ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡದಿರಿ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಏಪ್ರಿಲ್ 22, 2020 (www.justkannada.in): ಹಸಿವಿಗೆ ಜಾತಿ, ಧರ್ಮ, ಪಕ್ಷ ಮತ್ತು ಪಂಗಡ ಎಂಬುದು ಇರುವುದಿಲ್ಲ. ಹೀಗಾಗಿ ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡಬೇಡಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಕೂಲಿ, ಕಾರ್ಮಿಕರು, ವಲಸಿಗ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಬೇಡಿ ಎಂದು ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂದು ಬಿಟಿಎಂ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ರಾಮಲಿಂಗಾರೆಡ್ಡಿ ಅವರು ಆರಂಭಿಸಿರುವ ಅನ್ನ ದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಅಡುಗೆ ತಯಾರಿ ವೀಕ್ಷಿಸಿದರು. ಕ್ಷೇತ್ರದ ವಿವಿಧ ಬಡಾವಣೆಗಳಿಗೆ ತೆರಳಿ ಜನರಿಗೆ ಆಹಾರದ ಪ್ಯಾಕೆಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಸುದ್ದಿಗಾರರಿಗೆ ವಿರೋಧ ಪಕ್ಷದ ನಾಯಕರು ನೀಡಿದ ಹೇಳಿಕೆ ಇದು :
ಬಿಟಿಎಂ ವಿಧಾನಸಭೆ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ಅವರು ದವಸ, ಧಾನ್ಯ, ಆಹಾರ, ತರಕಾರಿಯನ್ನು ಬಡವರು, ವಲಸಿಗ ಕಾರ್ಮಿಕರಿಗೆ ಲಾಕ್‍ಡೌನ್ ಆದಾಗಿನಿಂದ ವಿತರಣೆ ಮಾಡುತ್ತಿದ್ದಾರೆ. 48 ಸಾವಿರ ಜನರಿಗೆ ನಿತ್ಯ ಅವರಿಂದಾಗಿ ಅನ್ನ ದಾಸೋಹ ನಡೆಯುತ್ತಿದೆ. ಅವರ ಈ ಕಾರ್ಯ ಶ್ಲಾಘನೀಯ. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಸರ್ಕಾರ ಹಸಿದವರಿಗೆ ಆಹಾರದ ಪ್ಯಾಕೇಟ್ ನೀಡುವುದಾಗಿ ಹೇಳಿದೆ. ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ರಾಮಲಿಂಗಾರೆಡ್ಡಿಯವರು ಒತ್ತಡ ಹೇರಿದ ಕಾರಣಕ್ಕೆ ಅವರ ಕ್ಷೇತ್ರಕ್ಕಾಗಿ ಸರ್ಕಾರದ ಕಡೆಯಿಂದ ಕೇವಲ ಐದು ಸಾವಿರ ಪ್ಯಾಕೇಟ್ ಬರುತ್ತಿದೆ. ಆದರೆ ರಾಮಲಿಂಗಾರೆಡ್ಡಿಯವರು ಸ್ವಂತ ಖರ್ಚಿನಲ್ಲಿ ರೆಡ್ಡಿಯವರು ಸಂಘ, ಸಂಸ್ಥೆಗಳ ನೆರವಿನೊಂದಿಗೆ ಊಟ, ತಿಂಡಿ, ದಿನಸಿ, ತರಕಾರಿ ವಿತರಣೆ ಮಾಡುತ್ತಿದ್ದಾರೆ. ಮನುಷ್ಯತ್ವ, ಮಾನವೀಯತೆಯಿಂದ ರೆಡ್ಡಿಯವರು ಈ ಕೆಲಸ ಮಾಡುತ್ತಿದ್ದಾರೆ.

ಈ ಭಾಗದಲ್ಲಿ ಕೂಲಿ, ಕಾರ್ಮಿಕರು, ವಲಸಿಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ಮಹನಗರ ಒಂದರಲ್ಲೇ ಕಾರ್ಮಿಕರ ಸಂಖ್ಯೆ ಮೂರು ಲಕ್ಷ ಮೀರಿದೆ. ಆದರೆ ಸರ್ಕಾರ ಒಂದು ಲಕ್ಷ ಪ್ಯಾಕೇಟ್ ಪೂರೈಕೆ ಮಾಡುತ್ತಿದೆರ. ಅದರಲ್ಲಿ 60 ಸಾವಿರ ಬಿಬಿಎಂಪಿ, 30 ಸಾವಿರ ಬೆಂಗಳೂರು ನಗರ ಜಿಲ್ಲಾಧಿಕಾರಿ, ಉಳಿದ 20 ಸಾವಿರ ಗ್ರಾಮೀಣ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಪೂರೈಕೆಯಾಗುತ್ತಿದೆ.

ಆಹಾರದ ಪ್ಯಾಕೇಟ್ ವಿತರಣೆಯಲಿ ಪಕ್ಷಪಾತ, ತಾರತಮ್ಯ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಬಿಜೆಪಿ ಕಾರ್ಪೊರೇಟರ್ ಗಳು ಅವರಿಗೆ ಬೇಕಾದವರಿಗೆ ಮಾತ್ರ ಆಹಾರ ನೀಡುತ್ತಿದ್ದಾರೆ ಎಂಬ ದೂರುಗಳಿವೆ. ಜೊತೆಗೆ ರಾಜ್ಯದ ನಾನಾ ಕಡೆಗಳಲ್ಲಿಯೂ ಇಂತಹ ವರ್ತನೆ ಕಂಡು ಬರುತ್ತಿದೆ.

ಹಸಿವು ಎಲ್ಲರಿಗೂ ಒಂದೇ. ಸೋಂಕು ಜಾತಿ, ಧರ್ಮ ನೋಡಿಕೊಂಡು ಬರುವುದಿಲ್ಲ. ಎಲ್ಲ ಧರ್ಮದವರನ್ನೂ ಆವರಿಸಿಕೊಳ್ಳುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಸಿದ ಎಲ್ಲರಿಗೂ ಅನ್ನ ನೀಡುವುದು ಸರ್ಕಾರದ ಕರ್ತವ್ಯ.

ಯೋಧರಿಗೆ ಸೆಲ್ಯೂಟ್ ಮಾಡಬೇಕು:
ಪಾದರಾಯನಪುರ ಘಟನೆ ಸಮರ್ಥನೀಯವಲ್ಲ. ತಪ್ಪು ಯಾರು ಮಾಡಿದ್ದರೂ ತಪ್ಪೇ. ಅದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ಘಟನೆಗೆ ಜಾತಿ, ಧರ್ಮದ ಬಣ್ಣ ಕಟ್ಟಬಾರದು. ತಪ್ಪು ಮಾಡಿದವರಿಗೆ, ಕಾನೂನು ಕೈಗೆ ತೆಗೆದುಕೊಳ್ಳುವವರಿಗೆ ಶಿಕ್ಷೆ ಆಗಲೇಬೇಕು ಎಂದು ನಾನು ಒತ್ತಾಯಿಸುತ್ತೇನೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತರೇ ನಿಜವಾದ ಯೋಧರು. ಅವರಿಗೆ ಸೆಲ್ಯೂಟ್ ಮಾಡಬೇಕಾದ್ದು ನಮ್ಮಗಳ ಕರ್ತವ್ಯ.

ವೈದ್ಯರು, ಆಶಾ ಕಾರ್ಯಕರ್ತರೇ ನಿಜವಾದ ಯೋಧರು. ನಾವು ಬರೇ ಹೇಳಿಕೆ ಕೊಡಬಹುದು. ನಿರಂತರವಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾತನಾಡುವವರು, ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಕಾನೂನು ಮೀರಿದವರು ಯಾರೂ ಇಲ್ಲ. ನಾವು ಅವರಿಗೆ ಎಲ್ಲ ರೀತಿಯ ಸಹಕಾರ, ಬೆಂಬಲ ಕೊಡಬೇಕು.

ಬಡವರಿಗೆ ವಿತರಿಸಲು ದಾಸ್ತಾನಾಗಿರುವ ಅಕ್ಕಿಯಿಂದ ಸ್ಯಾನಿಟೈಸರ್ ತಯಾರು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ಸರಿಯಲ್ಲ. ಸ್ಯಾನಿಟೈಸರ್ ತಯಾರು ಮಾಡಲು ಬೇರೆ ವಸ್ತುಗಳಿವೆ. ಆ ಮೂಲಕ ಮಾಡಲಿ. ಅಕ್ಕಿ ಹೆಚ್ಚಾಗಿದ್ದರೆ ಹಸಿದಿರುವ ಬಸವರಿಗೆ ವಿತರಣೆ ಮಾಡಲಿ. ಬೇರೆ ದಾರಿಯೇ ಇಲ್ಲ ಎಂದಾಗ ಮಾತ್ರ ಅಕ್ಕಿ ಬಳಸಲಿ.

ರಾಜಕೀಯಪ್ರೇರಿತ ಹೇಳಿಕೆ :
ಮಾಜಿ ಸಚಿವರಾದ ಸಿ.ಎಂ. ಇಬ್ರಾಹಿಂ, ಜಮೀರ್ ಅಹಮದ್ ಅವರು ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ರಾಜಕೀಯ ಪ್ರೇರಿತ. ಅವರು ಬೇಜವಾಬ್ದಾರಿತನದಿಂದ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುವುದಿಲ್ಲ. ಇಬ್ರಾಹಿಂ, ಜಮೀರ್ ಅವರೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು, ಮುಖಂಡರು ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.