ಸಿದ್ದರಾಮಯ್ಯ ಸುತ್ತಲೂ ಭಯೋತ್ಪಾದಕತೆಗೆ ಬೆಂಬಲ ಕೊಡುವವರೇ ತುಂಬಿಕೊಂಡಿದ್ದಾರೆ- ಶಾಸಕ ಸಿ.ಟಿ ರವಿ ಆರೋಪ.

ಮೈಸೂರು,ಜೂನ್,2,2022(www.justkannada.in): ಸಿದ್ದರಾಮಯ್ಯ ಸುತ್ತಲೂ ಭಯೋತ್ಪಾದಕತೆಗೆ ಬೆಂಬಲ ಕೊಡುವವರೇ ತುಂಬಿಕೊಂಡಿದ್ದಾರೆ. ಆರ್ ಎಸ್ ಎಸ್ ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದರು.

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ನಮ್ಮನ್ನು ಕೋಮುವಾದಿಗಳು ಎಂದು ಆರೋಪಿಸುತ್ತಾರೆ. ಈ ರೀತಿ ಆರೋಪಿಸುವವರ ಮನಸ್ಥಿತಿ ನಾನು ಕಳ್ಳ, ಪರರನ್ನು ನಂಬೆ ಎಂಬಂತಿದೆ. ಸಿದ್ದರಾಮಯ್ಯ ಸುತ್ತಲೂ ಭಯೋತ್ಪಾದಕತೆಗೆ ಬೆಂಬಲ ಕೊಡುವವರೇ ತುಂಬಿಕೊಂಡಿದ್ದಾರೆ. ಅವರಿಗೆ ದೃಷ್ಟಿ ದೋಷವಿದೆ‌. ವಯಸ್ಸಾದಂತೆ ಮನಸ್ಸು ಪಕ್ವವಾಗುತ್ತದೆ. ಆದರೆ ಅವರ ಮನಸ್ಸು ಪಕ್ವವಾಗುತ್ತಿಲ್ಲ. ಆರ್ ಎಸ್ ಎಸ್ ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ದೇಶದ ಜನರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ದೇಶ ಭಕ್ತ ಸಂಘಟನೆ ಎಂಬುದನ್ನು ಆರ್ ಎಸ್ ಎಸ್ ಹಲವಾರು ಬಾರಿ ಸಾಬೀತು ಮಾಡಿದೆ. ಮುಂದೊಂದು ದಿನ ಸಿದ್ದರಾಮಯ್ಯನವರಿಗೂ ತಮ್ಮ ತಪ್ಪಿನ ಅರಿವಾಗಿ ಆಗ ಪಶ್ಚಾತ್ತಾಪ ಪಟ್ಟು ತಪ್ಪನ್ನು ಸರಿಪಡಿಸಿಕೊಳ್ಳಲಿದ್ದಾರೆ ಎಂದು ನುಡಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ, ಈಗ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ನಮ್ಮ ಆತ್ಮ ವಿಶ್ವಾಸ ಬದ್ದತೆಗೆ ಮತ ಕೊಡುವ ಚುನಾವಣೆ ಇದಾಗಿದೆ. ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಸಿ ಟಿ ರವಿ ಮಾಡಿದರು.

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಯ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ಮಾಡಲಾಗಿದೆ. ರಣತಂತ್ರದ ರಹಸ್ಯವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ಬಳಿ 32 ಹೆಚ್ಚುವರಿ ಮತಗಳಿವೆ, ಕಾಂಗ್ರೆಸ್ ಬಳಿ 19 ಹೆಚ್ಚುವರಿ ಮತಗಳಿವೆ. ಬಹಿರಂಗ ಬಂಡಾಯದ ಲಾಭವನ್ನು ನಾವು ಪಡೆದುಕೊಳ್ಳುತ್ತೇವೆಂದು ಹೇಳಿದರೆ ವಿರೋಧಿಗಳು ಸಿಟ್ಟಾಗಬಹುದು. ಫಲಿತಾಂಶವೇ ಎಲ್ಲಕ್ಕೂ ಉತ್ತರ ನೀಡಲಿದೆ ಎಂದು ಸಿ.ಟಿ ರವಿ ತಿಳಿಸಿದರು.

ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತ್ ಕಲ್ಪನೆ ದೇಶದ ಸ್ವಾವಲಂಬನೆ ಹೆಚ್ಚಿಸಿದೆ. 271 ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು, 6 ಲಕ್ಷ ಕೋಟಿ ಹಣವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪುವಂತೆ ಮಾಡಿದ್ದೇವೆ. ಕೇಂದ್ರದಿಂದ ಕಳಿಸುವ ಒಂದುರೂಪಾಯಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತೆ. ದೇಶದ ಎಲ್ಲೆಡೆ ಬ್ರಾಡ್ ಬ್ಯಾಂಡ್ ಕನೆಕ್ಟಿವಿಟಿ ಹೆಚ್ಚಿಸಿದ್ದೇವೆ. ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕತೆಗೆ ಒತ್ತು ನೀಡಿದ್ದೇವೆ. ಕೌಶಲ್ಯ ತರಬೇತಿಗಳನ್ನು ಶಿಕ್ಷಣದ ಜೊತೆ ಜೋಡಿಸಿದ್ದೇವೆ. ಸಾಂಸ್ಕೃತಿಕತೆ ಮತ್ತು ಕ್ರೀಡೆಗಳು ಪಠ್ಯದ ಒಂದು ಭಾಗವಾಗಿವೆ. ಬಹುಮುಖು ಆಯಾಮ ಇರುವ ಶಿಕ್ಷಣ ನೀತಿಯನ್ನ ಕೇಂದ್ರ ಸರ್ಕಾರ ನೀಡಿದೆ. ಮನಸ್ಥಿತಿ ಬದಲಾಯಿಸಿ, ಪರಿಸ್ಥಿತಿ ಸುಧಾರಿಸುವ ಕೆಲಸವನ್ನ ಕೇಂದ್ರ ಸರ್ಕಾರ ಮಾಡ್ತಿದೆ. ಭಾರತ ತನ್ನ ಸಿದ್ದಾಂತಕ್ಕನುಗುಣವಾಗಿ ಕಷ್ಟದಲ್ಲಿರುವ ದೇಶಗಳಿಗೆ ಸಹಾಯ ಮಾಡಿದೆ ಎಂದು ಸಿಟಿ ರವಿ ಗುಣಗಾನ ಮಾಡಿದರು.

ಭಾರತ ಇತರೆ ದೇಶಗಳಿಗೆ ವ್ಯಾಕ್ಸಿನ್ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಗ್ತಿದೆ. ಇಂದು ಜಾಗತಿಕ ನಾಯಕ ಅಂದ್ರೆ ಪ್ರಧಾನಿ ಮೋದಿ. ಜಾಗತಿಕವಾಗಿ ಶೇ.79ರಷ್ಟು ಜನ ಬೆಂಬಲ ಇದೆ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Key words: Siddaramaiah – RSS-BJP-MLA-CT Ravi