ಸಿದ್ಧರಾಮೋತ್ಸವದಿಂದ ಬಿಜೆಪಿ ಒಳಗಡೆ ತಲ್ಲಣ ಆರಂಭ- ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು.ಆಗಸ್ಟ್,8,2022(www.justkannada.in):   ಮಾಜಿ ಸಿಎಂ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ಸಿನಿಂದ ಬಿಜೆಪಿಗೆ ಉರಿ ಶುರುವಾಗಿದೆ. ಬಿಜೆಪಿ ಒಳಗಡೆ ತಲ್ಲಣಗಳೇ ಆರಂಭವಾಗಿದೆ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಸಿ ಮಹದೇವಪ್ಪ, ನೀರಿಕ್ಷೆಗೂ ಮೀರಿ ಸಿದ್ಧರಾಮೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ದುಡ್ಡು ಕೊಟ್ಟರೂ ಅಷ್ಟು ಜನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ. ದುಡ್ಡು ಕೊಟ್ಟು ಜನ ಕರೆಸಿದ್ರೆ ಅರ್ಧ ಗಂಟೆಯಲ್ಲಿ ಜನ ವಾಪಸ್ ಹೋಗುತ್ತಾರೆ. ಈ ಕಾರ್ಯಕ್ರಮ ಆ ರೀತಿ ಆಗಲಿಲ್ಲ. 15 ಲಕ್ಷಕ್ಕೂ ಹೆಚ್ಚು ಜನ ಯಾವ ನಿರೀಕ್ಷೆ ಇಲ್ಲದೆ ಕಾರ್ಯಕ್ರಮಕ್ಕೆ ಬಂದರು. ಇದೊಂದು ಚಾರಿತ್ರಿಕ ಕಾರ್ಯಕ್ರಮ. ಈ ಕಾರ್ಯಕ್ರಮದ ಯಶಸ್ಸಿನಿಂದ ಕಾಂಗ್ರೆಸ್ ಮೈಮರೆಯ ಬಾರದು. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.

ಬಿಜೆಪಿ ತನ್ನ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಹುಟ್ಟುಹಬ್ಬ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡುತ್ತಿದೆ. ನಾವು ಮತ್ತೆ ಸ್ಪಷ್ಟ ಪಡಿಸುತ್ತಿದ್ದೇವೆ ಅದು ಸಿದ್ದರಾಮೋತ್ಸವ ಅಲ್ಲ. ಅದು ಸಿದ್ದರಾಮಯ್ಯನವರ ಹಿತೈಷಿಗಳು ಪಕ್ಷದ ಮುಖಂಡರುಗಳು ಸೇರಿ ಮಾಡಿದ ಅಮೃತ ಮಹೋತ್ಸವ ಎಂದರು.

ಬಿಜೆಪಿ ಹರ್ ಘರ್ ತಿರಂಗ ಆಂದೋಲನ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಸ್ವಾತಂತ್ರ್ಯದ ಆಶಯಗಳ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಅವರಿಗೆ ಬೇಕಾಗಿರುವುದು ಸರ್ವಾಧಿಕಾರತ್ವ ಮಾತ್ರ. ಅವರದ್ದು ಒಂದು ಧರ್ಮ, ಒಂದು ಭಾಷೆ ಒಬ್ಬರದ್ದೇ ಆಡಳಿತ ಎಂಬುದು ಮೋದಿ ಸಾಹೇಬರ ನಿಲುವು. ಇಂತಹವರಿಂದ ಸ್ವಾತಂತ್ರ್ಯದ ಆಶಯ ಈಡೇರಲು ಸಾಧ್ಯವಿಲ್ಲ. ಬಾವುಟ ತಯಾರಿಗೆ ತನ್ನದೆ ಆದ ನಿಯಮ ಕ್ರಮ ಇದೆ. ಅದನ್ನೆಲ್ಲ ಬಿಜೆಪಿ ಮುರಿದು ಬಾವುಟಕ್ಕೆ ಅವಮಾನಿಸುತ್ತಿದೆ ಎಂದು ಟೀಕಿಸಿದರು.

Key words: siddaramotsava-bjp-fear-Former minister-Siddaramaiah