ಆಶಾ ಕಾರ್ಯಕರ್ತೆಯರಿಗೆ ಸೊಸೈಟಿ ; ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಘೋಷಣೆ

 

ಶಿವಮೊಗ್ಗ, ಜೂ.01, 2020 : (www.justkannada.in news ) ಕೋವಿಡ್ 19 ಸೇರಿದಂತೆ ಹಲವು ಕಠಿಣ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರ ಸೇವೆ ಅನನ್ಯ. ಹೀಗಾಗಿ ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೊಸೈಟಿ ಮಾಡಬೇಕೆಂಬ ನಿಟ್ಟಿನಲ್ಲಿ ಚಿಂತನೆ ಇದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಿಸಿ ಮಾತನಾಡಿ, ಹೀಗಾಗಿ ಆಶಾ ಕಾರ್ಯಕರ್ತೆಯರಿಗೆ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಇಲ್ಲವೇ ಸರ್ಕಾರದ ವತಿಯಿಂದ ಜಿಲ್ಲಾವಾರು ಸೊಸೈಟಿ ತೆರೆದು 50 ಸಾವಿರ ರೂ. ವರೆಗೆ ಸಾಲ ಕೊಡಿಸುವ ವ್ಯವಸ್ಥೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರೂ ಪರಿಶೀಲನೆ ನಡೆಸಿ ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಈಗಾಗಲೇ ಸ್ವಸಹಾಯ ಸಂಘಗಳು ಹಾಗೂ ಸ್ತ್ರೀಶಕ್ತಿ ಸಂಘಗಳು ವಿವಿಧ ಮೂಲಗಳಿಂದ ಸಾಲ ಪಡೆದು ನೂರಕ್ಕೆ ನೂರರಷ್ಟು ಮರುಪಾವತಿ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಆಶಾಕಾರ್ಯಕರ್ತೆಯರಿಗೂ ಸಾಲ ವಿತರಣೆ ಮಾಡಿದರೆ ಅವರಿಂದಲೂ ನೂರಕ್ಕೆ ನೂರು ಹಣ ಮರುಪಾವತಿ ಆಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಸಹಕಾರ ಸಚಿವರು ತಿಳಿಸಿದರು.

 shivamogga  -somashekar-co.operative-support-asha-workers

ರಾಜ್ಯಾದ್ಯಂತ ಇರುವ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಅವರಿಗೆ ಏನಾದರೂ ಗೌರವ ನೀಡಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೇ ತಮ್ಮ ಕಚೇರಿಗೆ ಕರೆಸಿಕೊಂಡು ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ಚೆಕ್ ವಿತರಣೆ ಮಾಡಿದರು. ಈ ಮೊತ್ತವನ್ನು ಸಹಕಾರ ಇಲಾಖೆ ವತಿಯಿಂದ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಇಂದು ನಾನು ಸಹಕಾರ ಇಲಾಖೆಯಲ್ಲಿರಲು ಮುಖ್ಯಮಂತ್ರಿಗಳು ಕಾರಣ. ಈಗ ಸಹಕಾರ ಕ್ಷೇತ್ರದ ಹಲವು ವಿಭಾಗಗಳು ಲಾಭದಲ್ಲಿದ್ದು, ಇದರಿಂದ ಸರ್ಕಾರಸ ಕೈ ಬಲಪಡಿಸಲು ಸಹಕಾರವಾಯಿತು ಎಂದು ಹೇಳಿದರು.

ದೊಡ್ಡ ತಿಮಿಂಗಿಲಗಳಿಗೆ ತಕ್ಕ ಶಾಸ್ತಿ

ಕೆಲವು ದೊಡ್ಡ ದೊಡ್ಡ ತಿಮಿಂಗಿಲಗಳು ಸೇರಿ ಸಹಕಾರ ಸಂಸ್ಥೆಯನ್ನು ನುಂಗಿಹಾಕಲು ಹೊರಟಿವೆ. ಇಲ್ಲಿ ಸಹಕಾರ ಇರಬೇಕೇ ವಿನಹ ಅಸಹಕಾರ ಇರಕೂಡದು. ಇಂತಹ ತಿಮಿಂಗಿಲಗಳಿಗೆ ಪಾಠ ಕಲಿಸಲಾಗುವುದು. ಯಾರೂ ಸಹ ವ್ಯವಸ್ಥೆಗೆ ವಿರುದ್ಧವಾಗಿ ಹೋಗಬಾರದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಕಾಸ್ಕಾರ್ಡ್ ಬ್ಯಾಂಕ್ ಗೆ ತಾತ್ಕಾಲಿಕ ಜೀವ

ಕಾಸ್ಕಾರ್ಡ್ ಕಾರ್ಡ್ ನಿಂದ ಸಾಲ ವಸೂಲಾತಿ ಆಗದ ಕಾರಣ ಅದನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ, ಇನ್ನೂ ಒಂದು ವರ್ಷ ಸಮಯಾವಕಾಶ ಕೊಡಬೇಕೆಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡಾಗ ಅವರು ಒಪ್ಪಿದ್ದು, ಕಾಸ್ಕಾರ್ಡ್ ಬ್ಯಾಂಕ್ ಗೆ ಸದ್ಯಕ್ಕೇನೂ ಸಮಸ್ಯೆ ಇಲ್ಲ. ಹೀಗಾಗಿ ತಾತ್ಕಾಲಿಕವಾಗಿ ಜೀವ ಸಿಕ್ಕಂತಾಗಿದೆ. ಆದರೆ, ಯೋಜನೆ ಸಮರ್ಪಕವಾಗಿ ಎಲ್ಲರಿಗೂ ದಕ್ಕಬೇಕು. ಅದಕ್ಕಾಗಿ ಸಾಲವಸೂಲಾತಿ ಕ್ರಮ ಆಗಬೇಕಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಹಕಾರ ಸಚಿವರಿಗೆ ಅಭಿನಂದನೆ

 shivamogga  -somashekar-co.operative-support-asha-workers

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕೋವಿಡ್ 19 ಸಂದರ್ಭದಲ್ಲಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲೆಂದು ಜಿಲ್ಲೆಗೆ ಆಗಮಿಸಿದ ಸಹಕಾರ ಸಚಿವರಿಗೆ ನನ್ನ ಅಭಿನಂದನೆ ಎಂದು ತಿಳಿಸಿದರು.

ಕೋವಿಡ್ 19 ಪರಿಸ್ಥಿತಿ ಎದುರಿಸಲು ಸಹಕಾರ ಸಂಘಗಳ ವತಿಯಿಂದ ಶಿವಮೊಗ್ಗ ಜಿಲ್ಲೆಯೊಂದರಿಂದಲೇ 1,64,57,000 ಸಂಗ್ರಹಿಸಿ ಕೊಟ್ಟಿರುವುದು ಉತ್ತಮ ಸಾಧನೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಶೇಷ ಗೌರವಕ್ಕಾಗಿ ಸಂಸತ್ ನಲ್ಲಿ ಗಮನ ಸೆಳೆಯುವೆ

ಸಂಸದರಾದ ಬಿ.ವೈ. ರಾಘವೇಂದ್ರ ಮಾತನಾಡಿ, ಸಹಕಾರ ಇಲಾಖೆಯ ಮೂಲಕ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಲ ತುಂಬಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದರ ಹಿಂದೆ ಸೋಮಶೇಖರ್ ಅವರೂ ಸೇರಿದಂತೆ 15 ಶಾಸಕರ ಕೊಡುಗೆ ಇದೆ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ. ಅವರ ಕೊಡುಗೆಗೆ ಈ ಸಹಾಯಧನವೊಂದೇ ಸಾಲದು. ಹಾಗಾಗಿ ಅವರಿಗೆ ಉತ್ತಮ ಗೌರವ ಸಿಗಬೇಕೆಂಬ ನಿಟ್ಟಿನಲ್ಲಿ ಕರ್ನಾಟಕದ ಸಂಸದರೆಲ್ಲರೂ ಸೇರಿ ಸಂಸತ್ ಸದನದಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು.

 

key words :  shivamogga  -somashekar-co.operative-support-asha-workers