ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಆಗುವ ಹುಚ್ಚು- ಹೆಚ್.ಡಿ ಕುಮಾರಸ್ವಾಮಿ ಟೀಕೆ.

ಬೆಂಗಳೂರು,ಫೆಬ್ರವರಿ,5,2022(www.justkannada.in):  ಕಾಂಗ್ರೆಸ್ ಪಕ್ಷ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಬ್ಬರಿಗೂ  ಮುಖ್ಯಮಂತ್ರಿ ಆಗುವ ಹುಚ್ಚು. ಇಬ್ಬರಿಗೂ ಓಟು ಪಡೆಯುವ ಹುಚ್ಚು ಹತ್ತಿಕೊಂಡಿದೆ. ಸಮಾಜಕ್ಕೆ ಒಳ್ಳೆಯದಾಗಲಿ ಅನ್ನುವುದು ಅವರಿಗಿಲ್ಲ. ಬಿಜೆಪಿಯವರಿಗೆ ಕೂಡ ಮತ ಪಡೆಯುವ ಹುಚ್ಚು ಬಂದಿದೆ  ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಾರೆ. ಸಿದ್ದರಾಮಯ್ಯ ಒಂದು ಮಾತು ಹೇಳಿದರೆ, ಡಿಕೆಶಿ ಒಂದು ಮಾತು ಹೇಳುತ್ತಾರೆ. ಇವರಲ್ಲಿ ಒಬ್ಬರಿಗೆ ಮುಸ್ಲಿಮರ ಮತಗಳನ್ನು ಪಡೆಯುವ ಉಮೇದು. ಮತ್ತೊಬ್ಬರಿಗೆ ಮುಸ್ಲಿಮರ ಪರ ಮಾತಾಡಿದರೆ ಏನು ಹೆಚ್ಚು ಕಡಿಮೆ ಆಗುತ್ತದೋ ಎಂಬ  ಭಯ ಎಂದು ಕುಟುಕಿದರು.

ಮಹದಾಯಿ ಬಗ್ಗೆ ಕಾಂಗ್ರೆಸ್ ಪಕ್ಷದ್ದು ಎರಡು ನಾಲಿಗೆ:

ಮಹದಾಯಿ ನದಿ ನೀರಿನ ವಿವಾದದ ಬಗ್ಗೆ ಕಾಂಗ್ರೆಸ್ ಎರಡು ನಾಲಿಗೆ ನೀತಿ ಅನುಸರಿಸುತ್ತಿವೆ. ಮಹದಾಯಿ ಬಗ್ಗೆ ಆ ಪಕ್ಷದ ಸತೀಶ್ ಜಾರಕಿಹೊಳಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ನಿನ್ನೆ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ ಗೋವಾ ಚುನಾವಣೆ ಪ್ರಣಾಳಿಕೆಯಲ್ಲಿ ಯಾವುದೇ ಕಾರಣಕ್ಕೂ ಮಹದಾಯಿ ನೀರನ್ನು ಗೋವಾದಿಂದ ಬಿಟ್ಟು ಕೊಡಲ್ಲ ಅಂತ ಹೇಳಿಕೊಂಡಿದಾರೆ. ಇದು ಅವರ ದ್ವಿಮುಖ ನೀತಿ ತೋರಿಸುತ್ತದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಇಬ್ರಾಹಿಂ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ:

ಕಾಂಗ್ರೆಸ್ ತೊರೆದಿರುವ ಸಿಎಂ ಇಬ್ರಾಹಿಂ ಅವರು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಹೇಳಿದರು.

ಇಬ್ರಾಹಿಂ ಮೊದಲಿನಿಂದಲೂ ಜೆಡಿಎಸ್ ಜತೆ ಗುರುತಿಸಿಕೊಂಡವರು. ನಡುವೆ ಕೆಲ ವ್ಯತ್ಯಾಸಗಳು ಆಗಿದ್ದವು. ಈಗ ಮತ್ತೆ ಜೆಡಿಎಸ್ ಜತೆ ಸೇರಿ ಮತ್ತೊಂದು ರಂಗ ರಚನೆ ಬಗ್ಗೆ ಅವರು ಮುಂದಾದರೆ ಸ್ವಾಗತ ಮಾಡುವೆ ಎಂದರು ಅವರು.

Key words: Siddaramaiah-DK shivakumar-HD kumaraswamy