೇಶಕ ಅಶೋಕ ಬಿ ರೇವಣಕರ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ರವಿಚಂದ್ರನ್, ಜಂಟಿ ನಿರ್ದೇಶಕ ಶ್ರೀಕಾಂತ್ ಸಲಹೆಗಾರ ಅರುಣ್ ಸೀತಾರಾಮನ್ ಇದ್ದರು.

Key words: SJP -Athens University –America- Covenant-minister-ashwath narayan

website developers in mysore